ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, (ಜೂ.26) : ಕುಲಶಾಸ್ತ್ರ ಅಧ್ಯಯನ ವರದಿ ತರಿಸಿಕೊಂಡು ಈಡಿಗ ಸಮಾಜಕ್ಕೆ ಎಸ್ಟಿ.ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಬೇಡಿಕೆಯಿಟ್ಟಿದ್ದೇವೆ. ಈ ಸಂಬಂಧ ರಾಜ್ಯಾದ್ಯಂತ ಪ್ರತಿ ಜಿಲ್ಲೆಗಳಲ್ಲಿ ಚಿಂತನ ಸಭೆ ನಡೆಸುತ್ತೇವೆ. ಆ.12 ರಂದು ಚಿತ್ರದುರ್ಗದಲ್ಲಿ ಸಭೆ ನಡೆಯಲಿದೆ ಎಂದು ಡಾ.ಪ್ರಣವಾನಂದ ಸ್ವಾಮೀಜಿ ಹೇಳಿದರು.
ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಡಿಗ, ಬಿಲ್ಲವ, ನಾಮಧಾರಿ ಎಂದು ಕರೆಯುವ ನಮ್ಮ ಸಮಾಜ ರಾಜ್ಯದಲ್ಲಿ ಎಪ್ಪತ್ತು ಲಕ್ಷದಷ್ಟಿದ್ದರು ಇಲ್ಲಿಯವರೆಗೂ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. 2004 ರಲ್ಲಿ ಸೇಂದಿ ಮಾರಾಟವನ್ನು ಸರ್ಕಾರ ನಿಲ್ಲಿಸಿದ್ದರಿಂದ ಈಡಿಗ ಜನಾಂಗ ತನ್ನ ಕುಲ ಕಸುಬನ್ನೆ ಕಳೆದುಕೊಂಡು ಅತಂತ್ರವಾಗಿದೆ.
2007 ರಲ್ಲಿ ಸಾರಾಯಿ ಕೂಡ ಬಂದ್ ಆಯಿತು. ಮಂಗಳೂರು, ಉಡುಪಿಯಲ್ಲಿ ಈಗಲೂ ಸೇಂದಿಯಿದೆ. ಹಿಂದುಳಿದಿರುವ ನಮ್ಮ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಸಾಕಷ್ಟು ಹೋರಾಟ ಮಾಡಿದ್ದರ ಫಲವಾಗಿ ಹಿಂದಿನ ಸರ್ಕಾರ ಕುಲಶಾಸ್ತ್ರ ಅಧ್ಯಯನಕ್ಕೆ ಆದೇಶಿಸಿತು. ಈಗಿನ ಕಾಂಗ್ರೆಸ್ ಸರ್ಕಾರ ವರದಿ ತರಿಸಿಕೊಂಡು ಈಡಿಗ, ಬಿಲ್ಲವ, ನಾಮಧಾರಿ ಜನಾಂಗವನ್ನು ಎಸ್ಟಿ.ಗೆ ಸೇರಿಸಬೇಕೆಂದು ಒತ್ತಾಯಿಸಿದರು.
ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಜನಾಂಗದ ಏಳು ಮಂದಿಗೆ ಟಿಕೇಟ್ ನೀಡಲಾಗಿತ್ತು. ಅದರಲ್ಲಿ ನಾಲ್ವರು ಗೆದ್ದು ಶಾಸಕರುಗಳಾಗಿದ್ದಾರೆ. ಬಿ.ಕೆ.ಹರಿಪ್ರಸಾದ್, ಹರೀಶ್ ಕುಮಾರ್ ಇವರುಗಳು ಎಂ.ಎಲ್.ಸಿ.ಯಾಗಿದ್ದಾರೆ.
ಎಸ್.ಬಂಗಾರಪ್ಪನವರನ್ನು ಕಾಂಗ್ರೆಸ್ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಅದೇ ರೀತಿ ಜನಾರ್ಧನ ಪೂಜಾರಿ, ಆರ್.ಎಲ್.ಜಾಲಪ್ಪ ಇವರುಗಳಿಗೆ ಅಧಿಕಾರ ನೀಡಿದ್ದು, ಕಾಂಗ್ರೆಸ್ ಎನ್ನುವುದನ್ನು ಸ್ವಾಮೀಜಿ ಸ್ಮರಿಸಿದರು.
ದೇಶದ ಪ್ರಬುದ್ದ ರಾಜಕಾರಣಿ ಬಿ.ಕೆ.ಹರಿಪ್ರಸಾದ್‍ಗೆ ಮಂತ್ರಿ ಸ್ಥಾನ ನೀಡಬೇಕೆಂದು ರಾಹುಲ್‍ಗಾಂಧಿ, ವೇಣುಗೋಪಾಲ್, ಸುರ್ಜೆವಾಲ ಇವರುಗಳನ್ನು ಕೇಳಿದ್ದೇನೆ. ನಮ್ಮ ಬೇಡಿಕೆಗಳನ್ನು ಈಗಿನ ರಾಜ್ಯ ಸರ್ಕಾರ ಈಡೇರಿಸದಿದ್ದರೆ ಮುಂದಿನ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಕಾರ್ಪೊರೇಟ್ ಚುನಾವಣೆಗಳಲ್ಲಿ ಕಾಂಗ್ರೆಸ್‍ಗೆ ಸರಿಯಾದ ಹೊಡೆತ ಕೊಡುವುದು ಗ್ಯಾರೆಂಟಿ. ರಾಜ್ಯದ 22 ಕ್ಷೇತ್ರಗಳಲ್ಲಿ ನಮ್ಮ ಜನಾಂಗದ ಮತದಾರರು ಜಾಸ್ತಿಯಿರುವುದರಿಂದ ಸ್ವತಂತ್ರ ಪಕ್ಷ ಕಟ್ಟುವ ಚಿಂತನೆಯೂ ನಮ್ಮ ಮುಂದಿದೆ ಎಂದರು.
ಮಂಗಳೂರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಪಾರ್ಲಿಮೆಂಟ್ ಚುನಾವಣೆಗೆ ಸ್ಪರ್ಧಿಸಲು ನಮ್ಮ ಜನಾಂಗದವರಿಗೆ ಟಿಕೇಟ್ ನೀಡಬೇಕು. ವಿಧಾನಸಭೆ ಚುನಾವಣೆಯಲ್ಲಿ ಈಡಿಗ ಜನಾಂಗ ಕಾಂಗ್ರೆಸ್ ಜೊತೆ ನಿಂತಿತ್ತು. ನಮ್ಮ ಜನಾಂಗಕ್ಕೆ ಸರಿಯಾದ ಪ್ರಾತಿನಿಧ್ಯ ಸಿಗದಿರುವುದಕ್ಕೆ ಸಮುದಾಯದ ರಾಜಕಾಣಿಗಳಿಗೆ ಇಚ್ಚಾಶಕ್ತಿಯಿಲ್ಲದಿರುವುದು ಕಾರಣ. ಐ.ಎ.ಎಸ್. ಐ.ಪಿ.ಎಸ್. ಕೆ.ಎ.ಎಸ್. ತರಬೇತಿ ಕೇಂದ್ರವನ್ನು ನಮ್ಮ ಜನಾಂಗದ ಮಕ್ಕಳಿಗಾಗಿ ಸರ್ಕಾರ ತೆರೆಯಬೇಕು.
ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಬ್ರಹ್ಮಶ್ರಿ ನಾರಾಯಣಗುರು ಈಡಿಗ ನಿಗಮಕ್ಕೆ ವರ್ಷಕ್ಕೆ 250 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿ ನಿಗಮಕ್ಕೆ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ನೇಮಕ ಮಾಡಬೇಕೆಂದು ಸ್ವಾಮೀಜಿ ಆಗ್ರಹಿಸಿದರು.
ಈಡಿಗ ಜನಾಂಗದ ಗಾಯಿತ್ರಿ, ತಿಪ್ಪೇಶಣ್ಣ, ಶ್ರೀನಿವಾಸ್, ರಾಘವೇಂದ್ರ, ಮನು, ಸಂದೀಪ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.