ಬೆಂಗಳೂರು: ನಿನ್ನೆ ಗಾಂಧಿ ಭವನದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಆರ್ ಬೊಮ್ಮಾಯಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಆಚರಣೆ ಮಾಡಲಾಗಿತ್ತು. ಈ ವೇಳೆ ಬಸವರಾಜ್ ಬೊಮ್ಮಾಯಿ ಅವರು ತಮ್ಮ ಶಾಲೆಯ ದಿನಗಳಲ್ಲಿ ತಂದೆಯವರು ಹೇಗಿದ್ದರು ಎಂಬುದನ್ನು ನೆನೆಸಿಕೊಂಡು ಕಣ್ಣೀರು ಹಾಕಿದ್ದಾರೆ.
“ಎಲ್ಲರನ್ನು ಸಮಾನವಾಗಿ ನೋಡುವಂತ ಅಪ್ಪ ಆಗಿದ್ದರು. ಮೊದಲನೇ ದಿನ ನನ್ನನ್ನು ಕೈ ಹಿಡಿದುಕೊಂಡು ಶಾಲೆಗೆ ಕರೆದುಕೊಂಡು ಹೋಗಿದ್ದರು. ನಾವೂ ಚಿಕ್ಕವರಿದ್ದಾಗಲೇ ಸಮಾನತೆ ಅಂದ್ರೆ ಏನು ಅನ್ನೋದನ್ನ ಕಲಿಸುತ್ತಿದ್ದರು. ಎಲ್ಲರಿಗೂ ಊಟ ಬಡಿಸಿದ ಬಳಿಕವಷ್ಟೇ ಅವರು ಊಟಕ್ಕೆ ಕೂರುತ್ತಿದ್ದರು. ಅಪ್ಪನ ನೆನಪು ಅಚ್ಚಳಿಯದೆ ಉಳಿದಿದೆ.
ಎಸ್ ಎಂ ಕೃಷ್ಣ, ಯಡಿಯೂರಪ್ಪ ಮತ್ತು ನಮ್ಮ ತಂದೆ ಯಾವುದೇ ಗಾಡ್ ಫಾದರ್ ಇಲ್ಲದೆ ಬೆಳೆದವರು. ಆ ರೀತಿ ಬೆಳೆದಾಗ ಹೋರಾಟದ ಮನೋಭಾವ ಮೂಡುತ್ತೆ. ನನ್ನನ್ನು ಗುರುತಿಸಿ ಶಕ್ತಿ ತುಂಬಿದವರು ಯಡಿಯೂರಪ್ಪ. ಅವರನ್ನು ನಾನು ತಂದೆ ಸಮಾನವಾಗಿಯೇ ಕಾಣುತ್ತೇನೆ. ನಾನು ಇಂದು ಏನೇ ಆಗಿದ್ದರು ಅದಕ್ಕೆಲ್ಲಾ ಕಾರಣ ಯಡಿಯೂರಪ್ಪ ಅವರೇ ಎಂದು ಮನಸಾರೆ ಕೊಂಡಾಡಿದ್ದಾರೆ.