ವರದಿ ಮತ್ತು ಫೋಟೋ ಕೃಪೆ
ಶ್ರೀಧರ ಡಿ. ರಾಮಚಂದ್ರಪ್ಪ, ತುರುವನೂರು
ಮೊ : 7899789545
ಚಿತ್ರದುರ್ಗ, (ಜೂ.16) : ರಾಜ್ಯದಲ್ಲಿ ಕೆಲವೆಡೆ ಮಳೆಯಾಗುತ್ತಿದ್ದರೂ ಮುಂಗಾರು ಹಂಗಾಮು ನಿರೀಕ್ಷೆಯಂತೆ ಆಗಿಲ್ಲ. ಇನ್ನು ಚಿತ್ರದುರ್ಗ ಜಿಲ್ಲೆಯಲ್ಲೂ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದ ಕಾರಣ ರೈತರ ಉಳುಮೆ ಪ್ರಮಾಣ ಕೂಡ ಕುಂಠಿತಗೊಂಡಿದೆ.
ಗುಡುಗು ಸಿಡಿಲಿನ ಆರ್ಭಟದೊಂದಿಗೆ ಮುಂಗಾರು ಮಳೆ ಪ್ರವೇಶಿಸುವುದು ವಾಡಿಕೆ. ಆದರೆ ಈ ಬಾರಿ ಮಳೆ ಸುರಿಯದಿರುವುದು ರೈತರನ್ನು ಚಿಂತೆಗೆ ದೂಡಿದೆ. ತಾಲ್ಲೂಕಿನ ತುರುವನೂರು ಹೋಬಳಿಯಲ್ಲಿ ಮುಂಗಾರು ಹಂಗಾಮು ಕೈಕೊಟ್ಟಿದ್ದು, ಈ ಭಾಗದ ರೈತ ದಿನ ಬೆಳಗಾದರೆ ಮುಗಿಲಿನತ್ತ ನೋಡುವ ಹಾಗಿದೆ.
ಭೂಮಿ ಹದ : ಮಳೆ ಕೊರತೆಯ ನಡುವೆಯೂ ರೈತರು ಬಿತ್ತನೆಗೆ ಜಮೀನು ಹದಗೊಳಿಸುತ್ತಿದ್ದಾರೆ. ಆದರೆ ಬಿತ್ತನೆಗೆ ಬೇಕಾದ ಬೀಜ-ಗೊಬ್ಬರ ಖರೀದಿಸಲು ಈ ಭಾಗದ ರೈತ ನಿರುತ್ಸಾಹ ತೋರಿದ್ದಾನೆ. ಈ ಹೋಬಳಿಯಲ್ಲಿ ಬಿತ್ತನೆ ಕಾರ್ಯ ಶೇಕಡಾ 25 ರಷ್ಟು ಮಾತ್ರ ಆಗಿದೆ.
ಜೂನ್ ಮಧ್ಯ ಭಾಗ ಎರಡನೇ ವಾರಕ್ಕೆ ಕಾಲಿಟ್ಟಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ರೈತರು ಬೀಜ – ಗೊಬ್ಬರ ಕೊಂಡುಕೊಳ್ಳುವುದರಲ್ಲಿ ಹಿಂದೇಟು ಹಾಕುತ್ತಿದ್ದಾರೆ.
ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ 2023-24 ನೇ ಸಾಲಿನ ಪ್ರಸಕ್ತ ವರ್ಷದಲ್ಲಿ ಬಿತ್ತನೆ ಬೀಜಗಳು ಸಮರ್ಪಕವಾಗಿ ಬಂದಿದ್ದು
ಈ ಭಾಗದ ಬಹುತೇಕ ರೈತರು ಬೆಳೆಯುವ ಶೇಂಗಾ ಸುಮಾರು 585 ಕ್ವಿಂಟಾಲ್ ಸರಬರಾಜಾಗಿದ್ದು, ಇದುವರೆಗೂ (ಜೂನ್ 15ಕ್ಕೆ) ಕೇವಲ 100 ಕ್ವಿಂಟಾಲ್ ಮಾತ್ರ ರೈತರಿಂದ ಖರೀದಿಸಿದ್ದಾರೆ. ತೊಗರಿ ಬೀಜ 13 ಕ್ವಿಂಟಾಲ್ ದಾಸ್ತಾನು ಬಂದಿದ್ದು, ಖರೀದಿಯಾಗಿಲ್ಲ. ದ್ವಿದಳ ಧಾನ್ಯ ಸೋಯಾಬೀನ್ 30 ಕ್ವಿಂಟಾಲ್ ದಾಸ್ತಾನಿದ್ದು, ಖರೀದಿಯಾಗಿಲ್ಲ.
ಮತ್ತೊಂದು ವಾಣಿಜ್ಯ ಬೆಳೆ ಮೆಕ್ಕೆಜೋಳ ಸುಮಾರು 95 ಕ್ವಿಂಟಾಲ್ ಸರ್ಕಾರದಿಂದ ಬಂದಿದ್ದು,7 ಕ್ವಿಂಟಾಲ್ ಮಾತ್ರ ರೈತರಿಂದ ಖರೀದಿಯಾಗಿದೆ. ಸೂರ್ಯಕಾಂತಿ 26 ಕ್ವಿಂಟಾಲ್ ದಾಸ್ತಾನಿದ್ದು, ಖರೀದಿಯಾಗಿಲ್ಲ. ಮಳೆಯಾಗದ ಹಿನ್ನೆಲೆಯಲ್ಲಿ ರೈತರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ತುರುವನೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ನಾಗರಾಜ್ ಅವರು ಪ್ರತಿಕ್ರಿಯಿಸಿದ್ದಾರೆ.
ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ದಾಸ್ತಾನಿರುವ ಬಿತ್ತನೆ ಬೀಜಗಳು ರೈತರಿಂದ ಖರೀದಿಯಾಗುವ ಆಶಾಭಾವನೆಯನ್ನು ಕೃಷಿ ಅಧಿಕಾರಿ ನಾಗರಾಜ್ ಸುದ್ದಿಒನ್ ಗೆ ತಿಳಿಸಿದ್ದಾರೆ.