ನವದೆಹಲಿ: ನಾಳೆ ಅಂದ್ರೆ ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದೆ. ಪ್ರತಿ ಸಲ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಮ್ಮ ದೇಶದಲ್ಲಿಯೇ ಯೋಗ ದಿನಾಚರಣೆ ನಡೆಯುತ್ತಿತ್ತು. ಆದರೆ ಈ ಬಾರಿ ಪ್ರಧಾನಿ ಮೋದಿಯವರು ವಿಶ್ವಸಂಸ್ಥೆಯಲ್ಲಿ ಯೋಗ ದಿನಾಚರಣೆ ಮಾಡಲಿದ್ದಾರೆ.
ಪ್ರಧಾನಿ ಮೋದಿ ಅವರು ಜೂನ್ 20ರಿಂದ 24ರವರೆಗೂ ಅಮೆರಿಕಾ ಪ್ರವಾಸದಲ್ಲಿರುತ್ತಾರೆ. ಹೀಗಾಗಿ ನಾಳೆ ನಡೆಯುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ನ್ಯೂಯಾರ್ಕ್ ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಆಚರಿಸಲಿದ್ದಾರೆ. ನ್ಯೂಯಾರ್ಕ್ ನ ಸಮಯದ ಪ್ರಕಾರ ಪ್ರಧಾನಿ ಮೋದಿ ಅವರು ಬೆಳಗ್ಗೆ 8 ಗಂಟೆಯಿಂದ 9 ಗಂಟೆಯವರೆಗೂ ಯೋಗ ಮಾಡಲಿದ್ದಾರೆ. ಆದರೆ ಭಾರತದಲ್ಲಿ ಆ ಸಮಯ ಸಂಜೆ 5.30ರಿಂದ 6.30 ಗಂಟೆಯಾಗಿರಲಿದೆ.
ಯೋಗ ದಿನಾಚರಣೆಯನ್ನು ಇದೇ ಮೊದಲ ಬಾರಿಗೆ ವಿದೇಶದಲ್ಲಿ ಆಯೋಜನೆ ಮಾಡಲಾಗುತ್ತಿದೆ. ಈ ಬಾರಿಯ ಥೀಮ್ ವಸುಧೈವ ಕುಟುಂಬಕಂ ಎಂಬ ವಾಕ್ಯದಡಿ ಯೋಗಾಚರಣೆ ಮಾಡಲಾಗುತ್ತಿದೆ. ಯೋಗದ ಸಮಗ್ರ ಅಭ್ಯಾಸದ ಜಾಗೃತಿಯನ್ನು ಹರಡಲು ಜಾಗತಿಕವಾಗಿ ಗುರುತಿಸಲ್ಪಟ್ಟ ದಿನದ ಕಲ್ಪನೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2014 ರಲ್ಲಿ ವಿಶ್ವ ಸಂಸ್ಥೆಯ ಜನರಲ್ ಅಸೆಂಬ್ಲಿಯ 69 ನೇ ಅಧಿವೇಶನದಲ್ಲಿ ಮಂಡಿಸಿದರು.