ಹೊಳಲ್ಕೆರೆ, (ಮೇ 7) : ಜನಪ್ರತಿನಿಧಿಗಳು ಅಭಿವೃದ್ಧಿ ಕೆಲಸ ಮಾಡಿಸಲು ಅಧಿಕಾರಿಗಳಿಗೆ ಮಾತಿನ ಏಟು ನೀಡಬೇಕು. ಆದರೆ, ಕ್ಷೇತ್ರದ ಶಾಸಕ ಎಂ.ಚಂದ್ರಪ್ಪ ಮತ ಹಾಕಿದ ಜನರ ಮೇಲೆಯೇ ದರ್ಪ ತೋರುತ್ತಿದ್ದು, ಇವರ ಈ ನಡೆಗೆ ಮತದಾನದ ಮೂಲಕ ತಕ್ಕ ಪಾಠ ಕಲಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮನವಿ ಮಾಡಿದರು.
ಪಟ್ಟಣದ ವಿವಿಧ ವಾರ್ಡ್‍ಗಳಲ್ಲಿ ಭಾನುವಾರ ಮತಯಾಚನೆ ಸಂದರ್ಭ ಮಾತನಾಡಿ, ನಾನು ಕೂಡ ಸಂಸದನಾಗಿದ್ದ ಸಂದರ್ಭ ಜನಪರ ಕೆಲಸ ಮಾಡಿಸಲು ಕೆಲವೊಮ್ಮೆ ಅಧಿಕಾರಿಗಳ ಮೇಲೆ ಸಿಟ್ಟಾಗಿದ್ದೇನೆ. ನನಗಿಂತಲೂ ಸಿಟ್ಟನ್ನು ಆಂಜನೇಯ ಮಾಡಿಕೊಂಡಿದ್ದಾರೆ.
ಆದರೆ, ಎಂದೂ ಕೂಡ ತಮಗೆ ಮತ ಹಾಕಿದ ಜನರ ಮೇಲೆ ದರ್ಪ ತೋರಿಲ್ಲ. ಆದರೆ, ಈ ಕ್ಷೇತ್ರದ ಬಿಜೆಪಿ ಶಾಸಕರು ಪ್ರತಿದಿನ ಅಶ್ಲೀಲ ಭಾಷೆಗಳ ಮೂಲಕ ಜನರನ್ನು ನಿಂದಿಸಿದ್ದಾರೆ. ಇದರಿಂದ ಬೇಸತ್ತು ಸಜ್ಜನ ರಾಜಕಾರಣಿ ಮಾಜಿ ಶಾಸಕ ಪಿ.ರಮೇಶ್ ಅವರ ಪುತ್ರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಶಿವಕುಮಾರ್ ಸೇರಿ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ ಎಂದರು.
ಕೆರೆ ಹೂಳೆತ್ತುವುದು, ರಸ್ತೆ ಸೇರಿ ವಿವಿಧ ಕಾಮಗಾರಿಗಳಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಆಗಿದೆ ಎಂದು ಬಿಜೆಪಿ ಕಾರ್ಯಕರ್ತರೇ ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನೂ ಜನರು ಭ್ರಷ್ಟ ಶಾಸಕನ ವಿರುದ್ಧ ಎಲ್ಲೆಡೆ ಆಕ್ರೋಶಗೊಂಡಿದ್ದಾರೆ. ಆಂಜನೇಯ ಅಧಿಕಾರದ ಅವಧಿಯ ಸುವರ್ಣ ಯುವವನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಸಿಲಿಂಡರ್, ಅಡುಗೆ ಎಣ್ಣೆ, ಪೆಟ್ರೋಲ್ ಬೆಲೆಯನ್ನು ಮೂರುಪಟ್ಟು ಹೆಚ್ಚಿಸಿರುವುದು ಡಬಲ್ ಇಂಜಿನ್ ಸರ್ಕಾರದ ಸಾಧನೆ. ಮತದಾನಕ್ಕೆ ಬರುವ ಮುನ್ನ ಮತದಾರರು ಸಿಲಿಂಡರ ಮುಖ ನೋಡಿಕೊಂಡು ಬಂದರೆ, ಜೀವನ ಪರ್ಯಂತ ಬಿಜೆಪಿಗೆ ಮತವನ್ನೇ ಹಾಕುವುದಿಲ್ಲ ಎಂದರು.
ಆಂಜನೇಯ ಗೆಲ್ಲುವುದು ನಿಶ್ಚಿತವಾಗಿದೆ. ಆದರೆ, 75 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿ ಕ್ಷೇತ್ರದ ಜನರು ರಾಜ್ಯದಲ್ಲಿಯೇ ದಾಖಲೆ ಬರೆಯುವ ಮೂಲಕ ದರ್ಪ ತೋರಿದವರನ್ನು ನಾವು ಸುಮ್ಮನೆ ಬಿಡುವುದಿಲ್ಲ ಎಂಬ ಸಂದೇಶ ನೀಡಬೇಕು ಎಂದು ಕೋರಿದರು.
ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಎಚ್.ಆಂಜನೇಯ ಮಾತನಾಡಿ, ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಕ್ಷೇತ್ರಕ್ಕೆ ಬಂದೇ ಇಲ್ಲ, ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿರುವ ಶಾಸಕ ಚಂದ್ರಪ್ಪನಿಗೆ ಜನರೇ ಸ್ಥಳದಲ್ಲಿ ಛೀಮಾರಿ ಹಾಕಿ ಕಳುಹಿಸುತ್ತಿದ್ದಾರೆ ಎಂದರು.
ಒಮ್ಮೆ ಹೊಳಲ್ಕೆರೆ ಪಟ್ಟಣದ ವಿಶಾಲ ರಸ್ತೆ, ವಾಲ್ಮೀಕಿ, ಕನಕ, ಪತ್ರಕರ್ತರ, ವಕೀಲ ಸೇರಿ ವಿವಿಧ ಸಮುದಾಯ ಭವನಗಳು, ಚಿತ್ರಹಳ್ಳಿ, ರಾಮಗಿರಿ, ಮಲ್ಲಾಡಿಹಳ್ಳಿ ಮಾರ್ಗದಲ್ಲಿ ನಿರ್ಮಾಣಗೊಂಡಿರುವ ಬೃಹತ್ ಕಟ್ಟಡಗಳು, ಹಳ್ಳಿ-ಹಳ್ಳಿಗಳಲ್ಲಿ ಸಿಮೇಂಟರ್ ರಸ್ತೆ, ಜಮೀನುಗಳಲ್ಲಿ ಕೊರೆಯಿಸಿರುವ ಕೊಳವೆಬಾವಿಗಳು ನನ್ನ ಅವಧಿಯಲ್ಲಿ ನಾನು ಮಾಡಿದ ಅಭಿವೃದ್ಧಿ ಕೆಲಸ ಕುರಿತು ಹೇಳುತ್ತವೆ. ಚಂದ್ರಪ್ಪನ ಐದು ವರ್ಷದ ಸಾಧನೆ ಕುರಿತು ಕೆರೆ ಬಳಿ ಹೋಗಿ ನಿಂತು ಕೇಳಿದರೆ ಇದರಲ್ಲಿ ಕೋಟಿ ಕೋಟಿ ಹಣ ನುಂಗಣ್ಣ ಮಾಡಲಾಗಿದೆ ಎಂದು ಕೆರೆ ಅಳಲು ತೋಡಿಕೊಳ್ಳುತ್ತದೆ ಎಂದು ತಿರುಗೇಟು ನೀಡಿದರು.
ಎಐಸಿಸಿ ವೀಕ್ಷಕ ಸಂಜಯ್ ದತ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಹೆಚ್.ಟಿ.ಹನುಮಂತಪ್ಪ, ಎಂ.ಪ್ರಕಾಶ್, ಕಾಂಗ್ರೆಸ್ ನಗರಘಟಕದ ಅಧ್ಯಕ್ಷ ಮಜರ್ ಉಲ್ಲಾಖಾನ್, ಪುರಸಭೆ ಸದಸ್ಯರಾದ ವಸಂತ ರಾಜಪ್ಪ, ವಿಜಯಸಿಂಹ ಖಾಟ್ರೋತ್, ಮನ್ಸೂರ್, ಕೆ.ಸಿ.ರಮೇಶ್, ವಿಜಯ್, ತಾಪಂ ಮಾಜಿ ಉಪಾಧ್ಯಕ್ಷ ಓಂಕಾರಸ್ವಾಮಿ, ಮುಖಂಡರಾದ ಪುರುಷೋತ್ತಮ್, ಇಮ್ರಾನ್, ಸೈಯದ್ ಸಹೀದ್, ಅಲೀಂವುಲ್ಲಾ ಷರೀಫ್, ನಟರಾಜ್, ಮಂಜುನಾಥ್, ಬಾಲುಪ್ರಕಾಶ್ ಉಪಸ್ಥಿತರಿದ್ದರು.
ಅನುಕಂಪ ಇಲ್ಲದ ದ್ವೇಷದ ರಾಜಕಾರಣಿ :
ದ್ವೇಷದ ರಾಜಕಾರಣ ಎಂದೂ ಕೂಡ ಕಾಂಗ್ರೆಸ್ಸಿಗರು ಮಾಡಿಲ್ಲ. ಆದರೆ, ಕಳೆದ ಬಾರಿ ಗೆದ್ದ ಎಂ.ಚಂದ್ರಪ್ಪ, ಬಡವರಿಗೆ ಆಂಜನೇಯ ಸಚಿವರಾಗಿ ಮಂಜೂರು ಮಾಡಿದ್ದ ಕೊಳವೆಬಾವಿ, ಮನೆಗಳಿಗೆ ತಡೆ ಹಾಕಿ ಸಮಸ್ಯೆ ಮಾಡಿದರು ಎಂದು ಮಾಜಿ ಶಾಸಕ ಎ.ವಿ.ಉಮಾಪತಿ ಮಾತನಾಡಿ ದೂರಿದರು.
ಸಾವಿರಕ್ಕೂ ಹೆಚ್ಚು ಕೊಳವೆಬಾವಿಗಳ ಮಂಜೂರಾತಿಗೆ ಅಡ್ಡಿಪಡಿಸಿದ್ದನ್ನು ವಿರೋಧಿಸಿ ರೈತಸಂಘದ ನೇತೃತ್ವದಲ್ಲಿ ಸಾವಿರಾರು ರೈತರು, ಫಲಾನುಭಿಗಳು ಸಿರಿಗೆರೆ ಮಠದ ಮೊರೆ ಹೋಗಿದ್ದರು. ಆದರೂ ದುರಹಂಕಾರಿ ಎಂ.ಚಂದ್ರಪ್ಪ, ಬಡವರ ಕುರಿತು ಅನುಕಂಪ ತೋರಲಿಲ್ಲ. ಹಣದ ದರ್ಪ ತೋರುತ್ತಿರುವ ಶಾಸಕ ಚಂದ್ರಪ್ಪನಿಗೆ ಠೇವಣಿ ಕೂಡ ಸಿಗದಂತೆ ಮಾಡಬೇಕು. ಎಚ್.ಆಂಜನೇಯ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಕೋರಿದರು.