ಬೆಂಗಳೂರು: ಕಾಂಗ್ರೆಸ್ ಸರ್ಕಾರಕ್ಕೆ ಅಕ್ಕಿ ಭಾಗ್ಯದ್ದೇ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಹತ್ತು ಕೆಜಿ ಅಕ್ಕಿ ನೀಡುವುದಕ್ಕೆ ಕೇಂದ್ರ ಸರ್ಕಾರದ ಸಹಾಯವನ್ನು ಕೇಳಿದೆ. ಆದರೂ ಆ ಕಡೆಯಿಂದ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಅಕ್ಕಿಗಾಗಿ ಹರಸಾಹಸ ಪಡುತ್ತಿದೆ.
ಈ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ ಛತ್ತೀಸಗಢ ರಾಜ್ಯದೊಂದಿಗೆ ಅಕ್ಕಿ ಖರೀದಿ ಬಗ್ಗೆ ಚರ್ಚಿಸಲಾಗಿದೆ. ರಾಜ್ಯಕ್ಕೆ 2,28,000 ಮೆಟ್ರಿಕ್ ಟನ್ ಅಕ್ಕಿ ದಾಸ್ತಾನು ಬೇಕಾಗಿದೆ. ಛತ್ತೀಸಗಢ ದಿಂದ ಅಕ್ಕಿ ಖರೀದಿಸಿದರೆ ಸಾಗಾಣಿಕೆಯೂ ಸೇರಿ, ಎಫ್‌ಸಿಐಗಿಂತ ದರ ಹೆಚ್ಚಾಗುತ್ತದೆ. ಎಫ್‌ಸಿಐ ಅವರು ತಮ್ಮಲ್ಲಿ 7 ಲಕ್ಷ ಮೆಟ್ರಿ ಟನ್ ಅಕ್ಕಿ ದಾಸ್ತಾನು ಇದ್ದು, ರಾಜ್ಯಕ್ಕೆ ಸರಬರಾಜು ಮಾಡಲಾಗುವುದು ಎಂದು ಜೂನ್ 12 ರಂದು ತಿಳಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ.
ದ್ವೇಷ ರಾಜಕಾರಣ ಮಾಡುವವ ಇವರಿಗೆ ಮಾನವೀಯತೆ ಇದೆಯೇ. ಹಣ ನೀಡಿ ಅಕ್ಕಿಯನ್ನು ಪಡೆಯುತ್ತೇವೆ. ನಾವೂ ಸಹಕಾರಿ ಒಕ್ಕೂಟದಲ್ಲಿದ್ದೇವೆ ಎಂದು ಪ್ರಧಾನಿ ಮೋದಿ ಯಾವಾಗಲೂ ಹೇಳುತ್ತಾರೆ. ಹಾಗಾದರೆ ಇದೆಯಾ ಸಹಕಾರಿ ಒಕ್ಕೂಟ. ಕೇಂದ್ರ ಸರ್ಕಾರವೇ ಭತ್ತ ಬೆಳೆಯುತ್ತದೆಯೇ. ಎಲ್ಲೆಲ್ಲಿ ಭತ್ತ ಬೆಳೆಯುತ್ತಾರೋ ಅಲ್ಲಿಂದ ಅಕ್ಕಿಯನ್ನು ಪಡೆಯುತ್ತಾರೆ. ಮಾತೆತ್ತಿದರೆ ಆಹಾರ ಭದ್ರತಾ ಕಾಯ್ದೆ ಎನ್ನುವ ಕೇಂದ್ರ ಸರ್ಕಾರ, ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದ್ದು ಯು.ಪಿ.ಎ ಸರ್ಕಾರದಲ್ಲಿ ಮನ್ ಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಎನ್ನುವುದನ್ನು ಮರೆಯುತ್ತಿದೆ. ಆದರೆ ನಾವೂ ತಡವಾದರೂ ಅಕ್ಕಿಯನ್ನು ನೀಡುತ್ತೇವೆ ಎಂದಿದ್ದಾರೆ.