ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಒಂದೇ ದಿನ ಬಾಕಿ ಇದೆ. ಇಂದು ಅದ್ದೂರಿ ಪ್ರಚಾರಕ್ಕೆ ತೆರೆ ಬೀಳಲಿದ್ದು, ನಾಳೆ ಮನೆ ಮನೆ ಪ್ರಚಾರ ನಡೆಯಲಿದೆ. ಈ ಮಧ್ಯೆ ಇಂದಿನಿಂದಾನೇ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗುತ್ತದೆ. ಇಂದು ಸಂಜೆಯಿಂದ ಮಧ್ಯ ಮಾರಾಟ ಮಾಡುವಂತಿಲ್ಲ. ಹೀಗಾಗಿ ಮದ್ಯ ಪ್ರಿಯರು ಅಂಗಡಿಗಳ ಮುಂದೆ ಹೆಚ್ಚಾಗುವ ಸಾಧ್ಯತೆ ಇದೆ.
ಇಂದು ಮಾತ್ರವಲ್ಲ, ಇಂದಿನಿಂದ ಮೂರು ದಿನಗಳ ಕಾಲ ಮದ್ಯ ಮಾರಾಟಕ್ಕೆ ಬ್ರೇಕ್ ಬೀಳಲಿದೆ. ಮತದಾನ ಹಿಂದಿನ ದಿನ ಮದ್ಯ ಹಂಚುವ ಸಾಧ್ಯತೆಯೂ ಇರಲಿದೆ. ಹೀಗಾಗಿ ಅದನ್ನು ತಡೆಯಲು ಮದ್ಯ ಮಾರಾಟ ನಿಷೇಧ ಮಾಡಲಾಗಿದೆ.
ಮದ್ಯ ಮಾರಾಟ ನಿಷೇಧಿಸುವಂತೆ ಚುನಾವಣಾ ಆಯೋಗ ಹಾಗೂ ಅಬಕಾರಿ ಇಲಾಖೆ ಆದೇಶ ಹೊರಡಿಸಿದೆ. ಈಗಾಗಲೇ ಎಲ್ಲಾ ಪಬ್, ಮದ್ಯದ ಅಂಗಡಿಗಳಿಗೆ ಆದೇಶ ಪ್ರತಿ ನೀಡಲಾಗಿದೆ. ಮೂರು ದಿನಗಳ ಕಾಲ ಡ್ರೈ ಡೇ ಆಚರಿಸಲಾಗುತ್ತದೆ.