ಚಿತ್ರದುರ್ಗ, (ಅಕ್ಟೋಬರ್.13) : ಚಳ್ಳಕೆರೆ ತಾಲ್ಲೂಕಿನ ರೇಣುಕಾಪುರ ಗ್ರಾಮದಲ್ಲಿ ಇದೇ ಅಕ್ಟೋಬರ್ 16 ರ ಮೂರನೇ ಶನಿವಾರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಗ್ರಾಮ ವಾಸ್ತವ್ಯ ಮಾಡುವರು.
ತಾತ್ಕಾಲಿಕವಾಗಿ ಕೋವಿಡ್-19ರ ಸಾಂಕ್ರಮಿಕ ರೋಗ ಹರಡುವಿಕೆಯಿಂದಾಗಿ ಸ್ಥಗಿತಗೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಪ್ರಸ್ತುತ ಇದೇ ಅಕ್ಟೋಬರ್ 16ರಿಂದ ಪುನರಾಂಭಿಸಲಾಗುತ್ತಿದೆ.
ಪ್ರಮುಖವಾಗಿ ಜಿಲ್ಲಾಧಿಕಾರಿಗಳು, ಭೂ ದಾಖಲೆಗಳ ಉಪನಿರ್ದೇಶಕರು, ಭೂ ದಾಖಲೆಗಳ ಸಹಾಯ ನಿರ್ದೇಶಕರು, ಪ್ರತಿ ತಿಂಗಳ ಮೂರನೇ ಶನಿವಾರದಂದು ಉಪವಿಭಾಗ ಮಟ್ಟದ ಸಹಾಯಕ ಆಯುಕ್ತರು, ಸಂಬಂಧಪಟ್ಟ ತಹಶೀಲ್ದಾರರು, ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಿಗರೊಂದಿಗೆ ಗ್ರಾಮಗಳಿಗೆ ಭೇಟಿ ನೀಡಿ ಹಳ್ಳಿ ವಾಸ್ತವ್ಯ ಮಾಡಿ ಗ್ರಾಮಸ್ಥರ ಅಹವಾಲುಗಳನ್ನು ಪರಿಹರಿಸಲು ಕ್ರಮಕೈಗೊಳ್ಳುವರು.
ಜಿಲ್ಲಾಧಿಕಾರಿಗಳು ಯಾವ ತಾಲ್ಲೂಕಿಗೆ ಭೇಟಿ ನೀಡುತ್ತಾರೊ ಆ ತಾಲ್ಲೂಕಿನ ತಹಶೀಲ್ದಾರರನ್ನು ಹೊರತುಪಡಿಸಿ, ಉಳಿದ ತಾಲ್ಲೂಕಿನ ತಹಶೀಲ್ದಾರರು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಅ ದಿನದಂದು ತಮ್ಮ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಪ್ರತಿ ತಿಂಗಳು 3ನೇ ಶನಿವಾರದಂದು ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದಾರೆ.
ಇದೇ ಅಕ್ಟೋಬರ್16ರಂದು ಶನಿವಾರ ಆಯಾ ತಾಲ್ಲೂಕು ತಹಶೀಲ್ದಾರ್ಗಳ ನೇತೃತ್ವದಲ್ಲಿ ಗ್ರಾಮ ವಾಸ್ತವ್ಯಕೈಗೊಳ್ಳಲು ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದು, ಚಿತ್ರದುರ್ಗ ತಾಲ್ಲೂಕಿನ ತಹಶೀಲ್ದಾರ್ ಕೊಡಗವಳ್ಳಿ, ಹಿರಿಯೂರು ತಹಶೀಲ್ದಾರ್ ಸೀಗೆಹಟ್ಟಿ, ಹೊಸದುರ್ಗ ತಹಶೀಲ್ದಾರ್ ಬೇವಿನಹಳ್ಳಿ, ಹೊಳಲ್ಕೆರೆ ತಹಶೀಲ್ದಾರ್ ಪಾಪೇನಹಳ್ಳಿ, ಮೊಳಕಾಲ್ಮೂರು ತಾಲ್ಲೂಕಿನ ತಹಶೀಲ್ದಾರ್ ಚಿಕ್ಕುಂತಿ ಗ್ರಾಮಗಳಿಗೆ ಭೇಟಿ ನೀಡಿ ವಾಸ್ತವ್ಯ ಮಾಡುವರು.
ಗ್ರಾಮಗಳಿಗೆ ಭೇಟಿ ನೀಡುವ ಒಂದು ವಾರದ ಮೊದಲೇ ಕಂದಾಯ ಅಧಿಕಾರಿಗಳು ಗ್ರಾಮ ಭೇಟಿ ಸಮಯದಲ್ಲಿ ನೀಡಲಾಗಿರುವ ಕಾರ್ಯಸೂಚಿಗಳನ್ವಯ ಫಲಾನುಭವಿಗಳ ಅರ್ಜಿಗಳನ್ನು ಸಂಗ್ರಹಿಸಿ, ಅರ್ಜಿಗಳ ಮೇಲೆ ಯಾರ ಹಂತದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಗ್ರಾಮ ವಾಸ್ತವ್ಯಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ವಿಲೇವಾರಿ ಯಾಗುವ ಬಗ್ಗೆ ಸಂಬಂಧಪಟ್ಟ ಫಲಾನುಭವಿಗಳಿಗೆ ತಿಳಿಸಲಾಗುವುದು. ಅರ್ಜಿಗಳ ಮೇಲೆ ಬೇರೆ ಬೇರೆ ಹಂತದಲ್ಲಿ ವಿಚಾರಣೆಯ ಅವಶ್ಯಕತೆ ಇದ್ದಲ್ಲಿ ಅದನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದು. ಗ್ರಾಮ ಭೇಟಿ ಸಮಯದಲ್ಲಿ ಸಾರ್ವಜನಿಕರ ಅಹವಾಲು, ಬೇಡಿಕೆಗಳನ್ನು ಸ್ವೀಕರಿಸಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ತಿಳಿಸಿದ್ದಾರೆ.