ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಜೂ.17) : ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳಾಗಿದ್ದರೂ ಸಮಾಜದಲ್ಲಿ ಅಸಮಾನತೆ, ಸಾಮಾಜಿಕ ಅನ್ಯಾಯ ತಾಂಡವವಾಡುತ್ತಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹೆಚ್.ಬಿಲ್ಲಪ್ಪ ಕಳವಳ ವ್ಯಕ್ತಪಡಿಸಿದರು.
ಎಸ್.ನಿಜಲಿಂಗಪ್ಪ ಶಿಕ್ಷಣ ಸಂಸ್ಥೆ ಹೊಸದುರ್ಗ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಚಿನ್ಮೂಲಾದ್ರಿ ರೋಟರಿ ಕ್ಲಬ್ ಚಿತ್ರದುರ್ಗ, ಅಕ್ಷರ ಮಂಟಪ ಪ್ರಕಾಶನ ಬೆಂಗಳೂರು ಮತ್ತು ಮುಕ್ತ ವೇದಿಕೆ ಚಿತ್ರದುರ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ರೋಟರಿ ಬಾಲಭವನದಲ್ಲಿ ಶನಿವಾರ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪನವರ ಅಮೃತ ಭಾರತ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಸಂವಿಧಾನದ ಆಶಯ ಈ ಕೃತಿಯಲ್ಲಿದೆ. ಸಾಮಾಜಿಕ ಅನ್ಯಾಯದ ಕಡೆ ಸಮಾಜ ಹೋಗುತ್ತಿರುವುದರಿಂದ ಪವಿತ್ರ ಗ್ರಂಥ ಸಂವಿಧಾನವನ್ನು ಪ್ರತಿಯೊಬ್ಬರು ಓದಲೇಬೇಕು. ಜಾತಿ, ಧರ್ಮ, ಲಿಂಗ, ಹುಟ್ಟಿದ ಸ್ಥಳದ ಆಧಾರದ ಮೇಲೆ ತಾರತಮ್ಯ ಮಾಡುತ್ತ ಹೋದರೆ ಸಮಾನತೆ ಯಾರಿಗೂ ಸಿಗುವುದಿಲ್ಲ. ದೇಶ, ನಾಡು, ಭಾಷೆ ಎಲ್ಲರಿಗೂ ಸಂಬಂಧಪಟ್ಟಿದ್ದು, ಆಲೋಚನಾ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಆಹಾರ ಸ್ವಾತಂತ್ರ್ಯ ಅವರವರ ಸ್ವಂತ ವಿವೇಚನೆಗೆ ಬಿಟ್ಟಿದ್ದು, ಮತ್ತೊಬ್ಬರ ಹಕ್ಕಿಗೆ ಚ್ಯುತಿ ಬಾರದಂತೆ ಬದುಕುವುದೆ ಸಮಾನತೆ ಎನ್ನುವುದು ಸಂವಿಧಾನದಲ್ಲಿ ಉಲ್ಲೇಖವಾಗಿದೆ ಎಂದು ಹೇಳಿದರು.
ಅಮೃತ ಭಾರತ ಕೃತಿಯಲ್ಲಿ ಅಭಿವೃದ್ದಿ, ಪರಿಸರ, ಶಿಕ್ಷಣ, ಆರ್ಥಿಕತೆಗೆ ಸಂಬಂಧಿಸಿದಂತೆ ಪ್ರಮುಖ ವಿಚಾರಗಳುಳ್ಳ ಹನ್ನೊಂದು ಅಧ್ಯಾಯಗಳಿವೆ. ಸಮಾಜದಲ್ಲಿ ಅಗಾಧವಾದ ಬದಲಾವಣೆ ತರುವ ಶಕ್ತಿ ಶಿಕ್ಷಣಕ್ಕಿದೆ. ಹಾಗಾಗಿ ಎಲ್ಲರೂ ಶಿಕ್ಷಣವಂತರಾಗಬೇಕು. ಯಾವುದೇ ವೃತ್ತಿಯನ್ನು ಜನ ಆಯ್ಕೆ ಮಾಡಿಕೊಳ್ಳಲಿ. ಸಮಾಜಮುಖಿಯಾಗಿರಬೇಕಾದರೆ ಸ್ವಾರ್ಥಿಗಳಾಗಬಾರದು. ತ್ಯಾಗ, ಸೇವೆ ಇವುಗಳು ರಾಷ್ಟ್ರೀಯ ಆದರ್ಶಗಳು. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೇಳಿರುವಂತೆ ಶಿಕ್ಷಣ, ಸಂಘಟನೆ, ಹೋರಾಟದಿಂದ ಮಾತ್ರ ಹಕ್ಕುಗಳನ್ನು ಪಡೆಯಲು ಸಾಧ್ಯ. ಮಾನವ ತನ್ನ ದುರಾಸೆಗೆ ಗುಡ್ಡದ ಬುಡಕ್ಕೂ ಕೈಹಾಕಿರುವುದರಿಂದ ಪರಿಸರ ನಾಶವಾಗುತ್ತಿದೆ. ಇದೆ ಪರಿಸ್ಥಿತಿ ಮುಂದುವರೆದರೆ ಉಸಿರಾಡಲು ಶುದ್ದವಾದ ಗಾಳಿ ಸಿಗುವುದಿಲ್ಲ. ಪರಿಸರ ಮಣ್ಣು ವಿಷಮಯವಾಗಿದೆ. ಪ್ರಕೃತಿ ಎಲ್ಲರ ಸಂತೋಷದ ಮೂಲ. ಜನತೆಯನ್ನು ಮಾನವ ಸಂಪನ್ಮೂಲವನ್ನಾಗಿಸುವುದೇ ಅಭಿವೃದ್ದಿ ಎನ್ನುವುದನ್ನು ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಅಮೃತ ಭಾರತ ಕೃತಿಯಲ್ಲಿ ಉಲ್ಲೇಖಿಸಿದ್ದಾರೆಂದು ಮೆಚ್ಚುಗೆಯ ಮಾತುಗಳನ್ನಾಡಿದರು.
ಚಿಂತಕ ಬೆಂಗಳೂರಿನ ಡಾ.ಹೆಚ್.ವಿ.ವಾಸು ಮಾತನಾಡಿ ಕರ್ನಾಟಕದಲ್ಲಿ ವೈಚಾರಿಕ ಮತ್ತು ಸಾಹಿತ್ಯಕ್ಕಿರುವ ಕೊರತೆಯನ್ನು ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಅಮೃತ ಭಾರತ ಕೃತಿಯ ಮೂಲಕ ನೀಗಿಸಿದ್ದಾರೆ. ಅರ್ಥಶಾಸ್ತ್ರವನ್ನು ರಾಜ್ಯದಲ್ಲಿ ಜನರಿಗೆ ಹೇಳುವವರು ಇಲ್ಲದಂತಾಗಿರುವ ಇಂದಿನ ಪರಿಸ್ಥಿತಿಯಲ್ಲಿ ಈ ಕೃತಿಯನ್ನು ಓದಿದರೆ ಸರಳವಾಗಿ ಅರ್ಥವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಹಿತಿಗಳು ಅರ್ಥಶಾಸ್ತ್ರದ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ಜಿ.ಎಸ್.ಟಿ. ನೋಟು ಅಮಾನ್ಯೀಕರಣ ಇನ್ನು ಹಲವು ಪ್ರಮುಖ ಅಂಶಗಳ ಬಗ್ಗೆ ಜನಸಾಮಾನ್ಯರಿಗೆ ಮನ ಮುಟ್ಟುವ ರೀತಿಯಲ್ಲಿ ಹೇಳುವವರಿಲ್ಲದಂತಾಗಿದೆ. ಹಸಿರು ಕ್ರಾಂತಿ, ಕೋವಿಡ್‍ಗೆ ಸಂಬಂಧಿಸಿದಂತೆ ಅನೇಕ ವಿಚಾರಗಳ ತಣ್ಣನೆ ಧ್ವನಿ ಕೃತಿಯಲ್ಲಿದೆ ಎಂದು ಗುಣಗಾನ ಮಾಡಿದರು.
ಚಳ್ಳಕೆರೆಯ ಸಾಹಿತಿ ಡಾ.ಸಿ.ಶಿವಲಿಂಗಪ್ಪ ಮೀರಾಸಾಬಿಹಳ್ಳಿ ಆಶಯ ನುಡಿಗಳನ್ನಾಡುತ್ತ ಆರ್ಥಿಕ ಅಭಿವೃದ್ದಿ ಜೊತೆ ಮಾನವ ಅಭಿವೃದ್ದಿ ಸಮತೋಲನವಾದಾಗ ಜಾಗತಿಕ ಅಭಿವೃದ್ದಿ ಸಾಧ್ಯ ಎನ್ನುವುದನ್ನು ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಅಮೃತ ಭಾರತ ಕೃತಿಯಲ್ಲಿ ಪ್ರತಿಪಾದಿಸಿದ್ದಾರೆ. ಹಾಗಾಗಿ ಇವರೊಬ್ಬ ದೇಸಿ ಪ್ರಜ್ಞೆಯುಳ್ಳ ಆರ್ಥಿಕ ಚಿಂತಕರು ಎಂದು ಬಣ್ಣಿಸಿದರು.
ಆರ್ಥಿಕ ತಜ್ಞರಿಗೆ ಸಾಮಾಜಿಕ ಜವಾಬ್ದಾರಿಯಿದೆ. ಬಂಡವಾಳಶಾಹಿಗಳ 39 ಲಕ್ಷ ಕೋಟಿ ರೂ.ಗಳ ಸಾಲ ಮನ್ನ ಮಾಡಿರುವ ಕೇಂದ್ರ ಸರ್ಕಾರಕ್ಕೆ ರೈತರ ಏಳು ಲಕ್ಷ ಕೋಟಿ ರೂ.ಸಾಲ ಮನ್ನ ಮಾಡಲು ಏಕೆ ಆಗುತ್ತಿಲ್ಲ ಎನ್ನುವ ಗಂಭೀರವಾದ ಆರ್ಥಿಕ ನೋಟ ಈ ಕೃತಿಯಲ್ಲಿದೆ. ಮುಖಪುಟ ಕೃತಿಯ ಎಲ್ಲಾ ಆಶಯಗಳಿಗೆ ಪ್ರತಿಬಿಂಬವಾಗಿದೆ. ರಾಜ್ಯ ಸರ್ಕಾರ ಇಂತಹವರನ್ನು ಗುರುತಿಸಿ ಆರ್ಥಿಕ ತಜ್ಞರನ್ನಾಗಿ ನೇಮಕ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.
ಕೃತಿ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಮತ್ತು ಅನುವಾದಕ ಪ್ರೊ.ಜಿ.ಶರಣಪ್ಪ ಮಾತನಾಡಿ ಶಾಲಾ-ಕಾಲೇಜು, ಪದವಿ, ವಿಶ್ವವಿದ್ಯಾನಿಲಯಗಳ ಗ್ರಂಥ ಭಂಡಾರಗಳಲ್ಲಿ ಸಂಗ್ರಹಿಸಿಡಬಹುದಾದಂತ ಯೋಗ್ಯವಾದ ಕೃತಿ ಅಮೃತ ಭಾರತ. ಬುದ್ದ, ಹನ್ನೆರಡನೆ ಶತಮಾನದ ವಚನಕಾರರು, ಅಂಬೇಡ್ಕರ್, ಲೋಹಿಯಾ, ಅಮಥ್ರ್ಯಸೇನ್ ವಿಚಾರಗಳು ಕೃತಿಯಲ್ಲಿವೆ ಎಂದು ಹೇಳಿದರು.
ಕೃತಿಕಾರ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಮಾತನಾಡುತ್ತ ಸಾಹಿತ್ಯ ವಿಮರ್ಶವಲಯಗಳಲ್ಲಿ ಗಂಟು ರೋಗಗಳು ಜಾಸ್ತಿಯಿರುವುದರಿಂದ ಪುಸ್ತಕಗಳನ್ನು ಬಿಡುಗಡೆಗೊಳಿಸಿಕೊಳ್ಳಲು ಸ್ವಯಂ ಜಾಹಿರಾತುಗಳನ್ನು ಮಾಡಿಕೊಳ್ಳಬೇಕಾದಂತ ಹೀನಾಯ ಪರಿಸ್ಥಿತಿ ಎದುರಾಗಿರುವುದು ನೋವಿನ ಸಂಗತಿ. ಅದಕ್ಕಾಗಿ ಬರಹಗಾರನಿಗೆ ಗುಣಾತ್ಮಕ ಪ್ರೇರಣೆ ತುಂಬಬೇಕಾಗಿದೆ. ಮೌಲ್ಯಯುತ ದಾರಿಯಲ್ಲಿ ಮಾಧ್ಯಮಗಳನ್ನು ತಗೆದುಕೊಂಡು ಹೋಗುವುದು ಸವಾಲಿನ ಕೆಲಸವಾಗಿದೆ ಎಂದು ವಿಷಾಧಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ, ಚಿನ್ಮುಲಾದ್ರಿ ರೋಟರಿ ಕ್ಲಬ್ ಅಧ್ಯಕ್ಷ ಈ.ಅರುಣ್‍ಕುಮಾರ್, ಕಾರ್ಯದರ್ಶಿ ಶ್ರೀನಿವಾಸ್ ಮಳಲಿ, ಜಿಲ್ಲಾ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಡಿ.ಕೆಂಚವೀರಪ್ಪ, ಮುಕ್ತ ವೇದಿಕೆ ಸಂಚಾಲಕ ಪ್ರೊ.ಟಿ.ಹೆಚ್.ಕೃಷ್ಣಮೂರ್ತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಕೆ.ಪಿ.ಎಂ.ಗಣೇಶಯ್ಯ ವೇದಿಕೆಯಲ್ಲಿದ್ದರು.
ಕೋಕಿಲ ರುದ್ರಮೂರ್ತಿ ಪ್ರಾರ್ಥಿಸಿದರು. ನ್ಯಾಯವಾದಿ ಕೆ.ಎಸ್.ಕಲ್ಮಠ್ ಸ್ವಾಗತಿಸಿದರು. ಸಿ.ಬಿ.ಶೈಲ ನಿರೂಪಿಸಿದರು.