ದಾವಣಗೆರೆ: ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತವೇನೋ ಬಂದಿದೆ. ಆದರೆ ಸರ್ಕಾರ ರಚನೆ ಮಾಡುವುದಕ್ಕೂ ಮುನ್ನ ಸಿಎಂ ಯಾರಾಗ್ತಾರೆ ಎಂಬ ಪ್ರಶ್ನೆ ಎದುರಾಗಿದೆ. ಅದರಲ್ಲೂ ಕಾಂಗ್ರೆಸ್ ನಲ್ಲಿಯೇ ಕಾಂಪಿಟೇಷನ್ ಶುರುವಾಗಿದೆ. ಮೊದಲಿನಿಂದಾನೂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಸಿಎಂ ಹುದ್ದೆಗೆ ಕಾಂಪಿಟೇಷನ್ ಇದೆ. ಇದರ ನಡುವೆ ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರವೊಂದು ಹೋಗಿದೆ. ಅದರಲ್ಲಿ ವೀರಶೈವರಿಗೆ ಸಿಎಂ ಸ್ಥಾನ ನೀಡಿ ಎಂದು ಡಿಮ್ಯಾಂಡ್ ಇಡಲಾಗಿದೆ.
ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಪತ್ರ ಬರೆದಿದ್ದು, ನಮ್ಮ ಸಮುದಾಯಕ್ಕೆ ಸಿಎಂ ಹುದ್ದೆ ನೀಡಿ. ನಿಮಗೆ ತಿಳಿದಿರುವಂತೆ ಕಾಂಗ್ರೆಸ್ ಪಕ್ಷ ಈ ಬಾರಿಯ ಚುನಾವಣೆಯಲ್ಲಿ 46 ವೀರಶೈವ ಲಿಂಗಾಯತರಿಗೆ ಟಿಕೆಟ್ ನೀಡಿತ್ತು. ಅದರಲ್ಲಿ 34 ಮಂದಿ ಗೆಲುವು ಸಾಧಿಸಿದ್ದಾರೆ. ಅಂದ್ರೆ ಶೇ. 74ರಷ್ಟು ಗೆಲುವಿನ ಅಂಕ ನಮ್ಮ ಸಮುದಾಯಕ್ಕೆ ಸಿಕ್ಕಿದೆ.
ಬಿಜೆಪಿಯ ಸಾಂಪ್ರಾದಾಯಿಕ ಮತಗಳು ಕಾಂಗ್ರೆಸ್ ಗೆ ಬಿದ್ದಿವೆ. ಈ ಬೆಂಬಲದೊಂದಿಗೆ 135 ಕ್ಷೇತ್ರಗಳು ಕಾಂಗ್ರೆಸ್ ಗೆ ಬಂದಿದೆ. ಈ ಗೆಲುವಿನ ಬಳಿಕ ಲೋಕಸಭಾ ಚುನಾವಣೆಯೂ ಬರಲಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಲು ವೀರಶೈವರ ಬೆಂಬಲಬೇಕು ಎಂದು ಅವರ ಪತ್ರದಲ್ಲಿ ತಿಳಿಸಿದ್ದಾರೆ.