ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಮೊಳಕಾಲ್ಮುರು : ಕೊರೋನಾ ಸಂಕಷ್ಟ ಕಾಲದಲ್ಲಿ ಬಡವರು ಯಾರು ಹಸಿವಿನಿಂದ ನರಳಬಾರದೆಂದು ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಪ್ರತಿ ಬಡವರಿಗೆ ಹತ್ತು ಕೆ.ಜಿ. ಅಕ್ಕಿ ನೀಡಿದ್ದನ್ನು ಏಳು ಕೆ.ಜಿ.ಗೆ ಇಳಿಸಿ ತಿನ್ನೋ ಅನ್ನ ಕಿತ್ತುಕೊಂಡ ಬಿಜೆಪಿ.ಯನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸಿ ಬಡವರು, ಹಿಂದುಳಿದವರು, ದೀನ ದಲಿತರು, ಅಲ್ಪಸಂಖ್ಯಾತರ ಪರವಾಗಿರುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಾರೇಹಳ್ಳಿ ಉಲ್ಲಾಸ್ ಮತದಾರರಲ್ಲಿ ಮನವಿ ಮಾಡಿದರು.
ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ.ಗೋಪಾಲಕೃಷ್ಣರವರ ಪರವಾಗಿ ದೊಡ್ಡುಳ್ಳಾರ್ತಿ ಗ್ರಾಮದಲ್ಲಿ ಶುಕ್ರವಾರ ಬಿರುಸಿನ ಮತ ಪ್ರಚಾರ ನಡೆಸಿ ಮಾತನಾಡಿದ ಕಾರೆಹಳ್ಳಿ ಉಲ್ಲಾಸ್ ಮುಂದಿನ ತಿಂಗಳ ಹತ್ತರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಹತ್ತು ಕೆ.ಜಿ.ಅಕ್ಕಿ, ಗೃಹಜ್ಯೋತಿ ಯೋಜನೆಯಡಿ ಇನ್ನೂರು ಯೂನಿಟ್ ಉಚಿತ ಕರೆಂಟ್, ಗೃಹಲಕ್ಷ್ಮಿ ಯೋಜನೆಯಡಿ ಮನೆಯೊಡತಿಗೆ ಪ್ರತಿ ತಿಂಗಳು ಎರಡು ಸಾವಿರ ರೂ.ಗಳನ್ನು ಉಚಿತವಾಗಿ ನೀಡಲಾಗುವುದು. ಪದವೀಧರ ನಿರುದ್ಯೋಗಿಗಳಿಗೆ ತಿಂಗಳಿಗೆ ಮೂರು ಸಾವಿರ ರೂ. ಡಿಪ್ಲಮೊ ಪಡೆದವರಿಗೆ ಪ್ರತಿ ತಿಂಗಳು ಒಂದುವರೆ ಸಾವಿರ ರೂ.ಗಳನ್ನು ಎರಡು ವರ್ಷಗಳ ಕಾಲ ಕೊಡಲಾಗುವುದು. ಅದಕ್ಕಾಗಿ ನಲವತ್ತು ಪರ್ಸೆಂಟ್ ಲಂಚ ಹೊಡೆಯುವ ಕಮೀಷನ್ ಸರ್ಕಾರವನ್ನು ಕಿತ್ತೆಸೆದು ಕಾಂಗ್ರೆಸ್ಗೆ ಅಧಿಕಾರ ನೀಡಿ ಎಂದು ಮತದಾರರಲ್ಲಿ ವಿನಂತಿಸಿದರು.
ವರ್ಷಕ್ಕೆ ಎರಡು ಕೋಟಿ ಯುವಕರಿಗೆ ಉದ್ಯೋಗ ನೀಡುವುದಾಗಿ ಚುನಾವಣೆ ಪೂರ್ವದಲ್ಲಿ ನಂಬಿಸಿ ಎರಡನೆ ಬಾರಿಗೆ ದೇಶದ ಪ್ರಧಾನಿಯಾಗಿರುವ ನರೇಂದ್ರಮೋದಿಯನ್ನು ಉದ್ಯೋಗ ಕೇಳಿದರೆ ಪಕೋಡ ಮಾರಿ ಎಂದು ಯುವ ಜನಾಂಗವನ್ನು ಕೀಳಾಗಿ ಕಂಡಿದ್ದಾರೆ. ದೇಶದ ದಿಕ್ಸೂಚಿಯಾಗಿರುವ ಈ ಬಾರಿಯ ವಿಧಾನಸಭೆ ಚುನಾವಣೆಯನ್ನು ಮತದಾರರು ಗಂಭೀರವಾಗಿ ತೆಗೆದುಕೊಳ್ಳಿ.
ಬಿಜೆಪಿ ಯವರು ಸಾಮಾಜಿಕ ಜಾಲತಾಣ, ವಾಟ್ಸ್ಪ್, ಆನ್ಲೈನ್ ಮೂಲಕ ಮತದಾರರ ಬಳಿ ಹೋಗುತ್ತಿದ್ದಾರೆ. ಅದೇ ಕಾಂಗ್ರೆಸ್ ಜನರ ಬಳಿ ಬರುತ್ತಿದೆ. ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬದ ರೀತಿ ಆಚರಿಸೋಣ.
ಬರಗಾಲದಲ್ಲಿ ದೇಶದ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಕೆಂಪು ಜೋಳ ತಂದು ಜನರ ಪ್ರಾಣ ಉಳಿಸಿದ ಮಹತಾಯಿ. ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಬಡವರಿಗೆ ಕೆಲಸ ಸಿಗುತ್ತಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಗಗನಕ್ಕೇರಿದೆ. ಜನಸಾಮಾನ್ಯರು ನೆಮ್ಮದಿಯಿಂದ ಬದುಕಬೇಕಾಗಿರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಕಾರೆಹಳ್ಳಿ ಉಲ್ಲಾಸ್ ಮತದಾರರಲ್ಲಿ ಕೋರಿದರು.
ತಳಕು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಹರೀಶ್, ಮೊಳಕಾಲ್ಮುರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಡಾ.ದಾದಪೀರ್, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಾಲುವೆಹಳ್ಳಿ ಹರೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಂಕರಮ್ಮ ಓಂಕಾರಪ್ಪ, ಸದಸ್ಯರಾದ ರಾಜಣ್ಣ, ಲಿಂಗರಾಜು, ಮಾರುತಿ ಇನ್ನು ಅನೇಕ ಯುವ ಕಾಂಗ್ರೆಸ್ ಮುಖಂಡರುಗಳು ಮತಯಾಚನೆಯಲ್ಲಿದ್ದರು.