ನಿಧಿ ಆಸೆ ತೋರಿಸಿ ಚಳ್ಳಕೆರೆ ಹೋಟೆಲ್ ಮಾಲೀಕನಿಗೆ ವಂಚನೆ : ಇಬ್ಬರ ಬಂಧನ

2 Min Read

 

ಚಿತ್ರದುರ್ಗ, (ಮೇ.01) : ನಿಧಿ ಆಸೆ ತೋರಿಸಿ ಹೋಟೆಲ್ ಮಾಲೀಕನಿಂದ ಹಣ, ಬೆಳ್ಳಿ, ಬಂಗಾರ, ಮೊಬೈಲ್ ಫೋನನ್ನು ಪಡೆದು ವಂಚನೆ ಮಾಡಿದ ಆರೋಪದ ಮೇಲೆ ಇಬ್ಬರನ್ನು ಚಳ್ಳಕೆರೆ ಪೊಲೀಸರು ಬಂಧಿಸಿದ್ದಾರೆ.

ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕಿನ ಸುರಪುರದ ಚೌಡೇಶ್ವರಿ ಹಾಳ ಗ್ರಾಮದ ಮುದ್ದುರಂಗಪ್ಪ ಹವಾಲ್ದಾರ್ ಮಧುಮತಿ ದಂಪತಿಗಳು ಬಂಧಿತ ಆರೋಪಿಗಳು. ಇವರಿಂದ ಸುಮಾರು 55,000/- ರೂ ಮೌಲ್ಯದ 10 ಗ್ರಾಂ ತೂಕದ ಬಂಗಾರದ ಸರ,  71 ಗ್ರಾಂ ತೂಕದ ಬೆಳ್ಳಿಯ ಕಾಲು ಚೈನ್, 1,00,000/- ನಗದು ಹಣ, ಹಾಗೂ 1,40,000/- ರೂ ಬೆಲೆಯ ಕೆಎ-33 ಎಂ-1711 ನಂಬರಿನ ಟಾಟ ಇಂಡಿಕಾ ವಿಸ್ಟಾ  (ಒಟ್ಟು, 2,98,000/- ರೂಪಾಯಿ ಬೆಲೆಬಾಳುವ) ಕಾರನ್ನು ಚಳ್ಳಕೆರೆ ಪೊಲೀಸರು
ವಶಪಡಿಸಿಕೊಂಡಿದ್ದಾರೆ.

ಘಟನೆ ವಿವರ : ಚಳ್ಳಕೆರೆ ನಗರದ ಆಶ್ವಿನಿ ಹೊಟೇಲ್‍ನ ಮಾಲೀಕರಾದ ಶಂಕರಪ್ಪ ರವರ ಹೊಟೇಲ್‍ಗೆ ದಿನಾಂಕ 23.05.2021 ರಂದು ಊಟಕ್ಕೆ ಮಧುಮತಿಗೆ ಮೈಮೇಲೆ ದೇವರು ಬಂದಿರುವ ಹಾಗೇ ನಟಿಸಿ ನಿಮಗೆ ನಿಧಿ ಸಿಗುತ್ತದೆ. ನೀವು ನಿಧಿ ಪಡೆಯದಿದ್ದರೆ ನಿಮಗಾಗಲೀ ನಿಮ್ಮ ಮಗನಿಗಾಗಲೀ ಮರಣ ಬರುತ್ತದೆ ಎಂದು ಹೆದರಿಸಿ 21 ದಿನಗಳ ಕಾಲ ಪೂಜೆ ಮಾಡಬೇಕೆಂದು ಎಂದು ಹೇಳಿ ದಿನಕ್ಕೆ 10,000/- ರೂಪಾಯಿಗಳಂತೆ ಒಟ್ಟು 1,80,000/- ರೂಗಳನ್ನು ಪಡೆದಿರುತ್ತಾರೆ.

ನಂತರ ವಜ್ರ ಹರಳುಗಳು ಸಿಕ್ಕಿರುತ್ತವೆ ಅದನ್ನು ಮಾರಾಟ ಮಾಡಲು ಹಾಗೂ ಹರಳುಗಳನ್ನು ಜೋಡಿಸಲು ಬಂಗಾರದ ಅವಶ್ಯಕತೆ ಇದೆ ಎಂದು ಹೇಳಿ 15 ಗ್ರಾಂ, ಬಂಗಾರ, 10 ತೊಲ ಬೆಳ್ಳಿ, ವಿವೋ ಕಂಪನಿಯ ಮೊಬೈಲ್‍ನ್ನು ತೆಗೆದುಕೊಂಡು ಹೋಗಿರುತ್ತಾರೆ. ಹೀಗೆ ಹಂತ ಹಂತವಾಗಿ 1,43,000/- ರೂಪಾಯಿಗಳನ್ನು ಪಡೆದು ಲಾಭ ಪಡೆಯಬೇಕೆಂಬ
ದುರುದ್ದೇಶದಿಂದ ನಿಧಿ ದೊರೆಯುತ್ತದೆ ಎಂದು ಸುಳ್ಳು ಹೇಳಿ ವಂಚಿಸಿರುತ್ತಾರೆ.

ಹೋಟೆಲ್ ಮಾಲೀಕ ಶಂಕರಪ್ಪ ತಮಗಾದ ವಂಚನೆಯ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡುತ್ತಾರೆ.

ಈ ದೂರಿನನ್ವಯ ಆರೋಪಿತರನ್ನು ಪತ್ತೆ ಮಾಡಲು ಪರಶುರಾಮ್.ಕೆ, ಐ.ಪಿ.ಎಸ್,  ಪೊಲೀಸ್ ಅಧೀಕ್ಷಕರು,
ಚಿತ್ರದುರ್ಗ ಜಿಲ್ಲೆ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರ
ಎಸ್.ಜೆ.ಕುಮಾರಸ್ವಾಮಿ ರವರು ಮತ್ತು ಚಳ್ಳಕೆರೆ ಉಪಾಧೀಕ್ಷಕರಾದ ರಮೇಶ್ ಕುಮಾರ್ ರವರ
ಮಾರ್ಗದರ್ಶನದಲ್ಲಿ ಚಳ್ಳಕೆರೆ ಠಾಣೆಯ ಪೊಲೀಸ್ ನಿರೀಕ್ಷಕರಾದ ಆರ್.ಎಫ್ ದೇಸಾಯಿರವರ ನೇತೃತ್ವದಲ್ಲಿ ಚಳ್ಳಕೆರೆ ಪೊಲೀಸ್ ಠಾಣೆ ‌ಪಿಎಸ್‍ಐ ಶ್ರೀಮತಿ ಪ್ರಮೀಳಮ್ಮ ಹಾಗೂ ಸಿಬ್ಬಂದಿಯವರಾದ ಹಾಲೇಶ್, ಗಂಗಮ್ಮ, ಶಿವರಾಜ್, ಶ್ರೀಧರ, ವಸಂತ, ಧರಣ್ಣವರ್, ರವರನ್ನೊಳಗೊಂಡ ತಂಡ ಈ ಪತ್ತೆ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ತಂಡದ ಸಾಧನೆಯನ್ನು ಪೊಲೀಸ್ ಅಧೀಕ್ಷಕರಾದ ಕೆ. ಪರುಶುರಾಮ ಅವರು ಶ್ಲಾಘಿಸಿರುತ್ತಾರೆ. ಮತ್ತು ಸಾರ್ವಜನಿಕರು ಈ ರೀತಿ ವಂಚನೆಗೆ ಒಳಗಾಗದೇ ಜಾಗೃತರಾಗಿರಲು ಹಾಗೂ ವಂಚನೆಗೊಳಗಾಗಿದ್ದರೆ ಪೊಲೀಸ್ ಠಾಣೆಗೆ ಬಂದು ದೂರು ನೀಡಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *