ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ (ಏ. 06): ಪ್ರಸಕ್ತ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರೂ ತಪ್ಪದೆ ತಮ್ಮ ಮತವನ್ನು ತಪ್ಪದೆ ಚಲಾಯಿಸಬೇಕು, ಈ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ., ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ದಿವಾಕರ್ ಹಾಗೂ ಎಸ್‍ಪಿ ಕೆ. ಪರಶುರಾಮ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡುವ ಮೂಲಕ ಮತದಾನ ಜಾಗೃತಿ ಮೂಡಿಸಿದರು.
ಕಳೆದ ಚುನಾವಣೆಗಳಲ್ಲಿ ಕಡಿಮೆ ಮತದಾನವಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಾಲ್ಲೂಕಿನ ಜೆ.ಜೆ. ಹಟ್ಟಿ, ನಗರದಲ್ಲಿನ ನೆಹರೂ ನಗರ, ಜಿ.ಆರ್. ಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಆಯಿತೋಳು ಗ್ರಾಮಗಳಿಗೆ ಭೇಟಿ ನೀಡಿದ ಅಧಿಕಾರಿಗಳು, ಸಾರ್ವಜನಿಕರಲ್ಲಿ ನೈತಿಕ ಮತದಾನದ ಜಾಗೃತಿ ಮೂಡಿಸಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಮಾತನಾಡಿ, ಎಲ್ಲರೂ ಕಡ್ಡಾಯವಾಗಿ ಮೇ. 10 ರಂದು ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಬೇಕು. ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಎಲ್ಲರೂ ಮತದಾನ ಮಾಡಬೇಕು. ನಾವು ಮತದಾನ ಮಾಡುವುದರ ಜೊತೆಗೆ ನಮ್ಮ ಅಕ್ಕಪಕ್ಕದ ಮತದಾರೆಲ್ಲರಿಗೂ ಮತದಾನ ಮಾಡುವಂತೆ ಪ್ರೇರಪಿಸಬೇಕು. ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಹಬ್ಬವಾಗಿದ್ದು, ಇದನ್ನು ಸಂಭ್ರಮದಿಂದ ಆಚರಿಸಿ, ಮತಗಟ್ಟೆಗೆ ತೆರಳಿ ನಮ್ಮ ಹಕ್ಕನ್ನು ಚಲಾಯಿಸಬೇಕು ಎಂದರು.
ಜಿ.ಪಂ. ಸಿಇಒ ಎಂ.ಎಸ್. ದಿವಾಕರ್ ಮಾತನಾಡಿ, ನಮ್ಮ ಮತ ನಮ್ಮ ಹಕ್ಕು, ಮತದಾನವು ನಮ್ಮೆಲರಿಗೂ ಸಂವಿಧಾನಭದ್ದವಾಗಿ ದೊರೆತ ಹಕ್ಕು. ಮತ ಚಲಾಯಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಮೇ. 10 ರಂದು ನಡೆಯುವ ಕರ್ನಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಹಾಗೂ ನಿಮ್ಮ ನೆರೆಹೋರೆಯವರನ್ನು ಸಹ ಮತದಾನ ಮಾಡುವಂತೆ ಪ್ರೇರೆಪಿಸಿ ಶೇ.100 ರಷ್ಟು ಮತದಾನ ಯಶಸ್ವಿಗೊಳಿಸುವುದರ ಮೂಲಕ ಪ್ರಜಾಪ್ರಭುತ್ವವನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಜಾಗೃತಿ ಮೂಡಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್ ಅವರು ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಜನರು ಆಸೆ, ಆಮಿಷಗಳಿಗೆ ಒಳಗಾಗಬಾರದು, ಅಕ್ರಮ ಚಟುವಟಿಕೆಗಳಿಗೆ ಸಹಕಾರ ನೀಡಬಾರದು. ನಿರ್ಭೀತಿಯಿಂದ ನಿಮ್ಮ ಹಕ್ಕನ್ನು ಚಲಾಯಿಸಬೇಕು ಎಂದರು. ವಿವಿಧ ಅಧಿಕಾರಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.