ಬೆಂಗಳೂರು: ಬಿಜೆಪಿ ಅಳೆದು ತೂಗಿ ನಿನ್ನೆ ಮೊದಲ ಪಟ್ಟಿಯನ್ನು ರಿಲೀಸ್ ಮಾಡಿದ್ದಾರೆ. ಅದರಲ್ಲಿ ಅಂದುಕೊಂಡಂತೆ ಹಲವು ಹಿರಿಯ ನಾಯಕರ ಹೆಸರು ಕೈ ಬಿಟ್ಟು ಹೋಗಿದೆ. ಅದರಲ್ಲಿ ಜಗದೀಶ್ ಶೆಟ್ಟರ್ ಹೆಸರು ಕೂಡ ಒಂದು. ಈ ಬಾರಿ ಹೈಕಮಾಂಡ್ ಟಿಕೆಟ್ ನೀಡುವುದಿಲ್ಲ ಎಂದು ತಿಳಿಯುತ್ತಿದ್ದಂತೆಯೇ ಜಗದೀಶ್ ಶೆಟ್ಟರ್ ಬೇಸರ ಹೊರ ಹಾಕಿದ್ದರು.
ನಿನ್ನೆ ಸುದ್ದಿಗೋಷ್ಟಿ ನಡೆಸಿ, ಹೈಕಮಾಂಡ್ ನಾಯಕರ ಮೇಲೆ ನನಗೆ ನಂಬಿಕೆ ಇದೆ. ಈ ಬಾರಿ ಟಿಕೆಟ್ ನೀಡುತ್ತಾರೆ. ನಾನು ಸ್ಪರ್ಧೆ ಮಾಡಿಯೇ ಮಾಡ್ತೀನಿ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೂ ಮೊದಲ ಪಟ್ಟಿಯಲ್ಲಿ ಜಗದೀಶ್ ಶೆಟ್ಟರ್ ಹೆಸರು ಮಾತ್ರ ಇಲ್ಲ. ಈಗ ಹೈಕಮಾಂಡ್ ನಾಯಕರ ಜೊತೆಗೊಂದು ಮಾತುಕತೆ ನಡೆಸಲು ಸಜ್ಜಾಗಿದ್ದಾರೆ.
ಹೈಕಮಾಂಡ್ ನಾಯಕರ ಭೇಟಿಗೆ ಹೊರಟಿರುವ ಜಗದೀಶ್ ಶೆಟ್ಟರ್, ಟಿಕೆಟ್ ನಿಂದಾದ ಎಲ್ಲಾ ಅನ್ಯಾಯವನ್ನು ಅಲ್ಲಿಯೇ ಮಾತನಾಡಲಿದ್ದಾರೆ. ಬಿಎಸ್ ಯಡಿಯೂರಪ್ಪ ಅವರ ಮೂಲಕವೂ ಹೈಕಮಾಂಡ್ ಗೆ ಒತ್ತಡ ಹಾಕುವ ಸಾಧ್ಯತೆ ಇದೆ. ಈಗ ಹೈಕಮಾಂಡ್ ಟಿಕೆಟ್ ನೀಡದೆ ಹೋದಲ್ಲಿ ಜಗದೀಶ್ ಶೆಟ್ಟರ್ ಮುನಿಸು ತೋರುತ್ತಾರಾ..? ಸ್ಪರ್ಧೆ ಬಗ್ಗೆ ಚಿಂತಿಸುತ್ತಾರಾ ನೋಡಬೇಕಿದೆ.