ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, (ಜೂ.26) : ಆಧುನಿಕ ಆವಿಷ್ಕಾರ ಮನುಜ ಕುಲವನ್ನು ಸರ್ವನಾಶ ಮಾಡುತ್ತಿರುವುದರಿಂದ ನೈತಿಕ ಮೌಲ್ಯ ಕಳೆದು ಹೋಗುತ್ತಿರುವುದು ದುಃಖಕರ ಸಂಗತಿ ಎಂದು ನಿವೃತ್ತ ಪ್ರಾಚಾರ್ಯರಾದ ಅಶೋಕ್‍ಕುಮಾರ್ ಸಂಗೇನಹಳ್ಳಿ ಬೇಸರ ವ್ಯಕ್ತಪಡಿಸಿದರು.
ಕಾಲೇಜು ಶಿಕ್ಷಣ ಇಲಾಖೆ, ದಾವಣಗೆರೆ ವಿಶ್ವವಿದ್ಯಾನಿಲಯ ಸಹಯೋಗದೊಂದಿಗೆ ತ.ರಾ.ಸು.ರಂಗಮಂದಿರಲ್ಲಿ ಸೋಮವಾರ ನಡೆದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರತಿಭೋತ್ಸವ ಸಮಾರಂಭ ಉದ್ಗಾಟಿಸಿ ಮಾತನಾಡಿದರು.
ಕ್ಷಣಮಾತ್ರದಲ್ಲಿ ಮೊಬೈಲ್‍ನಿಂದ ಯಾವ ವಿಚಾರವನ್ನಾದರೂ ಪಡೆಯಬಹುದು. ಹಾಗಂತ ಮೊಬೈಲ್‍ನಲ್ಲೆ ಮುಳುಗುವುದು ಸರಿಯಲ್ಲ. ದೊಡ್ಡವರಿಂದ ಹಿಡಿದು ಚಿಕ್ಕವರತನಕ ವಿಶೇಷವಾಗಿ ವಿದ್ಯಾರ್ಥಿಗಳಲ್ಲಿನ ಕ್ರೀಯಾಶೀಲತೆಯನ್ನು ಮೊಬೈಲ್ ಕಿತ್ತುಕೊಳ್ಳುತ್ತಿದೆ.
ಸಮಯಪ್ರಜ್ಞೆ, ಪ್ರಾಮಾಣಿಕತೆ, ಸತ್ಯ ಇವುಗಳು ಪ್ರತಿಯೊಬ್ಬರ ಜೀವನದಲ್ಲಿಯೂ ಇರಬೇಕಾದ ನಿಜವಾದ ಮೌಲ್ಯಗಳು. ಅಬ್ದುಲ್ ಕಲಾಂ, ಡಾ.ಎಂ.ಸಿ.ಮೋದಿ, ಲಾಲ್‍ಬಹದ್ದೂರ್‍ಶಾಸ್ತಿ, ಸರ್ ಎಂ.ವಿಶ್ವೇಶ್ವರಯ್ಯ ಇನ್ನು ಅನೇಕ ಆದರ್ಶ ವ್ಯಕ್ತಿಗಳು ಪುಂಕಾನು ಪುಂಕವಾಗಿ ಸಿಗುತ್ತಾರೆ.
ಪ್ರತಿಭೆಯನ್ನು ಗುರುತಿಸಿ ಗೌರವಿಸುವ ಪರಂಪರೆ ಇತ್ತೀಚಿನ ದಿನಗಳಲ್ಲಿ ನಾನಾ ರೀತಿಯ ಆಯಾಮಗಳನ್ನು ಪಡೆದುಕೊಂಡಿದೆ. ವಿದ್ಯಾರ್ಥಿಗಳು ಬದುಕನ್ನು ರೂಪಿಸಿಕೊಳ್ಳಲು ಇಂತಹ ಸಮಾರಂಭಗಳು ಅತ್ಯವಶ್ಯಕ ಎಂದು ಹೇಳಿದರು.
ಪ್ರತಿಭೋತ್ಸವ ಸಮಾರಂಭಗಳು ವಿದ್ಯಾರ್ಥಿಗಳು ವ್ಯಕ್ತಿತ್ವ ರೂಪಿಸಿಕೊಳ್ಳಲು ಗಟ್ಟಿಯಾದ ಬುನಾದಿ ಹಾಕುತ್ತವೆ. ಪ್ರತಿಭೆ ಅನಾವರಣಗೊಂಡಂತೆಲ್ಲಾ ಅನೇಕ ಅವಕಾಶಗಳು ತೆರೆದುಕೊಳ್ಳುತ್ತದೆ. ನಿಮ್ಮ ವ್ಯಕ್ತಿತ್ವ ಮತ್ತೊಬ್ಬರಿಗೆ ಮಾದರಿಯಂತಿರಬೇಕು ಎಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ಎನ್.ಎಸ್.ಎಸ್. ಸಂಚಾಲಕ ಡಾ.ಚನ್ನಕೇಶವ ಸಿ. ಮಾತನಾಡಿ 31-8-2014 ರಂದು ಚಿತ್ರದುರ್ಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾರಂಭವಾಯಿತು. ಕೇವಲ 54 ವಿದ್ಯಾರ್ಥಿಗಳೊಂದಿಗೆ ಆರಂಭಗೊಂಡ ಕಾಲೇಜಿನಲ್ಲಿ ಈಗ ಎಂಟು ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ.
ಸ್ವಂತ ಕಟ್ಟಡಗಳಿಲ್ಲದಿದ್ದರೂ ಇರುವ ಸೌಲಭ್ಯಗಳನ್ನು ಬಳಸಿಕೊಂಡು ಹೆಚ್ಚು ಫಲಿತಾಂಶ ರ್ಯಾಂಕ್‍ಗಳತ್ತ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹೆಜ್ಜೆ ಹಾಕುತ್ತಿರುವುದೇ ವಿದ್ಯಾರ್ಥಿನಿಯರ ದಾಖಲಾತಿ ಹೆಚ್ಚಳ ಕಾರಣ ಎಂದು ಪ್ರಶಂಶಿಸಿದರು.
19-20 ಅತಿಥಿ ಉಪನ್ಯಾಸಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಸತತ ಪರಿಶ್ರಮದಿಂದ ಅನೇಕ ಸಾಧನೆಗಳಿಗೆ ಮೆಟ್ಟಿಲಾಗಿದೆ. ಹಿಂದಿನ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿರವರು ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಿಸಿಕೊಳ್ಳುವುದಕ್ಕಾಗಿ ಮೂರು ಎಕರೆ ಜಾಗ ಮಂಜೂರು ಮಾಡಿದ್ದಾರೆಂದು ನೆನಪಿಸಿಕೊಂಡರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಗುಡ್ಡದೇಶ್ವರಪ್ಪ ಹೆಚ್. ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಮಂಜುನಾಥ ಬಿ. ಸಾಂಸ್ಕøತಿಕ ಸಮಿತಿ ಸಂಚಾಲಕಿ ಶ್ರೀಮತಿ ಲೀಲಾವತಿ ಆರ್. ಕ್ರೀಡಾ ಸಮಿತಿ ಸಂಚಾಲಕ ಶಿವಪ್ರಸಾದ್ ಆರ್. ಬಸವಣ್ಣೆಗೌಡ, ಡಾ.ಸಿದ್ದಪ್ಪ ವೇದಿಕೆಯಲ್ಲಿದ್ದರು.
ವಿದ್ಯಾ ಎಲ್.ಪ್ರಾರ್ಥಿಸಿದರು. ಡಾ.ಶಿವಣ್ಣ ಸ್ವಾಗತಿಸಿದರು. ಗ್ರಂಥಪಾಲಕ ಕುಮಾರಸ್ವಾಮಿ ಬಿ.ಹೆಚ್.ವಂದಿಸಿದರು.