ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಮೇ.08) : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಮೇ.10 ರಂದು ಮತದಾನ ನಡೆಯಲಿದ್ದು, ಸಕಲ ಸಿದ್ದತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 14.03 ಲಕ್ಷ ಮತದಾರರು
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯ ಮತದಾರರ ಅಂತಿಮ ಪಟ್ಟಿ ಸಿದ್ದವಾಗಿದೆ.
ಜಿಲ್ಲೆಯಲ್ಲಿ ಒಟ್ಟು 14,03,585 ಮತದಾರರು ಇದ್ದು, ಇದರಲ್ಲಿ 7,00,811 ಪುರುಷ, 7,02,702 ಮಹಿಳಾ ಹಾಗೂ 72 ಇತರೆ ಮತದಾರರು ಇದ್ದಾರೆ.
39,439 ಯುವ ಮತದಾರರು:
ಜಿಲ್ಲೆಯಲ್ಲಿ 21,277 ಪುರುಷ, 18,161 ಮಹಿಳಾ ಹಾಗೂ ಓರ್ವ ಇತರೆ ಸೇರಿ ಒಟ್ಟು 39,439 ಯುವ ಮತದಾರರು ಇದ್ದಾರೆ.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ 7,367, ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ 5778, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 7302, ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ 6,985, ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 5,699, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ 6,308 ಯುವ ಮತದಾರರು ಮತದಾನಕ್ಕೆ ಸಿದ್ಧರಾಗಿದ್ದಾರೆ.
76 ಅಭ್ಯರ್ಥಿಗಳು ಅಂತಿಮ ಕಣದಲ್ಲಿ:
ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಕ್ರಮಬದ್ದಗೊಂಡ 90 ಅಭ್ಯರ್ಥಿಗಳ ಪೈಕಿ, 14 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯ ನಾಮಪತ್ರವನ್ನು ಹಿಂಪಡೆದಿದ್ದಾರೆ. 69 ಪುರುಷ ಹಾಗೂ 7 ಮಹಿಳೆಯರು ಸೇರಿ ಒಟ್ಟು 76 ಅಭ್ಯಥಿಗಳು ಅಂತಿಮ ಕಣದಲ್ಲಿದ್ದಾರೆ.
1648 ಮತಗಟ್ಟೆಗಳು: 30 ಸಖಿ ಮತಗಟ್ಟೆ ಸ್ಥಾಪನೆ: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ 1648 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಿವಿಧ ವರ್ಗದ ಮತದಾರರನ್ನು ಮತದಾನಕ್ಕೆ ಪ್ರೇರೆಪಿಸಲು ಜಿಲ್ಲೆಯಾದ್ಯಂತ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಮಹಿಳಾ ಮತದಾರರು ಹೆಚ್ಚಿರುವ 30 ಮತಗಟ್ಟೆಗಳಲ್ಲಿ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ ಒಂದರಂತೆ ಯುವ, ವಿಕಲಚೇತನ, ಪಾರಂಪರಿಕ ಹಾಗೂ ವಿಷಯಾಧಾರಿತ ಆಧಾರಿತ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಮತದಾನ ಪಾರದರ್ಶಕತೆ ಕಾಪಾಡುವ ಹಿನ್ನಲೆಯಲ್ಲಿ ಜಿಲ್ಲೆಯ 828 ಮತಗಟ್ಟೆಗಳಲ್ಲಿ ವೆಬ್‍ಕಾಸ್ಟಿಂಗ್ ನಡೆಯಲಿದೆ. ಜಿಲ್ಲೆಯಲ್ಲಿ ಮತದಾನಕ್ಕಾಗಿ 2319 ಬ್ಯಾಲೆಟ್ ಯುನಿಟ್, 1979 ಕಂಟ್ರೋಲ್ ಯುನಿಟ್ ಹಾಗೂ 2225 ವಿವಿಪ್ಯಾಟ್‍ಗಳನ್ನು ಬಳಸಲಾಗುತ್ತಿದೆ.
7648 ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿ ನೇಮಕ: ಜಿಲ್ಲೆಯಲ್ಲಿ ಚುನಾವಣಾ ಕಾರ್ಯ ನಿರ್ವಹಿಸಲು ಒಟ್ಟು 7648 ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ.
ಇದರಲ್ಲಿ 1912 ಪಿ.ಆರ್.ಓ(ಮತಗಟ್ಟೆ ಅಧ್ಯಕ್ಷೀಯ ಅಧಿಕಾರಿ) 1912 ಎ.ಪಿ.ಆರ್.ಓ(ಸಹಾಯಕ ಮತಗಟ್ಟೆ ಅಧ್ಯಕ್ಷೀಯ ಅಧಿಕಾರಿ) ಹಾಗೂ 3824 ಪಿ.ಓ (ಮತಗಟ್ಟೆ ಅಧಿಕಾರಿ) ಇದ್ದಾರೆ. ಪ್ರತಿ ಮತಗಟ್ಟೆ ಓರ್ವ ಪಿ.ಆರ್.ಓ, ಓರ್ವ ಎ.ಪಿ.ಆರ್.ಓ ಹಾಗೂ ಇಬ್ಬರು ಪಿಓಗಳನ್ನು ನಿಯೋಜಿಸಲಾಗಿದೆ. ಮತದಾನ ಕಾರ್ಯಕ್ಕೆ ನಿಯೋಜಿಸಿರುವ ಮತಗಟ್ಟೆ ಅಧಿಕಾರಿಗಳಿಗೆ ಈಗಾಗಲೇ ತರಬೇತಿಯನ್ನು ನೀಡಲಾಗಿರುತ್ತದೆ. ಇದರೊಂದಿಗೆ ಜಿಲ್ಲೆಯಲ್ಲಿ 175 ಮೈಕ್ರೋ ಅಬ್ಸರ್‍ವರ್‍ಗಳನ್ನ ನೇಮಿಸಾಗಿದೆ.