ಚಿತ್ರದುರ್ಗ : ಇದೇ ಏಪ್ರಿಲ್ 20 ರಂದು ಬೆಳಿಗ್ಗೆ 7.04 ಕ್ಕೆ ಹೈಬ್ರಿಡ್ ಸೂರ್ಯಗ್ರಹಣ ಸಂಭವಿಸಲಿದೆ. ಗ್ರಹಣವು ಮದ್ಯಾಹ್ನ 12.29 ಕ್ಕೆ ಕೊನೆಗೊಳ್ಳುತ್ತದೆ. ಗ್ರಹಣದ ಒಟ್ಟು ಅವಧಿ 5 ಗಂಟೆ 24 ನಿಮಿಷಗಳು. ಆದರೆ ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ.
ಭೂಮಿಯ ಕಡೆಗೆ ಬರುವ ಸೂರ್ಯನ ಬೆಳಕನ್ನು ಚಂದ್ರನು ತಡೆಯುವುದರಿಂದ ಹೈಬ್ರಿಡ್ ಸೂರ್ಯಗ್ರಹಣ ಸಂಭವಿಸುತ್ತದೆ. ಭೂಮಿಯ ಮೇಲ್ಮೈ ವಕ್ರವಾಗಿರುವುದರಿಂದ ಚಂದ್ರನ ನೆರಳು ಪ್ರಪಂಚದಾದ್ಯಂತ ಚಲಿಸುವಾಗ ಗ್ರಹಣದ ಸಮಯದಲ್ಲಿ ಬದಲಾವಣೆಗಳು ಉಂಟಾಗಬಹುದು.ಇದನ್ನು ಹೈಬ್ರಿಡ್ ಸೂರ್ಯಗ್ರಹಣ ಎಂದು ಕರೆಯುತ್ತಾರೆ.
ಈ ಗ್ರಹಣವು ಪಶ್ಚಿಮ ಆಸ್ಟ್ರೇಲಿಯಾ, ಪೂರ್ವ ಇಂಡೋನೇಷ್ಯಾದಲ್ಲಿ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಾತ್ರ ಕಂಡುಬರುತ್ತದೆ. ಈ ಗ್ರಹಣವು ನಡೆಯುವುದರಿಂದ ಹವಾಮಾನ ಹಾಗೂ ಜನಜೀವನದ ಮೇಲೆ ಯಾವುದೇ ರೀತಿಯ ಪರಿಣಾಮ ಉಂಟಾಗುವುದಿಲ್ಲ ಎಂದು ಹವ್ಯಾಸಿ ಖಗೋಳ ವೀಕ್ಷಕರಾದ ಎಚ್.ಎಸ್.ಟಿ. ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.