ಬೆಂಗಳೂರು: ಮಾಜಿ ಸಚಿವ ಮತ್ತು ಬಿಜೆಪಿ ಶಾಸಕ ಅಶ್ವತ್ಥ್ ನಾರಾಯಣ್ ಅವರಿಗೆ ಕರ್ನಾಟಕ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಜೀವ ಬೆದರಿಕೆ ಹಾಕಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಅಶ್ವತ್ಥ್ ನಾರಾಯಣ್ ವಿರುದ್ಧ ಎಫ್ಐಆರ್ ಹಾಕದಂತೆ ತಡೆ ನೀಡಿ, ಹೈಕೋರ್ಟ್ ಆದೇಶ ನೀಡಿದೆ.
ಚುನಾವಣೆಗೂ ಮುನ್ನ ಆ ಸಮಯದಲ್ಲಿ ಸಚಿವರಾಗಿದ್ದಂತ ಅಶ್ವತ್ಥ್ ನಾರಾಯಣ್ ಅವರು ಮಾತನಾಡುವಾಗ, ಟಿಪ್ಪು ಸುಲ್ತಾನ್ ನನ್ನು ಉರಿಗೌಡ, ನಂಜೇಗೌಡ ಮುಗಿಸಿದಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಂಬಂಧ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು. ಈ ಸಂಬಂಧ ದೂರು ದಾಖಲಾಗಿತ್ತು.
ಸರ್ಕಾರ ಬದಲಾದ ನಂತರ ಹೊಸ ದೂರು ನೀಡಲಾಗಿದೆ. ದುರುದ್ದೇಶ ಪೂರ್ವಕವಾಗಿ ಎಫ್ಐಆರ್ ದಾಖಲಿಸಲಾಗಿದೆ. ಮೇಲ್ನೋಟಕ್ಕೆ ಐಪಿಸಿ ಸೆಕ್ಷನ್153 ರಂತೆ ಅಪರಾಧವಾಗುವ ಅಂಶಗಳಿಲ್ಲ ಹೀಗಾಗಿ ಎಫ್ಐಆರ್ಗೆ ತಡೆ ನೀಡುವಂತೆ ಅಶ್ವತ್ಥ್ ನರಾಯಣ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿದರು. ಇನ್ನು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರದ ಪರ ವಕೀಲ, ಜಾಮೀನು ನೀಡಬಹುದಾದ ಪ್ರಕರಣವಾದ್ದರಿಂದ ತಡೆ ಬೇಡ ಎಂದು ವಾದಿಸಿದರು. ಈ ವಾದ ವಿವಾದ ಆಲಿಸಿದ ನ್ಯಾ.ಎಂ.ನಾಗಪ್ರಸನ್ನ ಅವರ ಪೀಠ ಎಫ್ಐಆರ್ಗೆ ತಡೆಯಾಜ್ಞೆ ನೀಡಿ ಆದೇಶಿಸಿದೆ.