ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817
ಚಿತ್ರದುರ್ಗ,(ಮೇ.27) : ಮಕ್ಕಳನ್ನು ಉತ್ತಮವಾದ ಪ್ರಜೆಗಳನ್ನಾಗಿ ರೂಪಿಸುವ ಹೊಣೆಗಾರಿಕೆ ಪೋಷಕರಾದ ನಿಮ್ಮ ಮೇಲಿದೆ. ಬಾಲ್ಯದಲ್ಲಿ ಯಾವ ರೀತಿ ಇದ್ದರೂ ಪರವಾಗಿಲ್ಲ, ಹದಿಹರಿಯದ ವಯಸ್ಸಿನಲ್ಲಿ ಸರಿಯಾದ ರೀತಿಯಲ್ಲಿ ನೋಡಿಕೊಳ್ಳುವಂತೆ ಪೋಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೆಶಕರಾದ ರವಿಶಂಕರ್ ರೆಡ್ಡಿ ಕರೆ ನೀಡಿದರು.
ನಗರದಲ್ಲಿ ಶುಕ್ರವಾರ ಸಂಜೆ ಎಸ್.ಆರ್.ಬಿ.ಎಂ.ಎಸ್ ರೋಟರಿ ಬಾಲಭವನದಲ್ಲಿ ನಡೆದ ರೋಟರಿ ಕ್ಲಬ್ ಚಿನ್ಮೂಲಾದ್ರಿ ಸಂಸ್ಥೆಯಡಿಯಲ್ಲಿ ಎಸ್.ಎಸ್.ಎಲ್, ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ಶಿಕ್ಷಣ ಇಲಾಖೆ ದೂಡ್ಡದಾದ ಇಲಾಖೆಯಾಗಿದೆ ಇದರ ಜವಾಬ್ದಾರಿಯೂ ಸಹಾ ಹೆಚ್ಚಾಗಿದೆ ದೇಶಕ್ಕೆ ಉತ್ತಮವಾದ ಪ್ರಜೆಗಳನ್ನು ರೂಪಿಸುವ ಹೊಣೆಗಾರಿಕೆಯನ್ನು ಸಹಾ ಹೊಂದಿದೆ.
ಬಡತನದಲ್ಲಿ ಹುಟ್ಟಬಹುದು ಆದರೆ ಬಡತನದಲ್ಲಿ ಸಾಯುವಂತೆ ದೇವರು ಹೇಳಿಲ್ಲ. ಇದಕ್ಕೆ ಪರಿಶ್ರಮವನ್ನು ಹಾಕುವುದರ ಮೂಲಕ ಉತ್ತಮವಾದ ಜೀವನವನ್ನು ರೂಪಿಸಿಕೊಳ್ಳಬೇಕಿದೆ ಇದಕ್ಕೆ ಶಿಕ್ಷಣ ಆಧಾರವಾಗಿದೆ. ಜನನ ತಪ್ಪಲ್ಲ ಆದರೆ ಜೀವನದಲ್ಲಿ ಸಾಧನೆ ಮಾಡದಿರುವುದು ತಪ್ಪು ಎಂದರು.
ಶಿಕ್ಷಣ ಇಲಾಖೆ ಮತ್ತು ಇತರೆ ಇಲಾಖೆಯ ಅಧಿಕಾರಿಗಳು ಸಮಾಜದ ಅಂಕುಡೂಂಕುಗಳನ್ನು ತಿದ್ದುವ ಕೆಲಸವನ್ನು ಮಾಡುತ್ತಾ ಸಮಾಜಮುಖಿಯಾದ ಕಾರ್ಯವನ್ನು ಮಾಡುತ್ತಾರೆ. ಇದರಲ್ಲಿ ಇಬ್ಬರ ಜವಾಬ್ದಾರಿಯೂ ಸಹಾ ಹೆಚ್ಚಾಗಿದೆ.
ಜಿಲ್ಲೆಯ ಮಕ್ಕಳಲ್ಲಿ ಅತಿ ಹೆಚ್ಚಿನ ಪ್ರತಿಭೆ ಇದೆ ಅದನ್ನು ಹೊರ ತೆಗೆಯುವ ಕೆಲಸ ಇಲಾಖೆಯಂದ ಆಗಬೇಕಿದೆ. ಮಕ್ಕಳ ಪ್ರತಿಭೆಗೆ ಶಿಕ್ಷಕರಾದವರು ಪೂರಕವಾಗಿ ನಿಲ್ಲಬೇಕಿದೆ. ಮಕ್ಕಳ ಹೆಚ್ಚಿನ ಪ್ರಗತಿಗೆ ದಾರಿದೀಪವಾಗಬೇಕಿದೆ. ಇದರಿಂದ ಜಿಲ್ಲೆಯಲ್ಲಿ ತಲೆ ಎತ್ತುವ ಫಲಿತಾಂಶವನ್ನು ತರುತ್ತಾರೆ ಎಂಬ ನಂಬಿಕೆ ಇದೆ ಎಂದು ರವಿಶಂಕರ್ ರೆಡ್ಡಿ ತಿಳಿಸಿದರು.
ಕೆಲವೊಂದು ಮಕ್ಕಳಿಂದ ಪೋಷಕರಿಗೆ ಗೌರವ ಹೆಚ್ಚಾದರೆ ಅಂತಹದ್ದೇ ಮಕ್ಕಳಿಂದ ಪೋಷಕರಿಗೆ ಗೌರವಕ್ಕೆ ಕುಂದು ತರುವಂತ ಕೆಲಸವನ್ನು ಮಾಡುವುದರ ಮೂಲಕ ಗೌರವವನ್ನು ಕಡಿಮೆ ಮಾಡುತ್ತಾರೆ. ಮಾನವನ ಪ್ರಗತಿಯನ್ನು ಶಿಕ್ಷಣದಿಂದ ಪಡೆಯಲು ಸಾಧ್ಯವಿದೆ. ಛಲ, ಪರಿಶ್ರಮ, ಗುರಿಯಿಂದ ಮುನ್ನಡೆಯಬೇಕಿದೆ. ನಿಮ್ಮ ಗುರಿಗಳು ಚಿಕ್ಕದಾಗಿರದೆ ದೊಡ್ಡದಾಗಿರಲ್ಲಿ ಆಗ ನಿಮ್ಮ ಸಾಧನೆಯೂ ಸಹಾ ದೊಡ್ಡದಾಗಿರುತ್ತದೆ.
ಇಂದಿನ ಯುವ ಸ್ಪರ್ಧಾತ್ಮಕ ಯುಗವಾಗಿದೆ. ಇಲ್ಲಿ ಎಲ್ಲದಕ್ಕೂ ಸಹಾ ಸ್ಪರ್ದೆ ಇದೆ ಇದಕ್ಕೆ ತಕ್ಕ ತಯಾರಿಯನ್ನು ಮಾಡಿಕೊಳ್ಳಬೇಕಿದೆ. ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳಸುವ ಜವಾಬ್ದಾರಿಯನ್ನು ಪೋಷಕರು ಮರೆತ್ತಿದ್ದಾರೆ. ಸೂಕ್ಷ್ಮವಾಗಿ ಮಕ್ಕಳನ್ನು ಬೆಳಸಬೇಡಿ, ಬಾಲ್ಯದಲ್ಲಿ ಮಕ್ಕಳನ್ನು ಯಾವ ರೀತಿಯಾದರೂ ಬೆಳಿಸಿ ಪರವಾಗಿಲ್ಲ ಆದರೆ ಹದಿಹರಿಯದಲ್ಲಿ ಮಾತ್ರ ಉತ್ತಮವಾದ ರೀತಿಯಲ್ಲಿ ಮಕ್ಕಳನ್ನು ಬೆಳಿಸುವಂತೆ ಪೋಷಕರಿಗೆ ಕಿವಿ ಮಾತು ಹೇಳಿದರು.
ಮಕ್ಕಳು ಪರೀಕ್ಷೆ ಸಮಯದಲ್ಲಿ ದೇವರನ್ನು ಪ್ರಾರ್ಥಿಸಿ ಪಾಸು ಮಾಡಪ್ಪ ಎನ್ನಬೇಡಿ ದೇವರಲ್ಲಿ ನಿಮ್ಮ ಅದೃಷ್ಟದ ಬಗ್ಗೆ ಮಾತ್ರ ಬೇಡಿಕೊಳ್ಳಿ ಆದರೆ ಪರಿಶ್ರಮವನ್ನು ನೀವೇ ಹಾಕಬೇಕು. ಮಕ್ಕಳನ್ನು ಬೆಳಸುವಲ್ಲಿ ತಂದೆಗಿಂತ ತಾಯಂದಿರ ಜವಾಬ್ದಾರಿ ಹೆಚ್ಚಾಗಿ ಮಕ್ಕಳು ಹೆಚ್ಚಾಗಿ ತಾಯಿಯವರ ಬಳಿ ಬೆಳೆಯುತ್ತಾರೆ ಇದರಿಂದ ಅವರ ಹೊಣೆಗಾರಿಕೆ ಹೆಚ್ಚಾಗಿದೆ ಎಂದು ರವಿಶಂಕರ್ ರೆಡ್ಡಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕ್ಲಬ್‍ನ ಅಧ್ಯಕ್ಷರಾದ ಅರುಣ್ ಕುಮಾರ್ ರವರ ಹುಟ್ಟು ಹಬ್ಬ ಹಾಗೂ ಅಸಿಸ್ಟೆಂಟ್ ಗೌರ್ನರ್ ಗಾಯತ್ರಿ ಶಿವರಾಂರವರ 40ನೇ ವರ್ಷದ ವಿವಾಹ ವಾರ್ಷಿಕ ಮಹೋತ್ಸವವನ್ನು ಅಚರಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಚಿನ್ಮೂಲಾದ್ರಿಯ ಅಧ್ಯಕ್ಷರಾದ ಅರುಣ್ ಕುಮಾರ್ ಕಾರ್ಯದರ್ಶಿಯವರಾದ ಶ್ರೀನಿವಾಸ್, ಅಸಿಸ್ಟೆಂಟ್ ಗೌರ್ನರ್ ಗಾಯತ್ರಿ ಶಿವರಾಂ ಭಾಗವಹಿಸಿದ್ದರು.