ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನ ಕುಟುಂಬ ರಾಜಕಾರಣದ್ದೆ ಸಿಕ್ಕಾಪಟ್ಟೆ ಸದ್ದಾಗುತ್ತಿದೆ. ಹಾಸನ ಟಿಕೆಟ್ ಗಾಗಿ ಭವಾನಿ ರೇವಣ್ಣ ಈ ಮೊದಲೇ ಡಿಮ್ಯಾಂಡ್ ಇಟ್ಟಿದ್ದರು. ಆದರೆ ಇದಕ್ಕೆ ಕುಮಾರಸ್ವಾಮಿ ಓಕೆ ಎಂದಿಲ್ಲ. ದೇವೇಗೌಡರ ಅಂಗಳದಲ್ಲಿ ಹಾಸನದ ಟಿಕೆಟ್ ತಗಾದೆ ಇತ್ತು. ನಿನ್ನೆ ನಡೆದ ಸಂಧಾನ ಸಭೆ ಕೂಡ ವಿಫಲವಾಗಿದೆ.
ಈ ಬೆನ್ನಲ್ಲೇ ಭವಾನಿ ರೇವಣ್ಣ ಅವರು ಟಿಕೆಟ್ ಸಿಗದೆ ಹೋದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದು, ಈ ಬಗ್ಗೆ ನನಗೇನು ಮಾಹಿತಿ ಇಲ್ಲ. ಕುಮಾರಣ್ಣನಿಗೆ ಕೇಳಬೇಕು. ಇದಕ್ಕೆಲ್ಲಾ ಉತ್ತರ ನೀಡುವುದಕ್ಕೆ ಅವರೇ ಸೂಕ್ತ ಎಂದಿದ್ದಾರೆ.
ಇನ್ನುಳಿದಂತೆ ಹಾಸನದಲ್ಲಿ ಯಾರಿಗೆ ಟಿಕೆಟ್ ಸಿಗಬಹುದು ಎಂಬುದರ ಬಗ್ಗೆಯೂ ಮಾತನಾಡಿ, ದಿವಂಗತ ಪ್ರಕಾಶ್ ಅಣ್ಣ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಅವರ ಕುಟುಂಬಕ್ಕೆ ಹಾಸನದಲ್ಲಿ ಒಳ್ಳೆಯ ಹೆಸರಿದೆ. ಸ್ವರೂಪ್ ಪ್ರಕಾಶ್ ಕೂಡ ಯುವಕರು. ಜನರ ಜೊತೆಗೆ ಒಳ್ಳೆಯ ಸಂಪರ್ಕದಲ್ಲಿದ್ದಾರೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಒಂದು ಕಮಿಟಿ ಇದೆ. ಅವರ ಸಲಹೆ ಮೇರೆಗೆ ಅಂತಿಮವಾಗಿ ದೇವೇಗೌಡರೇ ಟಿಕೆಟ್ ಹಂಚಿಕೆ ಮಾಡ್ತಾರೆ ಎಂದಿದ್ದಾರೆ.