ತುಮಕೂರು: ವಿಧಾನಸಭಾ ಚುನಾವಣಾ ಹಿನ್ನೆಲೆ ಪ್ರಚಾರ ಕಾರ್ಯ ಜೋರಾಗಿದೆ. ಹೀಗೆ ಮಾಜಿ ಡಿಸಿಎಂ ಜಿ ಪರಮೇಶ್ವರ್ ಪ್ರಚಾರ ನಡೆಸುತ್ತಿದ್ದಾಗ ಕಲ್ಲು ತೂರಾಟ ನಡೆದಿದ್ದು, ಅವರ ತಲೆಗೆ ಗಾಯವಾಗಿದೆ. ಕಿಡಿಗೇಡಿಗಳು ಮಾಡಿದ ಕೆಲಸಕ್ಕೆಅವರ ತಲೆಯಲ್ಲು ರಕ್ತಸ್ರಾವವಾಗಿದೆ.
ಇಂದು ಕೊರಟಗೆರೆ ತಾಲೂಕಿನ ಭೈರನಹಳ್ಳಿಯಲ್ಲಿ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಗುಂಪಿನಲ್ಲಿ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ಇದು ಪರಮೇಶ್ವರ್ ಅವರ ತಲೆಗೆ ತಗುಲಿದೆ. ಪರಮೇಶ್ವರ್ ಅವರ ಬೆಂಬಲಿಗರು, ಅವರನ್ನು ಎತ್ತಿಕೊಂಡು ಕುಣಿಯುತ್ತಿದ್ದಾಗ, ಹೂವಿನ ನಡುವೆಯೇ ಕಲ್ಲು ತೂರಾಟ ನಡೆಸಿದ್ದಾರೆ.
ಕಲ್ಲು ಬಿದ್ದ ಕೂಡಲೇ ತಲೆಯನ್ನು ಹಿಡಿದುಕೊಂಡಿದ್ದಾರೆ. ತಕ್ಷಣ ಅವರನ್ನು ಅಕ್ಕಿರಾಂಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಪ್ರಥಮ ಚಿಕಿತ್ಸೆ ನೀಡಲಾಗಿದೆ. ಸದ್ಯ ಅವರು ಸುಧಾರಿಸಿಕೊಂಡಿದ್ದಾರೆ. ಈಗ ತುಮಕೂರಿನ ಸಿದ್ಧಾರ್ಥ ಮೆಡಿಕಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
“ಜಿ ಪರಮೇಶ್ವರ್ ಅವರು ನಾಮಪತ್ರ ಸಲ್ಲಿಸುವಾಗಲೂ ತಾಲೂಕು ಕಚೇರಿ ಬಳಿ ದಾಳಿ ನಡೆಸುವ ಯತ್ನ ಮಾಡಲಾಗಿತ್ತು. ಆದರೆ ಈ ವೇಳೆ ಪೊಲೀಸ್ ಪೇದೆಯೊಬ್ಬರಿಗೆ ಗಾಯವಾಗಿತ್ತು. ಪರಮೇಶ್ವರ್ ಯಾರೊಬ್ಬರ ದ್ವೇಷವನ್ನು ಕಟ್ಟಿಕೊಂಡವರಲ್ಲ” ಎಂದು ಕಾಂಗ್ರೆಸ್ ನಾಯಕ ರಮೇಶ್ ತಿಳಿಸಿದ್ದಾರೆ.