ಹಿರಿಯೂರು, (ಏ.24) : ಹಿರಿಯೂರು ಕ್ಷೇತ್ರದಲ್ಲಿ ಅಹಿಂದ ವರ್ಗ, ಅದರಲ್ಲೂ ಕುರುಬ ಸಮಾಜ ನಿರ್ಣಾಯಕ ಪಾತ್ರ ವಹಿಸಲಿದೆ. ಆದರೆ, ಸಮಾಜ ಅಭಿವೃದ್ಧಿಗೆ ಇಲ್ಲಿಯವರೆಗೂ ಜನಪ್ರತಿನಿಧಿಗಳು ಗಮನಹರಿಸಿಲ್ಲ ಎಂದು ಕುರುಬ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ಆದಿವಾಲದಲ್ಲಿ ಭಾನುವಾರ ಆಯೋಜಿಸಿದ್ದ ಕುರುಬ ಸಮಾಜದ ಮುಖಂಡರ ಸಭೆಯಲ್ಲಿ ಅನೇಕರು ತಮ್ಮ ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಹಿಂದುಳಿದ ವರ್ಗದ ಹಿರಿಯಣ್ಣ ಎಂದೇ ಗುರುತಿಸಿಕೊಂಡಿರುವ ಕುರುಬರ ಸ್ಥಿತಿ ಹಿರಿಯೂರು ಕ್ಷೇತ್ರದಲ್ಲಿ ಶೋಚನೀಯವಾಗಿ ಇದೆ ಎಂದರು.
ರಾಜಕೀಯ ಸ್ಥಾನಮಾನಗಳು ದೊರೆತಿಲ್ಲ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಬಹಳ ಹಿಂದುಳಿದಿದೆ. ಕ್ಷೇತ್ರದಲ್ಲಿ ಅಭ್ಯರ್ಥಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವ ಕುರುಬ ಸಮಾಜಕ್ಕೆ ತಾಲೂಕು ಕೇಂದ್ರದಲ್ಲಿ ಸಮುದಾಯ ಭವನ ಇಲ್ಲ, ರಾಯಣ್ಣ, ಕನಕದಾಸ ವೃತ್ತ, ಪ್ರತಿಮೆ ಮಾಡುವ ಇಚ್ಛಾಶಕ್ತಿ ಇಲ್ಲಿಯವರೆಗೂ ಪ್ರದರ್ಶಿಸಿಲ್ಲ. ಜೊತೆಗೆ ಸಮುದಾಯಕ್ಕೆ ಒಬ್ಬ ಗಟ್ಟಿ ನಾಯಕ ದೊರೆತಿಲ್ಲ ಪರಿಣಾಮ ನಮ್ಮನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಬೇಸರಿಸಿದರು.
ಆದರೆ ಇತ್ತೀಚೆಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಬಿ.ಸೋಮಶೇಖರ್, ಸಮುದಾಯದ ಜೊತೆ ಗಟ್ಡಿಯಾಗಿ ನಿಂತಿದ್ದಾರೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಸೋಮಣ್ಣ, ಒಂದೂವರೆ ವರ್ಷದಿಂದ ಕೋಟ್ಯಂತರ ಹಣ ವೆಚ್ಚ ಮಾಡಿ ಪಕ್ಷ ಮತ್ತು ಅಹಿಂದ ಸಮಾಜ ಸಂಘಟಿಸಿದ್ದಾರೆ. ಇಂತಹ ಸಂಘಟಕನಿಗೆ ಟಿಕೆಟ್ ತಪ್ಪಿರುವುದು ಸಮುದಾಯಕ್ಕೆ ನೋವು ಆಗಿದೆ. ಆದ್ದರಿಂದ ಈ ಬಾರಿ ನಮ್ಮ ನಡೆ ಬಹಳ ಎಚ್ಚರದಿಂದ ಇರಬೇಕು ಎಂದು ಅಭಿಪ್ರಾಯಪಟ್ಟ ಮುಖಂಡರು, ಅಹಿಂದ ಅದರಲ್ಲೂ ಕುರುಬ ಸಮುದಾಯ ಸಂಘಟಿಸಿರುವ ಬಿ.ಸೋಮಶೇಖರ್ ಅವರು ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ ಎಂದು ನಿರ್ಣಯಿಸಿದರು.
ಬಳಿಕ ಮಾತನಾಡಿದ ಬಿ.ಸೋಮಶೇಖರ್, ನಾನು ಕಾಂಗ್ರೆಸ್ ಪಕ್ಷದ ಕಟ್ಟಾಳು. ನನಗೆ ಮೊದಲು ಸಮಾಜ, ಬಳಿಕ ಪಕ್ಷ, ನಂತರ ನನ್ನ ರಾಜಕೀಯ ಬದುಕು. ಆದ್ದರಿಂದ ಸಮಾಜದ ಮುಖಂಡನಾಗಿ ಕುರುಬರ ಜೊತೆ ಇತರೆ ಹಿಂದುಳಿದವರ ಹಿತ ಕಾಯುವ ಕೆಲಸ ಮಾಡುತ್ತೇನೆ. ನಿಮ್ಮ ನಂಬಿಕೆ ಚ್ಯುತಿ ತರದೇ ಎರಡು ದಿನದಲ್ಲಿ ಉತ್ತಮ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಕುರುಬ ಸಮುದಾಯ ರಾಜ್ಯದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿದೆ. ಆದರೆ ರಾಜಕೀಯ ಸ್ಥಾನಮಾನ ನಿರೀಕ್ಷೆ ಪ್ರಮಾಣದಲ್ಲಿ ದೊರೆಯುತ್ತಿಲ್ಲ. ಎಸ್.ಟಿ. ಮೀಸಲು ಸೌಲಭ್ಯ ನೀಡುವಲ್ಲಿ ಅನ್ಯಾಯ ಮಾಡಲಾಗಿದೆ. ಕ್ಷೇತ್ರದಲ್ಲಿ, ಜಿಲ್ಲೆಯಲ್ಲಿ ಕುರುಬರಿಗೆ ಸಮುದಾಯ ಭವನ ಇಲ್ಲ. ಈ ನಿಟ್ಡಿನಲ್ಲಿ ನಮ್ಮ ರಾಜಕೀಯ ನಡೆ ದೂರದೃಷ್ಠಿಯಿಂದ ಕೂಡಿರಬೇಕು ಎಂದು ಹೇಳಿದರು.
ಕುರುಬ ಸಂಘದ ತಾಲ್ಲೂಕಾಧ್ಯಕ್ಷ ಮಹಾಂತೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಲೋಕೇಶ್ವರಪ್ಪ, ಸಂಗೇನಹಳ್ಳಿ ಶ್ರೀಧರ್, ಸೊಂಡೆಕೆರೆ ಶಿವಣ್ಣ, ಸಕ್ಕರ ಕೆಂಪಣ್ಣ, ಸತೀಶ್, ಉಮೇಶ್, ಶಿಡ್ಲಯ್ಯನಕೋಟೆ ಮಂಜುನಾಥ್, ನಂದಿಹಳ್ಳಿ ರಂಗಸ್ವಾಮಿ, ನಾಗರಾಜ್, ಬಾಬು, ಮುದ್ದಣ್ಣ, ವೆಂಕಟೇಶ್ ಸೇರಿದಂತೆ ವಿವಿಧ ಹಳ್ಳಿಗಳ ಮುಖಂಡರು ಪಾಲ್ಗೊಂಡಿದ್ದರು.