ಯುವಕನೊಬ್ಬ ವೃದ್ಧೆಯೊಬ್ಬಳನ್ನು ಕೊಂದು ಮಾಂಸ ತಿಂದಿರುವ ಭೀಕರ ಘಟನೆ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪಾಲಿ ಜಿಲ್ಲೆಯಲ್ಲಿ ನಡೆದ ಈ ಘಟನೆಯ ಕುರಿತು ಬಂಗರ್ ಆಸ್ಪತ್ರೆಯ ವೈದ್ಯರ ವರದಿಯ ಪ್ರಕಾರ, ಮುಂಬೈನ ಸುರೇಂದ್ರ ಠಾಕೂರ್ ಎಂಬ 24 ವರ್ಷದ ಹುಡುಗ ‘ಹೈಡ್ರೋಫೋಬಿಯಾ’ದಿಂದ ಬಳಲುತ್ತಿದ್ದಾನೆ.
ಈ ಹಿಂದೆ ಆತನಿಗೆ ಯಾವಾಗಲಾದರೂ ಹುಚ್ಚು ನಾಯಿ ಕಚ್ಚಿರಬಹುದು, ಆದರೆ ಆ ಸಮಯದಲ್ಲಿ ಸೂಕ್ತ ಚಿಕಿತ್ಸೆ ದೊರೆಯದ ಕಾರಣ ಈ ರೀತಿ ಆಗಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಸೇಂದ್ರ ಪೊಲೀಸ್ ಠಾಣೆ ವ್ಯಾಪ್ತಿಯ ಶಾರಧನ ಗ್ರಾಮದ ಶಾಂತಿದೇವಿ (65) ಶುಕ್ರವಾರ ಕೊಲೆಯಾದವರು. ಆಕೆಯು ದನ ಮೇಯಿಸಲು ಗ್ರಾಮದ ಹೊರವಲಯಕ್ಕೆ ಹೋದಾಗ ಆ ಯುವಕ ವೃದ್ಧೆಯನ್ನು ಕಲ್ಲಿನಿಂದ ಹೊಡೆದು ಕೊಂದಿದ್ದಾನೆ. ಮಾನಸಿಕ ರೋಗಿಯಂತೆ ವರ್ತಿಸುತ್ತಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೃದ್ಧೆಯ ಮಗ ಬಿರಾನ್, ಕ್ಯಾಥೋಟ್ ಪೊಲೀಸರಿಗೆ ದೂರು ನೀಡಿದ್ದಾನೆ. ಮೇಕೆ ಮೇಯಿಸಿಕೊಂಡು ಹಿಂತಿರುಗುತ್ತಿದ್ದಾಗ ವ್ಯಕ್ತಿಯೊಬ್ಬ ಸತ್ತ ಮಹಿಳೆಯ ಮಾಂಸ ತಿನ್ನುತ್ತಿರುವುದನ್ನು ಕಂಡು ದೂರು ನೀಡಿದ್ದಾನೆ.
ಅವರ ದೂರಿನ ಆಧಾರದ ಮೇಲೆ ಪೊಲೀಸರು ಠಾಕೂರ್ ವಿರುದ್ಧ ಕೊಲೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೊದಲಿಗೆ ಆರೋಪಿಯನ್ನು ಕಂಡು ಹೆದರಿದ ಸ್ಥಳೀಯರು ಪರಾರಿಯಾಗಲು ಯತ್ನಿಸಿದರಾದರೂ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಹೈಡ್ರೋಫೋಬಿಯಾದಿಂದ ಬಳಲುತ್ತಿರುವ ರೋಗಿಯನ್ನು ಬಂಗರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಿಂದೆ ಹುಚ್ಚು ನಾಯಿ ಕಚ್ಚಿರಬಹುದು. ಆ ಸಂದರ್ಭದಲ್ಲಿ ಅವರಿಗೆ ಲಸಿಕೆ ಹಾಕಿಸದೇ ಇರುವುದರಿಂದ ಅವರಿಗೆ ಹೈಡ್ರೋಫೋಬಿಯಾ ಅಥವಾ ರೇಬೀಸ್ ಬಂದಿರಬಹುದು ಎಂದು
ಡಾ.ಪ್ರವೀಣ್ ತಿಳಿಸಿದ್ದಾರೆ.