ಚಿತ್ರದುರ್ಗ, (ಏ.19): ಹಿರಿಯ ಬಿಜೆಪಿ ಕಾರ್ಯಕರ್ತ ತುರುವನೂರಿನ ಇಂಟೂರು ವಾಸುದೇವರೆಡ್ಡಿ(85) ಬುಧವಾರ ಸಂಜೆ ನಿಧನರಾಗಿದ್ದಾರೆ.
ನಿವೃತ್ತ ಶಿಕ್ಷಕರೂ ಆಗಿರುವ ಮೃತರು ಪತ್ನಿ, ಚಳ್ಳಕೆರೆ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಶಿಧರ್ ಹಾಗೂ ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಜನಸಂಘದ ಕಾಲದಿಂದಲೂ ಸಂಘ ಪರಿವಾರದ ನಂಟು ಹೊಂದಿದ್ದ ವಾಸುದೇವರೆಡ್ಡಿ ಅವರನ್ನು ಇತ್ತೀಚೆಗೆ ಮುರುಘಾ ಮಠದಲ್ಲಿ ನಡೆದ ಬಿಜೆಪಿ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸನ್ಮಾನಿಸಿದ್ದರು.
ಆರೆಸ್ಸೆಸ್ಸ್ನ ತೃತೀಯ ವರ್ಷದ ಶಿಕ್ಷಣ ಪಡೆದಿದ್ದ ಅವರು, 1975ರ ತುರ್ತು ಪರಿಸ್ಥಿತಿಯಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು. ಜನಸಂಘ, ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
1972 ರಲ್ಲಿ ಚಿತ್ರದುರ್ಗದ ಜ್ಞಾನಭಾರತಿ ವಿದ್ಯಾಮಂದಿರದ ಸಂಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ಇಂಟೂರು ವಾಸುದೇವರೆಡ್ಡಿ, 1983 ರಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದರು.
ಇತ್ತೀಚಿನವರೆಗೂ ತುರುವನೂರು ಬಿಜೆಪಿ ಘಟಕದ ಅಧ್ಯಕ್ಷರೂ, ರಾಜ್ಯ ರೈತ ಮೋರ್ಚಾ ಸದಸ್ಯರೂ ಆಗಿ ಸೇವೆ ಸಲ್ಲಿಸುತ್ತಿದ್ದರು.
ಇಂಟೂರು ವಾಸುದೇವರೆಡ್ಡಿ ತುರುವನೂರು, ಶಿಕ್ಷಕರು. ಇಬ್ಬರು ಪುತ್ರಿಯರು, ಓರ್ವ ಪುತ್ರ. ಮಗ ಶಶಿಧರ್ ಚಳ್ಳಕೆರೆ ಬಿಜೆಪಿ ಪ್ರಧಾನ ಕಾರ್ಯದರ್ಶಿ. ಪತ್ನಿ ಇದ್ದಾರೆ.
ಏಪ್ರಿಲ್ 20 ರಂದು ತುರುವನೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.