ಚಿತ್ರದುರ್ಗ,(ಅಕ್ಟೋಬರ್.13) : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಪತ್ರಿಕೋದ್ಯಮ ಪದವೀಧರರಿಗೆ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 10 ತಿಂಗಳ ತರಬೇತಿಗೆ ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಕ್ಟೋಬರ್ 29 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಚಿತ್ರದುರ್ಗ ಜಿಲ್ಲಾ ಕಚೇರಿಗೆ 2021-22 ಸಾಲಿನಲ್ಲಿ ವಿಶೇಷ ಘಟಕ ಯೋಜನೆಯ ಅಡಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರೂ ಅಭ್ಯರ್ಥಿಗಳನ್ನು ಹಾಗೂ ಪರಿಶಿಷ್ಟ ಪಂಗಡದ ಓರ್ವ ಅಭ್ಯರ್ಥಿಯನ್ನು ಮೆರಿಟ್ ಹಾಗೂ ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು.
ಆಯ್ಕೆಯಾದ ಪ್ರತಿ ಅಭ್ಯರ್ಥಿಗೆ ಮಾಹೆಯಾನ ರೂ.15,000/- (ಹದಿನೈದು ಸಾವಿರ ರೂಪಾಯಿಗಳು ಮಾತ್ರ) ಸ್ಟೈಪೆಂಡ್ ನೀಡಲಾಗುವುದು. ಇಲಾಖೆಯ ಕ್ಷೇತ್ರ ಪ್ರಚಾರ ಕಾರ್ಯಗಳಲ್ಲಿ ಸುದ್ದಿ ಸಂಗ್ರಹ, ರಚನೆ ಹಾಗೂ ವಿಶೇಷ ಲೇಖನ ರಚನೆಗಳಲ್ಲಿ ತರಬೇತಿ ನೀಡಲಾಗುವುದು.
ಅಭ್ಯರ್ಥಿಯು ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತ್ತಕೋತ್ತರ ಪದವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನವಿರುವ, ಕನ್ನಡ ಭಾಷೆ ಬಳಕೆಯಲ್ಲಿ ಪ್ರಬುದ್ಧತೆ ಇರಬೇಕು. ಅರ್ಜಿ ಸಲ್ಲಿಸಲು ನಿಗಧಿ ಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳ ವಯಸ್ಸು 40 ವರ್ಷದೊಳಗಿರಬೇಕು. ಅರ್ಜಿಯೊಂದಿಗೆ ಎಸ್‍ಎಸ್‍ಎಲ್‍ಸಿ ಅಂಕ ಪಟ್ಟಿ, ಪದವಿ ಪ್ರಮಾಣ ಪತ್ರ, ಸ್ನಾತ್ತಕೋತ್ತರ ಪದವಿ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಪಾಸ್ ಪೋರ್ಟ್ ಅಳತೆಯ ಎರಡು ಭಾವಚಿತ್ರ ಹಾಗೂ ಇನ್ನಿತರ ಪೂರಕ ದಾಖಲೆಗಳನ್ನು ದ್ವಿ ಪ್ರತಿಯೊಂದಿಗೆ ಅಕ್ಟೋಬರ್ 29ರೊಳಗೆ ಸಲ್ಲಿಸಬೇಕು.
ಆಸಕ್ತರು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿದೇರ್ಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಧಿಕಾರಿ ಕಚೇರಿ ಅವರಣ, ಚಿತ್ರದುರ್ಗ-577501 ಮೊಬೈಲ್ ಸಂಖ್ಯೆ: 9480841217 ಅಥವಾ ಇ-ಮೇಲ್ ಐಡಿ [email protected] ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ವಾರ್ತಾಧಿಕಾರಿ ಬಿ. ಧನಂಜಯ ತಿಳಿಸಿದ್ದಾರೆ.