ವರದಿ : ಕೆ.ಎಂ. ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ, (ಅ.13) : ಇದೇ ತಿಂಗಳ 20 ರಂದು ನಡೆಯುವ ವಾಲ್ಮೀಕಿ ಜಯಂತಿಯೊಳಗೆ ಶೇ.7.5 ಮೀಸಲಾತಿಯನ್ನು ಸರ್ಕಾರ ಘೋಷಿಸಬೇಕು. ಇಲ್ಲವಾದಲ್ಲಿ ಮುಂಬರುವ ಚುನಾವಣೆಯಲ್ಲಿ ನಾಯಕ ಜನಾಂಗದ ಶಕ್ತಿ ಏನೆಂಬುದನ್ನು ತೋರಿಸುತ್ತೇವೆಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಗಡುವು ನೀಡಿದರು.
ರಾಜವೀರ ಮದಕರಿನಾಯಕ ಜಯಂತಿ ಅಂಗವಾಗಿ ಬುಧವಾರ ಮದಕರಿನಾಯಕನ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ನಡೆದ ವೇದಿಕೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಚಿತ್ರದುರ್ಗದ ಇತಿಹಾಸ ಎಂದರೆ ಪಾಳೆಯಗಾರರು, ಪಾಳೆಯಗಾರರು ಎಂದರೆ ಚಿತ್ರದುರ್ಗ ಎನ್ನುವ ಇತಿಹಾಸವಿದೆ. 1364 ರಿಂದ ಮತ್ತಿತಿಮ್ಮಣ್ಣ ನಾಯಕನಿಂದ ಹಿಡಿದು ಪಾಳೆಯಗಾರರ ಆಳ್ವಿಕೆ ಆರಂಭಗೊಂಡಿದೆ. 1754 ರಿಂದ 1779 ರವರೆಗೆ ಚಿತ್ರದುರ್ಗವನ್ನು ಆಳಿದ ರಾಜವೀರ ಮದಕರಿನಾಯಕ ಶೌರ್ಯ, ಪರಾಕ್ರಮಗಳಿಂದ ಅನೇಕ ಯುದ್ದಗಳನ್ನು ಗೆದ್ದುಕೊಟ್ಟಿದ್ದಾನೆ.
ಐದು ನೂರು ವರ್ಷಗಳ ಕಾಲ ಅನೇಕ ಪಾಳೆಯಗಾರರು ಆಳಿದ್ದಾರೆ. ಬಿಚ್ಚುಗತ್ತಿಭರಮಣ್ಣ ನಾಯಕ, ಓಬಣ್ಣನಾಯಕ ಇವರುಗಳೆಲ್ಲಾ ಧರ್ಮಸಹಿಷ್ಣುತೆ ಮೇಲೆ ರಾಜ್ಯಭಾರ ಮಾಡಿದವರು.
ರಾಜವೀರ ಮದಕರಿನಾಯಕನ ಜಯಂತಿಯನ್ನು ಸರ್ಕಾರವೇ ಆಚರಿಸಬೇಕು. ಮೊಘಲರ ದಬ್ಬಾಳಿಕೆಯನ್ನು ಹಿಮ್ಮೆಟ್ಟಿಸಿದ ಪಾಳೆಯಗಾರ ರಾಜವೀರ ಮದಕರಿನಾಯಕ ಇತಿಹಾಸವನ್ನು ಇಂದಿನ ಯುವ ಪೀಳಿಗೆಗೆ ತಿಳಿಸಬೇಕಿದೆ ಎಂದು ಹೇಳಿದರು.
ಚುನಾವಣೆ ಸಂದರ್ಭದಲ್ಲಿ ನಾಯಕ ಜನಾಂಗದ ಮತ ಪಡೆದ ಸಚಿವರು, ಶಾಸಕರುಗಳು ಎಲ್ಲಿ ಹೋಗಿದ್ದಾರೆ.
ಸರ್ಕಾರ ಬೇಜವಾಬ್ದಾರಿತನ ಬಿಟ್ಟು ರಾಜವೀರ ಮದಕರಿನಾಯಕನ ಥೀಂ ಪಾರ್ಕ್ ನಿರ್ಮಾಣ ಮಾಡಬೇಕು. ಒಂದೆರಡು ಬಾರಿ ದುರ್ಗೋತ್ಸವ ಮಾಡಿದ್ದನ್ನು ಬಿಟ್ಟರೆ ಮತ್ತೆ ಉತ್ಸವ ನಡೆಯಲಿಲ್ಲ. ಓಬಣ್ಣನಾಯಕನ ಸಮಾಧಿ ಹಾಳಾಗಿದೆ. ನಾಡು, ನುಡಿ, ಪರಂಪರೆಗೆ ಇತಿಹಾಸ ಕೊಟ್ಟಿರುವ ಓಬಣ್ಣನಾಯಕನ ಸಮಾಧಿಯನ್ನು ಮರು ನಿರ್ಮಾಣ ಮಾಡುವಂತೆ ಪುರಾತತ್ವ ಇಲಾಖೆಗೆ ಜಿಲ್ಲಾಧಿಕಾರಿ ಸೂಚನೆ ನೀಡಬೇಕೆಂದು ಒತ್ತಾಯಿಸಿದರು.
ರಾಜಕೀಯ, ಆರ್ಥಿಕವಾಗಿ ಮೀಸಲಾತಿ ಸಿಕ್ಕಿರಬಹುದು. ಆದರೆ ಶಿಕ್ಷಣ, ಉದ್ಯೋಗಕ್ಕಾಗಿ ಇರುವ ಶೇ.3 ರಷ್ಟು ಮೀಸಲಾತಿಯನ್ನು ಶೇ.7.5 ಕ್ಕೆ ಹೆಚ್ಚಿಸಬೇಕು. ನಾಯಕ ಜನಾಂಗವನ್ನು ಮತಕ್ಕಾಗಿ ರಾಜಕೀಯ ಪಕ್ಷಗಳು ಬಳಸಿಕೊಳ್ಳುವುದು ಬೇಡ. ಇನ್ನು ನಾವುಗಳು ಯಾಮಾರುವುದಿಲ್ಲ.
ನಾಗಮೋಹನ್‍ದಾಸ್ ವರದಿ ನೀಡಿ ಒಂದು ವರ್ಷ ಮೂರು ತಿಂಗಳು ಕಳೆದಿದೆ. ಸರ್ಕಾರ ಉಡಾಫೆಯಾಗಿ ವರ್ತಿಸುತ್ತಿದೆ. ಎಲ್.ಜಿ.ಹಾವನೂರ್‍ರವರನ್ನು ನಮ್ಮ ಜನಾಂಗ ಸ್ಮರಿಸಿಕೊಳ್ಳಲೇಬೇಕು. ವಾಲ್ಮೀಕಿ ಜಯಂತಿಯೊಳಗೆ ಶೇ.7.5 ರಷ್ಟು ಮೀಸಲಾತಿ ನೀಡದಿದ್ದರೆ ಉಪ ಚುನಾವಣೆಗೆ ಬರಲಿ ತಕ್ಕ ಪಾಠ ಕಲಿಸುತ್ತೇವೆ. ಸಾಂಸ್ಕøತಿಕ ನಾಯಕನ ಜಯಂತಿಯನ್ನು ಸರ್ಕಾರ ಆಚರಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದಲ್ಲಿ ರಾಜವೀರ ಮದಕರಿನಾಯಕನ ಜಯಂತಿಯನ್ನು ಆಚರಿಸುವುದಾಗಿ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಸಿದರು.
ಜಿಲ್ಲಾ ವಾಲ್ಮೀಕಿ ನಾಯಕ ಜನಾಂಗದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ ಮಾತನಾಡಿ ಶೇ.7.5 ಮೀಸಲಾತಿಗಾಗಿ ಅನೇಕ ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ನಮ್ಮವರೆ. ದುರ್ಗೋತ್ಸವ ಅದ್ದೂರಿಯಾಗಿ ಆಚರಿಸಬೇಕೆಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದರು.
ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡುತ್ತ ಶ್ರೀಕೃಷ್ಣದೇವರಾಯ ಜಯಂತಿ, ಹಂಪಿ ಉತ್ಸವದಂತೆ ಪ್ರತಿ ವರ್ಷ ದುರ್ಗೋತ್ಸವ ಇಲ್ಲ ಮದಕರಿ ಉತ್ಸವ ನಡೆಯಬೇಕು. ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಆಸಕ್ತಿಯಿದ್ದಂತಿಲ್ಲ. ರಾಜವೀರ ಮದಕರಿನಾಯಕನ ಹೆಸರನ್ನು ಕರ್ನಾಟಕದಾದ್ಯಂತ ಕೊಂಡೊಯ್ಯಬೇಕು. ಮದಕರಿನಾಯಕನ ಜಯಂತಿಗೆ ಹೆಚ್ಚಿನ ಒತ್ತು ಕೊಡಬೇಕು. ಅದಕ್ಕಾಗಿ ನಾಯಕ ಜನಾಂಗ ಮೊದಲು ಒಗ್ಗಟ್ಟಾಗಬೇಕು ಎಂದು ಹೇಳಿದರು.
ಸೋಮೇಂದ್ರ ಮಾತನಾಡಿ ಹನ್ನೆರಡು ವರ್ಷದ ಬಾಲಕನಿದ್ದಾಗಲೆ ರಾಜವೀರ ಮದಕರಿನಾಯಕ ಪಟ್ಟ ಕಟ್ಟಿಸಿಕೊಳ್ಳುತ್ತಾನೆ. ಪರಾಕ್ರಮಿ, ಶೂರನಾಗಿದ್ದ ಮದಕರಿನಾಯಕ ಅನೇಕ ಪಾಳೆಯಪಟ್ಟುಗಳು ಯುದ್ದಕ್ಕೆ ಬಂದಾಗ ಎಲ್ಲರನ್ನು ಹಿಮ್ಮೆಟ್ಟಿಸುತ್ತಾನೆ. ಹೈದರಾಲಿಗೆ ನಡುಕ ಹುಟ್ಟಿಸಿದ ಮದಕರಿನಾಯಕನ ಇತಿಹಾಸವನ್ನು ಎಲ್ಲರೂ ಸ್ಮರಿಸಬೇಕಿದೆ ಎಂದರು.
ಪಾಪೇಶ್ ನಾಯಕ ಮಾತನಾಡುತ್ತ ಮುಂದಿನ ದಿನಗಳಲ್ಲಿ ರಾಜವೀರ ಮದಕರಿನಾಯಕನ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಬೇಕು. ಮದಕರಿನಾಯಕನನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಬೇಡ. ಸರ್ಕಾರದಿಂದಲೆ ಜಯಂತಿ ಆಚರಿಸಬೇಕೆಂದು ಮನವಿ ಮಾಡಿದರು.
ಸದಾಶಿವ, ಗುರುಸಿದ್ದಪ್ಪ, ಶಿವಣ್ಣ ವೇದಿಕೆಯಲ್ಲಿದ್ದರು.
ನಾಯಕ ಜನಾಂಗದ ಅನೇಕ ಮುಖಂಡರುಗಳು ರಾಜವೀರ ಮದಕರಿನಾಯಕ ಜಯಂತಿಯಲ್ಲಿ ಭಾಗವಹಿಸಿದ್ದರು.