ತುಮಕೂರು: ಈಗಾಗಲೇ ಜೆಡಿಎಸ್ ಪಕ್ಷದಿಂದ ಉಚ್ಛಾಟನೆಗೊಂಡು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್, ಈಗ ಅಧಿಕೃತವಾಗಿಕಾಂಗ್ರೆಸ್ ಸೇರುವ ಯೋಜನೆಯಲ್ಲಿದ್ದಾರೆ. ಮಾರ್ಚ್ 27ಕ್ಕೆ ಅಂದ್ರೆ ಸೋಮವಾರ ಜೆಡಿಎಸ್ ಪಕ್ಷದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಬಳಿಕ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರಲಿದ್ದಾರೆ.
ಈ ಬಗ್ಗೆ ಮಾತನಾಡಿದ ಶಾಸಕ ಶ್ರೀನಿವಾಸ್, ಸೋಮವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಇಂದೇ ನೀಡಬೇಕಿತ್ತು. ಆದ್ರೆ ಸ್ಪೀಕರ್ ಇರಲಿಲ್ಲ. ನಾನು ರಾಜೀನಾಮೆ ನೀಡುತ್ತಿದ್ದೇನೆ. ಬೇರೆ ಶಾಸಕರ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ. ಆದ್ರೆ ಶ್ರೀನಿವಾಸ್ ರಾಜೀನಾಮೆ ಘೋಷಿಸಿದ ಬೆನ್ನಲ್ಲೇ ಸಾಲು ಸಾಲು ಕಾರ್ಯಕರ್ತರು ಕೂಡ ರಾಜೀನಾಮೆ ನೀಡಲು ಮುಂದಾಗಿದ್ದಾರೆ. 300ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು, ಮುಖಂಡರು ತಮ್ಮ ರಾಜೀನಾಮೆಯನ್ನು ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಅವರಿಗೆ ರವಾನಿಸಿದ್ದಾರೆ.
ಜೊತೆಗೆ ಈ ಬಾರಿ ಗುಬ್ಬಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅನ್ನು ಶ್ರೀನಿವಾಸ್ ಅವರಿಗೆ ನೀಡುವ ಸಾಧ್ಯತೆ ಇದೆ. ಯಾಕಂದ್ರೆ ಕಾಂಗ್ರೆಸ್ ಮೊದಲ ಪಟ್ಟಿ ರಿಲೀಸ್ ಆಗಿದ್ದು, ಅದರಲ್ಲಿ ಗುಬ್ಬಿ ಕ್ಷೇತ್ರಕ್ಕೆ ಇನ್ನು ಯಾವ ಅಭ್ಯರ್ಥಿಯ ಹೆಸರನ್ನು ಸೂಚಿಸಿಲ್ಲ.