ಬಾಬಾ ಸಾಹೇಬ್ ಅಂಬೇಡ್ಕರ್ ನೆನೆಯುವುದು ನಮ್ಮೆಲ್ಲರ ಕರ್ತವ್ಯ : ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

 

ಚಿತ್ರದುರ್ಗ,(ಏ.14) : ಸ್ವಾತಂತ್ರ್ಯ ಬಂದು 75 ವರ್ಷವಾಗಿದೆ. ದೇಶದ ಸುಭದ್ರ ಅಡಿಪಾಯಕ್ಕೆ ಸಂವಿಧಾನ ಕಾರಣವಾಗಿದೆ. ಇಂದಿಗೂ ದೇಶದ ಎಲ್ಲಾ ವಿಚಾರಗಳಿಗೆ ಸಂವಿಧಾನದಲ್ಲಿ ಉತ್ತರವಿದೆ. ಇಂತಹ ಮಹಾನ್ ಸಂವಿಧಾನ ರಚಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ದೇಶದ ಪ್ರಜೆಯಾಗಿ ನೆನೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ  ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 132ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ವ್ಯಕ್ತಿತ್ವ ಹಾಗೂ ಅವರಿಂದ ಕಲಿಯಬೇಕಾದ ವಿಷಯಗಳು ಹೆಚ್ಚಿವೆ. ಅಂಬೇಡ್ಕರ್ ಅವರ ಓದಿನ ಮೇಲಿನ ಪ್ರೀತಿ ನಮ್ಮೆಲ್ಲರಿಗೂ ಮಾದರಿಯಾಗಿದೆ. ಯುವಕರು ಅಂಬೇಡ್ಕರ್ ಚರಿತ್ರೆ, ಅವರು ನೀಡಿದ ಕೊಡುಗೆಗಳನ್ನು ಓದಿ ತಿಳಿದುಕೊಳ್ಳಬೇಕು. ಇದರಿಂದ ನಮ್ಮ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶ್ವದಲ್ಲಿನ ಎಲ್ಲಾ ಪ್ರಜಾಪ್ರಭುತ್ವ  ಸೇರಿದಂತೆ ಎಲ್ಲಾ ರಾಷ್ಟ್ರಗಳ ಸಂವಿಧಾನಗಳನ್ನು ಓದಿ ಭಾರತ ಬೃಹತ್ ಸಂವಿಧಾನ ರಚನೆ ಮಾಡಿದ್ದಾರೆ. ಮುಂದಿನ ಪೀಳಿಗೆ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನ ತಿದ್ದುಪಡಿಗೂ ಅವಕಾಶವನ್ನು ಅಂಬೇಡ್ಕರ್ ಸಂವಿಧಾನದಲ್ಲಿ ಕಲ್ಪಿಸಿದ್ದಾರೆ. ಇದು ಅವರ ದೂರದೃಷ್ಟಿ ತೋರಿಸುತ್ತದೆ ಎಂದರು.

ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಡಾ.ಬಿ.ಎಂ.ಗುರುನಾಥ್ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರಾರಂಭದಲ್ಲಿ ಕಷ್ಟ ಮತ್ತು ಅಪಮಾನಗಳ ಜೀವನ ಅನುಭವಿಸಿದರು. ನಂತರ ಹೋರಾಟ, ಸಾಧನೆ. ಕೊನೆಗೆ ತ್ಯಾಗ ಮತ್ತು ಸಾರ್ಥಕ ಜೀವನ ಪಡೆದುಕೊಂಡವರು. ಮಾನವ ಪ್ರೇಮ ಬಿತ್ತಿದ ಮಹಾಪುರುಷ ಅಂಬೇಡ್ಕರ್ ಅವರ ವ್ಯಕ್ತಿತ್ವ ನಮಗೆ ಆದರ್ಶವಾಗಬೇಕು ಎಂದರು.

ಇಡೀ ಜಗತ್ತೇ ನಿಬ್ಬೇರಗಾಗುವ ಪಾಂಡಿತ್ಯವೇ ಡಾ.ಬಿ.ಆರ್.ಅಂಬೇಡ್ಕರ್ ಅವರ ವ್ಯಕ್ತಿತ್ವವಾಗಿದೆ. ಬ್ರಿಟನ್ನಿನ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಲ್ಲಿನ ಪುಸ್ತಕಗಳನ್ನು ಹೆಚ್ಚು ಬಾರಿ ಓದಿದ ಮಹನೀಯ ಅಂಬೇಡ್ಕರ್ ಎಂದು ಹೇಳಿದರು.

ಅಂಬೇಡ್ಕರ್ ಅವರು ಕೊಟ್ಟಂತಹ ಸಂವಿಧಾನವು ಬಡವರ ಕಣ್ಣೀರು ಒರೆಸುವ ಶಾಸನವಾಗಿದೆ. ಅಂತಹ ಶಾಸನದ ಅಡಿಯಲ್ಲಿ ನಾವು ಬದುಕುತ್ತಿದ್ದೇವೆ. ಎಲ್ಲರನ್ನೂ ಗೌರವದಿಂದ ನೋಡುವಂತಹ ಕೆಲಸವಾದರೆ ದೇಶ ನಿಜವಾಗಲೂ ಬಹುದೊಡ್ಡ ಸ್ಥಾನ ಪಡೆಯಲಿದೆ. ಅಂಬೇಡ್ಕರ್ ಎನ್ನುವಂತಹ ಐಕಾನನ್ನು ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಅಭಿಪ್ರಾಯವ್ಯಕ್ತಪಡಿಸಿದರು.

ಜಯಂತಿ ಕಾರ್ಯಕ್ರಮಕ್ಕೂ ಮುನ್ನ ನಗರದ ಅಂಬೇಡ್ಕರ್ ವೃತ್ತದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ವಿಧಾನಸಭಾ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್, ಸಹಾಯಕ ನಿರ್ದೇಶಕ ಪರಮೇಶ್ವರಪ್ಪ ಸೇರಿದಂತೆ  ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು, ದಲಿತ ಸಮುದಾಯದ ಮುಖಂಡರುಗಳು, ಸಂಘಟನೆಗಳ ಪದಾಧಿಕಾರಿಗಳು, ಸಮುದಾಯದ ಜನಾಂಗ ಹಾಗೂ ಸಾರ್ವಜನಿಕರು ಇದ್ದರು.

Leave a Reply

Your email address will not be published. Required fields are marked *

error: Content is protected !!