ಹಿಂದೂ ಕ್ಯಾಲೆಂಡರ್ ಪ್ರಕಾರ, ಆಷಾಢ ಮಾಸವು ಜ್ಯೇಷ್ಠ ಮಾಸದ ನಂತರ ಪ್ರಾರಂಭವಾಗುತ್ತದೆ. ಈ ವರ್ಷದ ಆಷಾಢ ಮಾಸವು ಜೂನ್ 19 ಸೋಮವಾರದಿಂದ ಪ್ರಾರಂಭವಾಗುತ್ತದೆ.
ಅದೇ ಸಮಯದಲ್ಲಿ ದಕ್ಷಿಣಾಯನವೂ ಈ ತಿಂಗಳಿನಿಂದ ಪ್ರಾರಂಭವಾಗುತ್ತದೆ. ಈ ಮಾಸದ ಹುಣ್ಣಿಮೆಯಂದು ಉತ್ತರಾಷಾಢ ನಕ್ಷತ್ರವು ಕಾಣಿಸಿಕೊಳ್ಳುವುದರಿಂದ ಈ ಮಾಸವನ್ನು ಆಷಾಢ ಎಂದು ಕರೆಯಲಾಗುತ್ತದೆ. ಸೂರ್ಯನು ಮಿಥುನ ರಾಶಿಯಿಂದ ಕರ್ಕರಾಶಿಗೆ ಪ್ರವೇಶಿಸಿದಾಗ ದಕ್ಷಿಣಾಯನ ಪ್ರಾರಂಭವಾಗುತ್ತದೆ.
ದಕ್ಷಿಣಾಯನವು ಈ ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುವವರೆಗೆ ಇರುತ್ತದೆ.
ಅದರ ನಂತರ, ಉತ್ತರಾಯಾಣ ಪ್ರಾರಂಭವಾಗುತ್ತದೆ. ಈ ಮಾಸದಲ್ಲಿ ಪವಿತ್ರ ಸ್ಥಳಗಳಲ್ಲಿ ಮಾಡುವ ಸ್ನಾನ, ದಾನ ಧರ್ಮ, ಪಠಣ ಮತ್ತು ಪಾರಾಯಣ ಮಾಡುವುದರಿಂದ ಹೆಚ್ಚಿನ ಪುಣ್ಯ ಲಭಿಸುತ್ತದೆ ಎಂದು ಹಲವರು ನಂಬುತ್ತಾರೆ.
ಜಗನ್ನಾಥ ರಥಯಾತ್ರೆಯು ಆಷಾಢ ಮಾಸದ ಶುಕ್ಲ ಪಕ್ಷದ ಎರಡನೇ ದಿನದಂದು ಪ್ರಾರಂಭವಾಗುತ್ತದೆ. ಈ ಹಬ್ಬವು ಹತ್ತು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತದೆ. ಆಷಾಢ ಮಾಸದಲ್ಲಿಯೇ ತ್ರಿಮೂರ್ತಿ ಸ್ವರೂಪನಾದ ಗುರುವನ್ನು ಪೂಜಿಸುವ ದಿನವಾದ ಗುರು ಪೂರ್ಣಿಮೆ ಬರುತ್ತದೆ. ಇದನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯುತ್ತಾರೆ. ಇಷ್ಟು ವಿಶೇಷಗಳಿರುವ ಆಷಾಢ ಮಾಸದಲ್ಲಿ ಏನು ಮಾಡಬೇಕು ? ಮತ್ತು ಏನು ಮಾಡಬಾರದು ? ಮಬ ಆಸಕ್ತಿಕರ ವಿಷಯಗಳನ್ನು ತಿಳಿದುಕೊಳ್ಳೋಣ.
ಆಷಾಢ ಮಾಸದ ವಿಶೇಷಗಳು
ಆಷಾಢ ಮಾಸದ ಶುದ್ಧ ಏಕಾದಶಿಯನ್ನು ಶಯನ ಏಕಾದಶಿ ಎಂದು ಕರೆಯಲಾಗುತ್ತದೆ.
ಈ ಶುಭ ದಿನದಿಂದ ಚಾತುರ್ಮಾಸ ವ್ರತ ಆರಂಭವಾಗುತ್ತದೆ. ಈ ಅವಧಿಯಲ್ಲಿ ಎಲ್ಲಾ ಶುಭ ಕಾರ್ಯಗಳನ್ನು ನಿಲ್ಲಿಸಲಾಗುತ್ತದೆ.
ಈ ತಿಂಗಳು ಇಷ್ಟಾರ್ಥಗಳನ್ನು ಈಡೇರಿಸುವ ತಿಂಗಳು ಎಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ಭಗವಾನ್ ವಿಷ್ಣುವನ್ನು ಭಕ್ತಿಯಿಂದ ಪೂಜಿಸುವುದರಿಂದ ಒಳ್ಳೆಯ ಫಲ ಸಿಗುತ್ತದೆ ಎನ್ನುವುದು ಒಂದು ನಂಬಿಕೆ.
ಹಾಗೆಯೇ ಹರಿಯುವ ನೀರಿನಲ್ಲಿ ಅಂದರೆ ನದಿಗಳು ಮತ್ತು ಸಮುದ್ರಗಳಲ್ಲಿ ಸ್ನಾನ ಮಾಡಬೇಕು. ಈ ತಿಂಗಳಲ್ಲಿ ಅಂಗಾರಕನಿಗೆ (ಕುಜ) ಪೂಜಿಸುವುದರಿಂದ ನಿಮ್ಮ ಜೀವನದಲ್ಲಿನ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಹಾಗೆಯೇ ದುರ್ಗಾ ದೇವಿಯನ್ನು ಪೂಜಿಸುವುದರಿಂದ ಸಮೃದ್ಧಿ ಮತ್ತು ಸಂಪತ್ತು ಹೆಚ್ಚಾಗುತ್ತದೆ ಎಂಬ ನಂಬಿಕೆ.
ಶಾಸ್ತ್ರಗಳ ಪ್ರಕಾರ ಆಷಾಢ ಮಾಸದಲ್ಲಿ ಶುಭ ಕಾರ್ಯಗಳು ನಿಷಿದ್ಧ. ಅದರಲ್ಲೂ ಮದುವೆಯಂತಹ ಕಾರ್ಯಕ್ರಮಗಳನ್ನು ಮಾಡಲೇಬಾರದು. ನವವಿವಾಹಿತರು ಕೂಡ ಒಂದೆಡ ಸೇರುವುದಿಲ್ಲ. ನವವಿವಾಹಿತೆ ವಧುವನ್ನು ತವರು ಮನೆಗೆ ಕಳುಹಿಸುತ್ತಾರೆ. ಈ ಅವಧಿಯಲ್ಲಿ ಅತ್ತೆ-ಮಾವಂದಿರ ನಡುವೆ ಜಗಳವಾಗುವ ಸಂಭವವಿದೆ ಎಂದು ಹಿರಿಯರು ಹೇಳುತ್ತಾರೆ.
ಆಷಾಢ ಮಾಸವನ್ನು ಅನಾರೋಗ್ಯ ಮಾಸ ಎಂದೂ ಕರೆಯುತ್ತಾರೆ. ಏಕೆಂದರೆ ಈ ಅವಧಿಯಲ್ಲಿ ಬಲವಾದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಹೆಚ್ಚು. ಕಾಲುವೆಗಳು ಮತ್ತು ನದಿಗಳಲ್ಲಿ ಹರಿಯುವ ನೀರು ಕಲುಷಿತಗೊಳ್ಳುತ್ತದೆ. ಈ ನೀರನ್ನು ಕುಡಿಯುವುದರಿಂದ ರೋಗಗಳು ಬರುತ್ತವೆ. ಆಷಾಢದಲ್ಲಿ ಹೊಸ ನೀರು ಕುಡಿಯುವುದರಿಂದ ನೆಗಡಿ, ಜ್ವರ, ಭೇದಿ, ತಲೆನೋವು ಬರುವ ಸಾಧ್ಯತೆ ಇದೆ. ಮಹಿಳೆಯರಿಗೆ ಗರ್ಭಧರಿಸಲು ಈ ತಿಂಗಳು ಸೂಕ್ತವಲ್ಲ. ಈ ಕಾರಣಗಳಿಂದ ಆಷಾಢ ಮಾಸದಲ್ಲಿ ಕೆಲವು ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.
ಗಮನಿಸಿ: ಇಲ್ಲಿ ಒದಗಿಸಲಾದ ಎಲ್ಲಾ ಮಾಹಿತಿಗಳು ಮತ್ತು ಪರಿಹಾರಗಳು ಧಾರ್ಮಿಕ ನಂಬಿಕೆಗಳನ್ನು ಆಧರಿಸಿವೆ.
ಇವುಗಳನ್ನು ಕೇವಲ ಊಹೆಗಳ ಆಧಾರದ ಮೇಲೆ ನೀಡಲಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.