ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, (ಜೂ.22) : ಬಡವರಿಗೆ ಅಕ್ಕಿ ಕೊಡಲು ಹೊರಟಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅನ್ನಭಾಗ್ಯ ಯೋಜನೆಗೆ ಅಡ್ಡಿಪಡಿಸುತ್ತಿರುವ ಪ್ರಧಾನಿ ಮೋದಿಗೆ ಹಸಿವಿನ ಅರಿವಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ಕಿಡಿಕಾರಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಗುರುವಾರ ಭೇಟಿ ನೀಡಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಸಚಿವ ಆರ್.ಬಿ.ತಿಮ್ಮಾಪುರ್ ವಿಧಾನಸಭೆ ಚುನಾವಣಾ ಪೂರ್ವದಲ್ಲಿಯೇ ಸಿದ್ದರಾಮಯ್ಯನವರು ಐದು ಉಚಿತ ಗ್ಯಾರೆಂಟಿಗಳನ್ನು ಘೋಷಿಸಿದರು. ಅದರಂತೆ ಪ್ರತಿ ತಿಂಗಳು ಬಡ ಕುಟುಂಬಕ್ಕೆ ಹತ್ತು ಕೆ.ಜಿ.ಅಕ್ಕಿ ಕೊಡುವುದನ್ನು ಸಹಿಸದ ಕೇಂದ್ರ ಸರ್ಕಾರ ತನ್ನ ಪಾಲಿನ ಅಕ್ಕಿ ಕೊಡಲು ತಕರಾರು ಮಾಡುತ್ತಿದೆ.
ದೇಶದ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಗರೀಭಿ ಹಠಾವೋ ಕಾರ್ಯಕ್ರಮವನ್ನು ಜಾರಿಗೆ ತಂದರು. ಅಲ್ಲಿಂದ ಇಲ್ಲಿಯತನಕ ಕಾಂಗ್ರೆಸ್ ನೂರಾರು ಯೋಜನೆಗಳನ್ನು ಬಡವರಿಗಾಗಿ ನೀಡಿರುವುದನ್ನು ಸಹಿಸಿಕೊಳ್ಳಲು ಕೋಮುವಾದಿ ಬಿಜೆಪಿ.ಗೆ ಕಷ್ಟವಾಗಿದೆ ಎಂದು ವ್ಯಂಗ್ಯವಾಡಿದರು.
ರಾಹುಲ್‍ಗಾಂಧಿರವರ ಭಾರತ್ ಜೋಡೊ ಯಾತ್ರೆ ವಿಧಾನಸಭೆ ಚುನಾವಣೆ ಮೇಲೆ ಬೀರಿದ ಪರಿಣಾಮವಾಗಿ ಮತದಾರರು ಕಾಂಗ್ರೆಸ್‍ಗೆ ಸ್ಪಷ್ಟ ಬಹುಮತ ನೀಡಿದ್ದಾರೆ. ಚಿತ್ರದುರ್ಗದಲ್ಲಿ ಎಸ್ಸಿ,ಎಸ್ಟಿ.ಸಮಾವೇಶವನ್ನು ಅದ್ದೂರಿಯಾಗಿ ನಡೆಸಿ ರಾಜ್ಯಕ್ಕೆ ಮಾದರಿಯಾಗಿದ್ದೀರಿ. ಮೂವತ್ತು ವರ್ಷಗಳಿಂದ ಚಿತ್ರದುರ್ಗದಲ್ಲಿ ಪಕ್ಷ ಅಧಿಕಾರ ಕಳೆದುಕೊಂಡಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳನ್ನು ಪಕ್ಷ ಗೆದ್ದುಕೊಂಡಿದೆ.
ಚಿತ್ರದುರ್ಗದಿಂದ ಸ್ಪರ್ಧಿಸಿದ್ದ ಯುವ ಉತ್ಸಾಹಿ ಕೆ.ಸಿ.ವೀರೇಂದ್ರಪಪ್ಪಿ ಅತ್ಯಧಿಕ ಬಹುಮತಗಳಿಂದ ಜಯಶಾಲಿಯಾಗಿದ್ದು, ಇನ್ನು ಮೂವತ್ತು ವರ್ಷಗಳ ಕಾಲ ಅಧಿಕಾರದಲ್ಲಿತ್ತಾರೆ. ಇದಕ್ಕೆ ಕ್ಷೇತ್ರದ ಕಾರ್ಯಕರ್ತರು, ಮುಖಂಡರು ಹಾಗೂ ಮತದಾರರೆ ಕಾರಣ ಎಂದು ಸ್ಮರಿಸಿದರು.
ಮುಂದೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯನ್ನು ಗೆಲ್ಲಬೇಕಿದೆ. ಬಹುಮುಖ್ಯವಾಗಿ ಪಾರ್ಲಿಮೆಂಟ್ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ನೂರಕ್ಕೆ ನೂರು ಗೆಲ್ಲುವುದು ಗ್ಯಾರೆಂಟಿ ಎಂದು ಭವಿಷ್ಯ ನುಡಿದ ಸಚಿವರು ಪ್ರಧಾನಿ ಮೋದಿ ಅದಾನಿ, ಅಂಬಾನಿ ಪರವಾಗಿರುವುದರಿಂದ ದೇಶ ದಿವಾಳಿಯತ್ತ ಸಾಗುತ್ತಿದೆ. ಕಾಂಗ್ರೆಸ್ ಪಕ್ಷದ ಬದ್ದತೆಯನ್ನು ಪ್ರಶ್ನಿಸುವ ನೈತಿಕತೆ ಬಿಜೆಪಿ.ಗಿಲ್ಲ. ಬಡವರಿಗೆ ನೀಡುವ ಅನ್ನಕ್ಕೆ ತೊಂದರೆ ಮಾಡಬೇಡಿ.
ರಾಜ್ಯ ಸರ್ಕಾರ ಘೋಷಿಸಿರುವ ಐದು ಗ್ಯಾರೆಂಟಿಗಳಿಂದ ಆಗಿರುವ ಪ್ರತಿಫಲವನ್ನು ತಿರುಚುವ ವಿರೋಧ ಪಕ್ಷಗಳಿಗೆ ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ. ಪಕ್ಷ ಸದಾ ಕಾರ್ಯಕರ್ತರ ಜೊತೆಯಲ್ಲಿರುತ್ತದೆ. ಅದಕ್ಕಾಗಿ ಮುಂಬರುವ ಎಲ್ಲಾ ಚುನಾವಣೆಗಳಿಗೆ ಈಗಿನಿಂದಲೆ ಸಿದ್ದರಾಗಿ ಎಂದು ಮನವಿ ಮಾಡಿದರು.
ನೂತನ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಮಾತನಾಡಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಭೂತಪೂರ್ವವಾಗಿ ಗೆಲ್ಲಿಸಿದ್ದೀರಿ. ಆರು ಕ್ಷೇತ್ರಗಳಲ್ಲಿ ಐದು ಕ್ಷೇತ್ರ ಕಾಂಗ್ರೆಸ್ ಪಾಲಾಗಿರುವುದು ಒಂದು ವಿಶೇಷ. ಹಿರಿಯ ರಾಜಕಾರಣಿ ಆರ್.ಬಿ.ತಿಮ್ಮಾಪುರ್‍ರವರ ಸಲಹೆ, ಮಾರ್ಗದರ್ಶನ ಕಿರಿಯರಿಗೆ ಅತ್ಯವಶ್ಯಕ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಜೆ.ಜೆ.ಹಟ್ಟಿಯ ಡಾ.ಬಿ.ತಿಪ್ಪೇಸ್ವಾಮಿ ಮಾತನಾಡಿ ಚಿತ್ರದುರ್ಗ ಪಾರ್ಲಿಮೆಂಟ್ ಕ್ಷೇತ್ರದಲ್ಲಿ ಹದಿನೆಂಟು ಲಕ್ಷ ಮತದಾರರಿದ್ದಾರೆ. ಅದರಲ್ಲಿ 8.50 ಲಕ್ಷ ಎಸ್ಸಿ. ಮತಗಳಿವೆ. ಹಾಗಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸ್ಥಳೀಯರಿಗೆ ಅವಕಾಶ ಕೊಡಿ. ಒಬ್ಬರು ಚಿಕ್ಕಮಂಗಳೂರಿನವರು. ಇನ್ನೊಬ್ಬರು ಆನೆಕಲ್‍ನವರು. ಹೊರಗಿನವರನ್ನು ಕರೆಸಿಕೊಂಡು ಇಲ್ಲಿಂದ ಸ್ಪರ್ಧಿಸಲು ಟಿಕೇಟ್ ನೀಡಬಾರದು.ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ಈ ವಿಚಾರವನ್ನು ತರಬೇಕೆಂದು ಸಚಿವ ಆರ್.ಬಿ.ತಿಮ್ಮಾಪುರ್‍ರವರಲ್ಲಿ ವಿನಂತಿಸಿದರು.
ನಿಮ್ಮ ಕಷ್ಠ-ಸುಖವನ್ನು ಕೇಳುವುದಕ್ಕಾಗಿಯೇ ಸಚಿವರು ಬಂದಿದ್ದಾರೆ. ನಿಮ್ಮ ಸಮಸ್ಯೆಗಳಿದ್ದಲ್ಲಿ ಅಹವಾಲುಗಳನ್ನು ಸಲ್ಲಿಸಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ ಐದು ವರ್ಷದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿದೆ. ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಕಾರ್ಯಕರ್ತರು ಶಕ್ತಿ ತುಂಬಿದ್ದಾರೆ.
ಜಿಲ್ಲೆಯಿಂದ ಯಾವುದೇ ಪದಾಧಿಕಾರಿಗಳು, ಕಾರ್ಯಕರ್ತರು ನಿಮ್ಮ ಬಳಿ ಬಂದರೆ ಅವರ ಸಮಸ್ಯೆಗಳನ್ನು ಕೇಳಿ ಮೊದಲ ಆದ್ಯತೆ ಕೊಡಿ ಎಂದು ಸಚಿವರ ಗಮನ ಸೆಳೆದರು.
ಉಪ ಮುಖ್ಯಮಂತ್ರಿಯನ್ನು ಸೋಲಿಸಿದ ಕೀರ್ತಿ ಆರ್.ಬಿ.ತಿಮ್ಮಾಪುರ್‍ಗೆ ಸಲ್ಲಬೇಕು. ಮುಂದಿನ ವರ್ಷ ಪಾರ್ಲಿಮೆಂಟ್ ಚುನಾವಣೆಯಿರುವುದರಿಂದ ಚಿತ್ರದುರ್ಗ ಕ್ಷೇತ್ರವನ್ನು ಈ ಬಾರಿ ಕಾಂಗ್ರೆಸ್ ವಶಪಡಿಸಿಕೊಳ್ಳಬೇಕು. ಅದಕ್ಕಾಗಿ ಕಾರ್ಯಕರ್ತರು ಸಂಘಟಿತರಾಗಿ ಎಂದು ಕೋರಿದರು.
ಮಾಜಿ ಶಾಸಕ ಎ.ವಿ.ಉಮಾಪತಿ ಮಾತನಾಡಿ ಆರ್.ಬಿ.ತಿಮ್ಮಾಪುರ್ ಸರಳ, ಸಜ್ಜನಿಕೆಯ ಹಿರಿಯ ರಾಜಕಾರಣಿ. ಯಾವ ಕಾರ್ಯಕರ್ತ ಅವರ ಬಳಿ ಹೋದರೂ ಕಡೆಗಣಿಸುವುದಿಲ್ಲ. ಈ ಬಾರಿ ಎಲ್ಲರ ಪರಿಶ್ರಮದಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಐದು ಕ್ಷೇತ್ರಗಳಲ್ಲಿ ಗೆದ್ದಿದೆ. ಕೋಮುವಾದಿ ಬಿಜೆಪಿ. ದುರಾಡಳಿತದಿಂದ ಬೇಸತ್ತು ರಾಜ್ಯದ ಜನ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆಂದು ಸಂತಸ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್, ನ್ಯಾಯವಾದಿ ಫಾತ್ಯರಾಜನ್, ಲಿಡ್ಕರ್ ಮಾಜಿ ಚೇರ್ಮನ್ ಓ.ಶಂಕರ್, ಕಾನೂನು ವಿಭಾಗದ ಅಧ್ಯಕ್ಷ ಸುದರ್ಶನ್, ಎಸ್ಟಿ.ವಿಭಾಗದ ಅಧ್ಯಕ್ಷ ಹೆಚ್.ಅಂಜಿನಪ್ಪ, ಕೆ.ಪಿ.ಸಿ.ಸಿ. ಮಹಿಳಾ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಿರಾ ಎ.ಮಕಾಂದಾರ್, ನಗರಸಭೆ ಮಾಜಿ ಉಪಾಧ್ಯಕ್ಷ ಎಂ.ಹನೀಫ್, ಎಸ್ಸಿ. ವಿಭಾಗದ ಜಿಲ್ಲಾಧ್ಯಕ್ಷ ಜಯಣ್ಣ, ಪದವೀಧರ ವಿಭಾಗದ ಮುದಸಿರ್ ನವಾಜ್, ಸೈಯದ್ ಖುದ್ದೂಸ್, ರಘು, ಕರಿಯಪ್ಪ ಪಾಲವ್ವನಹಳ್ಳಿ ಇನ್ನು ಅನೇಕರು ವೇದಿಕೆಯಲ್ಲಿದ್ದರು.