ಹೊಳಲ್ಕೆರೆ, (ಜೂ.3) : ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಲು ಸಂಘಟಿತ ಹೋರಾಟ ಮಾಡಿದ ಎಲ್ಲ ಕಾರ್ಯಕರ್ತರಿಗೂ ಹಾಗೂ ಬಿಜೆಪಿಯ ಭೀತಿ, ಆಮಿಷ ಮಧ್ಯೆ ಬಹುದೊಡ್ಡ ಸಂಖ್ಯೆಯಲ್ಲಿ ಮತಚಲಾಯಿಸಿದ ಮತದಾರರಿಗೆ ಸದಾ ಅಭಾರಿಯಾಗಿರುವೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ಪಟ್ಟದ ಗಣಪತಿ ಕಲ್ಯಾಣಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಕಾಂಗ್ರೆಸ್ ಸಂಘಟನಾ ಸಭೆಯಲ್ಲಿ ಮಾತನಾಡಿದರು.
ಚುನಾವಣೆಯಲ್ಲಿ ಸೋಲು ಆಗಿದೆ. ಆ ಸೋಲಿಗೆ ಕಾರಣ ಏನು ಎಂಬುವುದು ಕಂಡುಕೊಳ್ಳಬೇಕು. ಸೋಲಿಗೆ ಹೆದುರುವುದಿಲ್ಲ. ಏಳು ಬಾರಿ ಚುನಾವಣೆಯಲ್ಲಿ ಐದರಲ್ಲಿ ಸೋತರು ಎಂದಿಗೂ ಎದೆಗುಂದಿಲ್ಲ ಎಂದರು.
ಜನರ ಕಷ್ಟಸುಖಗಳಿಗೆ ಸ್ಪಂದಿಸಿ ಪ್ರತಿ ಬೂತ್‍ಗಳಲ್ಲಿ ಹೆಚ್ಚಿನ ಮತ ಹಾಕಿಸುವವರು ನಾಯಕರಾಗುತ್ತಾರೆ.ಚುನಾವಣೆಯಲ್ಲಿ ವಿರೋಧಗಳನ್ನು ಮಾಡಿಕೊಳ್ಳದೆ ಎಲ್ಲರ ಜೊತೆಗೆ ಪ್ರೀತಿ ವಿಶ್ವಾಸ ದಿಂದ ಬೆಂಬಲಿಸಿದ್ದಾರೆ. ನಾನು ಕೇವಲ ಒಂದು ಜಾತಿಗೆ ಸೀಮಿತನಾದವನಲ್ಲ. ಎಲ್ಲರಿಗೂ ನಾಯಕ. ಎಲ್ಲಾ ಜಾತಿ ಧರ್ಮದ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ಸುಳ್ಳಿಗೆ ಇನ್ನೋಂದು ಹೆಸರೆ ಎಂ.ಚಂದ್ರಪ್ಪ. ಗಂಗಾ ಕಲ್ಯಾಣ ಯೋಜನೆಯ ಸೌಲಭ್ಯ ಜನರಿಗೆ ನೀಡಿಲ್ಲ, ಮೋಟರ್ ಪಂಪ್‍ಸೆಟ್ ನೀಡಿಲ್ಲ. ಐದು ವರ್ಷ ಕ್ಷೇತ್ರದ ಅಭಿವೃದ್ಧಿ ಮರೆತು ಲೂಟಿ ಮಾಡಿದ ಬಿಜೆಪಿಯ ಚಂದ್ರಪ್ಪ ಮಾಡುವ ಕುತಂತ್ರಗಳನ್ನು ನಾವ್ಯಾರು ಕಾಂಗ್ರೆಸ್ ಮುಖಂಡರು ಮಾಡಲಿಲ್ಲ. ಬಸವಣ್ಣ, ಅಂಬೇಡ್ಕರ್ ಚಿಂತನೆಗೆ ಗೌರವಿಸುವ ನಾವು ಎಂದಿಗೂ ವಾಮಮಾರ್ಗದಲ್ಲಿ ಸಾಗುವುದಿಲ್ಲ ಎಂದರು.
ಕೆಲ ಕಾಂಗ್ರೆಸ್ ಪಕ್ಷದ ಬೆರಳೆಣಿಕೆ ಕಾರ್ಯಕರ್ತರು ಬಿಜೆಪಿ ಸೇರಿ ಕುತಂತ್ರ ನಡೆಸಿದರು. ಕತ್ತಲು ರಾತ್ರಿಯಲ್ಲಿ ನಡೆದ ಕುತಂತ್ರದಿಂದ ಸೋಲು ಆಗಿದೆ. ಸೊತರು ಹೋರಾಟಗಾರ, ಗೆದ್ದರು ಹೋರಾಟಗಾರ ನಾನು. ಚಂದ್ರಪ್ಪನ ವಾಮಮಾರ್ಗ, ಕುತಂತ್ರ, ವಂಚನೆಗೆ ಮುಗ್ಧ ಜನತೆ ಮತ್ತು ಮತದಾರರು ಭೀತಿಗೆ ಒಳಗಾದರು.ಈ ಸೋಲು ಕಾರ್ಯಕರ್ತರು, ಕ್ಷೇತ್ರದ ಅಭಿವೃದ್ಧಿಗೆ ಆದ ನಷ್ಟ ಎಂದು ಕ್ಷೇತ್ರದ ನೂರಾರು ಜನರು ಈಗಲೂ ನನಗೆ ಫೋನ್ ಕರೆ ಮಾಡಿ ಪಶ್ಚಾತ್ತಾಪ ಪಡುತ್ತಿದ್ದಾರೆ. ಜನರ ಈ ಪ್ರೀತಿಯೇ ನನಗೆ ಸಾಕು ಎಂದರು.
ನನ್ನ ಅವಧಿಯಲ್ಲಿ ಆದ ಅಭಿವೃದ್ಧಿ ಇಂದಿಗೂ ಆಗಿಲ್ಲ. ಆದರೂ ಸುಳ್ಳುಗಳ ಮೂಲಕ ಜನರನ್ನು ಚಂದ್ರಪ್ಪ ವಂಚಿಸುತ್ತಿದ್ದಾರೆ.ಚಂದ್ರಪ್ಪ, ಆತನ ಕುಟುಂಬದ ರೀತಿ ಮೋಸ, ತಂತ್ರ ಮಾಡಲು ಅವಕಾಶ ಇತ್ತು. ಆದರೆ, ಅಂತಹ ನೀಚತನ ಮಾಡಿ ಗೆಲ್ಲುವುದು ನನಗೆ ಬೇಕಿಲ್ಲ. ಮುಂದೆಯೂ ಮಾಡುವುದಿಲ್ಲ.ಅದರಲ್ಲೂ ಬಸವಣ್ಣನ ಚಿಂತನೆ ಪ್ರಸಾರ ಮಾಡುವ ಹೊಳಲ್ಕೆರೆ ಕ್ಷೇತ್ರದಲ್ಲಿ ವಾಮಮಾರ್ಗ ಮಾಡುವುದು ಅತ್ಯಂತ ಹೇಯ ಕೃತ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕರ್ತರು, ಮುಖಂಡರು ಒಮ್ಮತದಿಂದ ಕೆಲಸ ಮಾಡಿದ್ರು. ಕೆಲವರು ನಡೆಸಿದ ಕುತಂತ್ರದ ಮಾಹಿತಿ ನನಗೆ ಇದೆ. ನಿಷ್ಟಾವಂತರು, ಅವಕಾಶ ಇಲ್ಲದವನಿಗೆ ಅವಕಾಶ ನೀಡಿ ಉನ್ನತ ಮಟ್ಟಕ್ಕೆ ತರುವುದೆ ರಾಜಕೀಯ. ಈ ಕೆಲಸವನ್ನು ಮಾಡುತ್ತೇನೆ. ಒಳ್ಳೆಯತನ ಬೆಳಕಿಗೆ ಬರುವುದು ಸ್ವಲ್ಪ ಕಷ್ಟ, ಆದ್ರೆ ಸುಳ್ಳು ಬೇಗನೇ ಮುನ್ನೇಲೆಗೆ ಬರುತ್ತದೆ. ಅದೇ ರೀತಿ ಕ್ಷೇತ್ರದಲ್ಲಿ ಆಗಿದೆ ಎಂದು ತಮ್ಮ ಸೋಲಿನ ಕುರಿತು ವಿಮರ್ಶಿಸಿದರು.
ಪಕ್ಷಕ್ಕೆ ದ್ರೋಹ ಮಾಡಿದವರು ಹೆತ್ತ ತಾಯಿಗೆ ದ್ರೋಹಮಾಡಿದ ಹಾಗೆಯೇ. ನಮ್ಮ ಪಕ್ಷದ ಕೆಲವರು ಚಂದ್ರಪ್ಪನ ಹಣಕ್ಕೆ ಬಾಯ್ತೆರೆದರು. ಅವರೊಂದಿಗೆ ಶಾಮೀಲಾದರು. ಜೊತೆಗೆ ದೇವರ ಫೋಟೋ ಮತದಾರರಿಗೆ ಕೊಟ್ಟು ಭೀತಿ ಸೃಷ್ಟಿಸಿದರು. ಹಣದ ಹೊಳೆಯನ್ನೇ ಹರಿಸಿದರು. ಇದೆಲ್ಲದರ ಪರಿಣಾಮ ಸೋಲು ಆಗಿದೆ. ಆದರೆ ಯಾರೂ ಎದೆಗುಂದಬೇಕಿಲ್ಲ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ. ಕ್ಷೇತ್ರದ ಅಭಿವೃದ್ಧಿಗೆ ಒಟ್ಟುಗೂಡಿ ಶ್ರಮಿಸೋಣಾ ಎಂದರು.
ಪಕ್ಷವಿರೋಧಿ ಕೆಲಸ ಮಾಡಿದವರಿಗೆ ತಕ್ಕ ಪಾಠ ಕಲಿಸಬೇಕು. ಬೇರೆ ಪಾರ್ಟಿಯಿಂದ ಬಂದ ಕಾರ್ಯಕರ್ತರು, ಮುಖಂಡರು ಯಾರು ಕೂಡ ಧೃತಿಗೇಡಬಾರದು. ನಿಮ್ಮನೊಡನೆ ನಾನಿರುವೆ ಎಂದು ಆತ್ಮಸ್ಥೈರ್ಯದ ಮಾತು ಹೇಳಿದರು.
ತಾಲೂಕು ಹಾಗೂ ಜಿ.ಪಂ ಚುನಾವಣೆಗೆ ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು. ಕ್ಷೇತ್ರದ ಎಲ್ಲ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲುವ ರೀತಿ ತಂತ್ರಗಾರಿಕೆ ರೂಪಿಸೋಣಾ ಎಂದರು.
ಇದೀಗ ಇಡೀ ದೇಶವೇ ನಮ್ಮ ರಾಜ್ಯದತ್ತ ತಿರುಗಿ ನೋಡುತ್ತ ಇದೆ. ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಈಡೇರಿಸಿದೆ. ಇದು ಬೇರೆ ರಾಜ್ಯದ ಹಾಗೂ ಲೋಕಸಭಾ ಚುನಾವಣೆಲ್ಲಿ ಪಕ್ಷದ ಗೆಲುವಿಗೆ ಭದ್ರ ಬುನಾದಿ ಆಗಿದೆ. ನುಡಿದಂತೆ ನಡೆಯುವ ಏಕೈಕ ಪಕ್ಷ ಕಾಂಗ್ರೆಸ್ ಎಂಬ ನಂಬಿಕೆ ಜನರಲ್ಲಿ ಮೂಡಿದೆ ಎಂದರು.
ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ, ಪಕ್ಷದ ಹಿರಿಯ ಮುಖಂಡ ಕಾಟೀಹಳ್ಳಿ ಶಿವಕುಮಾರ್ ಮಾತನಾಡಿ, 2023 ಚುನಾವಣೆ ಮೋಸದ ಚುನಾವಣೆ. ಈ ಹಿಂದೆ ಯಾವತ್ತು ನಡೆದಿರಲಿಲ್ಲ. ಕೊನೆಯ ಎರಡು ದಿನಗಳಲ್ಲಿ ಚುನಾವಣೆ ಬದಲಾವಣೆಯಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಬಂದಿದ್ದ ಅದೃಷ್ಟವನ್ನು ಕಳೆದುಕೊಂಡಿದ್ದೇವೆ. ವಿಜಯೋತ್ಸವದ ಆಚರಣೆ ಮಾಡುವ ಸಂದರ್ಭದ ಆತ್ಮ ಅವಲೋಕನ ಸಭೆಯಾಗಿದೆ ಎಂಬುದು ನೋವಿನ ವಿಷಯ ಎಂದು ಬೇಸರ ವ್ಯಕ್ತಪಡಿಸಿದರು.
ಆಂಜನೇಯ ಮಂತ್ರಿ ಆಗುತ್ತಿದ್ದಂತೆ ಕ್ಷೇತ್ರಕ್ಕೆ ಭದ್ರ ನೀರು ಹರಿಸಲು ಬುನಾದಿ ಹಾಕಿದರು.ಇದೀಗ ಕಾಂಗ್ರೆಸ್ ಸರ್ಕಾರ ಇದೆ. ಮುಖ್ಯಮಂತ್ರಿಗಳ ಗಮನ ಕ್ಕೆ ತಂದು ಎಂಎಲ್ಸಿ ಮಾಡಿ ಮಂತ್ರಿ ಮಾಡೋಣ. ಆಂಜನೇಯನವರ ಶಕ್ತಿ ರಾಜ್ಯಕ್ಕೆ ಗೊತ್ತಿದೆ. ಅದ್ರೆ ನಮ್ಮ ತಾಲೂಕಿನವರಿಗೆ ಅದು ತಿಳಿದಿಲ್ಲದಿರುವುದು ನೋವು ತರಿಸಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಆರ್.ಶಿವಕುಮಾರ್, ಉಪಾಧ್ಯಕ್ಷ ಗಂಗಾಧರ್, ಸದಸ್ಯರಾದ ಡಿ.ಕೆ.ಶಿವಮೂರ್ತಿ, ಲೋಹಿತ್‍ಕುಮಾರ್, ಕಾಂಗ್ರೆಸ್ ಒಬಿಸಿ ಘಟಕದ ರಾಜ್ಯ ಉಪಾಧ್ಯಕ್ಷ ಕಿರಣ್ ಕುಮಾರ್ ಯಾದವ್, ವಕೀಲ ಪ್ರಭಾಕರ್ ಸೇರಿದಂತೆ ಮೊದಲಾದವರು ಮಾತನಾಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಟಿ.ಹನುಮಂತಪ್ಪ, ಜಿಪಂ ಮಾಜಿ ಸದಸ್ಯ ಎಸ್.ಜೆ.ರಂಗಸ್ವಾಮಿ, ಟಿ.ಎಂ.ಪಿ.ತಿಪ್ಪೇಸ್ವಾಮಿ, ಭೋವಿ ಸಮಾಜದ ಜಿಲ್ಲಾಧ್ಯಕ್ಷ ಚಿಕ್ಕಂದವಾಡಿ ತಿಪ್ಪೇಸ್ವಾಮಿ, ಗೋಡೆಮನೆ ಹನುಮಂತಪ್ಪ, ವೈಶಾಖ್ ಯಾದವ್, ಕಾಂಗ್ರೆಸ್ ನಗರದ ಘಟಕದ ಅಧ್ಯಕ್ಷ ಮಜರ್ ಉಲ್ಲಾಖಾನ್, ಪಪಂ ಸದಸ್ಯರಾದ ಸೈಯದ ಸಜೀಲ್, ಮಹಿಳಾ ಘಟಕದ ಅಧ್ಯಕ್ಷೆ ಅಂಬಿಕಾ ಮೊದಲಾದವರು ಉಪಸ್ಥಿತರಿದ್ದರು.