ಚಿತ್ರದುರ್ಗ, (ಮಾ.26) : ಮನುಷ್ಯ ಪರಿಸರದಿಂದ ಸಾಕಷ್ಟು ಉಪಯೋಗ ಪಡೆದುಕೊಳ್ಳುತ್ತಾನೆ, ಜೊತೆಯಲ್ಲಿ ನಾಶ ಮಾಡುತ್ತಾನೆ. ಪರ್ಯಾಯವಾಗಿ ಒಂದಿಷ್ಟು ಒಳ್ಳೆಯ ಕೆಲಸ ಮಾಡಿದರೆ ಮಾತ್ರ ನಾವು ಪರಿಸರದಿಂದ ಪಡೆದ ಸ್ವಲ್ಪವನ್ನಾರೂ ಹಿಂದುರಿಗಿಸುವ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಗುಬ್ಬಚ್ಚಿ ಬರ್ಡ್ ಟ್ರಸ್ಟ್‌ನ ಅಧ್ಯಕ್ಷ ಎಂ. ಕಾರ್ತಿಕ್ ಹೇಳಿದರು.
ನಗರದ ಬಿ.ಎಲ್. ಗೌಡ ಲೇಔಟ್ ನ ಪ್ರಕೃತಿ ಶಾಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ಗುಬ್ಬಚ್ಚಿ ದಿನಾಚರಣೆ-2023 ಅಂಗವಾಗಿ ಗುಬ್ಬಚ್ಚಿ ಪಕ್ಷಿ ಹಬ್ಬ-2023 ಆಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದು ಕೇವಲ ಪ್ರಾರಂಭ ಮಾತ್ರ, ಮುಂದೆ ಎಲ್ಲಾ ಸಾರ್ವಜನಿಕರು ಸ್ವಇಚ್ಛೆಯಿಂದ ತಮ್ಮ ತಮ್ಮ ಮನೆ ಮುಂದೆ ಪಕ್ಷದ ಗಳಿಗಾಗಿ ನೀರನ್ನು ಇಡುವುದರ ಮೂಲಕ ಸಹಕರಿಸಬೇಕೆಂದು ವಿನಂತಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕೆ. ಮಧುಪ್ರಸಾದ್ ಉದ್ಘಾಟಿಸಿದರು.
ಕಾರ್ಯಕ್ರಮದ ಉದ್ಘಾಟನೆ ನಂತರ
ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಮನೆ ಮನೆಗೆ ಉಚಿತವಾಗಿ ಮಣ್ಣಿನ ತಟ್ಟೆಯನ್ನು ವಿತರಿಸಲಾಯಿತು. ಈ ಬಾರಿ ಅಂದಾಜು 1000 ಮಣ್ಣಿನ ತಟ್ಟೆಗಳನ್ನು ಹಂಚಲಾಯಿತು.
ಬಿರು ಬೇಸಿಗೆಯಲ್ಲಿ ಗುಟುಕು ನೀರು ದೊರೆಯದೇ, ಪರಿತಪಿಸಿ, ದಾಹದಿಂದ ಎಷ್ಟೋ ಪಕ್ಷಿಗಳು ಸಾವನ್ನಪ್ಪುತ್ತವೆ. ಈ ಸುಡುವ ಬಿಸಿಲಿನಲ್ಲಿ ಪಕ್ಷಿಗಳ ದಾಹ ನೀಗಿಸಲು ಪ್ರತಿಯೊಬ್ಬರು ತಮ್ಮ ತಮ್ಮ ಮನೆಯ ಮುಂದೆ, ಬಾಲ್ಕನಿಯಲ್ಲಿ ಅಥವಾ ಮನೆಯ ಕಾಂಪೌಂಡ್ ಮೇಲೆ ಒಂದು ಮಣ್ಣಿನ ಪಾತ್ರೆ ಅಥವಾ ತಟ್ಟೆಯಲ್ಲಿ ನೀರನ್ನು ಇಟ್ಟು, ಅಸಹಾಯಕ ಪಕ್ಷಿಗಳಿಗೆ ನೀರುಣಿಸಿದರೆ ಹಲವಾರು ಪಕ್ಷಿಗಳ ಜೀವ ಉಳಿಸಿದ ಪುಣ್ಯ ಲಭಿಸುತ್ತದೆ.
ಇದೇ ನಿಟ್ಟಿನಲ್ಲಿ, ಸಮಾಜದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಗುಬ್ಬಚ್ಚಿ ಬರ್ಡ್ ಟ್ರಸ್ಟ್ ಮತ್ತು ನಗರದ ಪ್ರತಿಷ್ಠಿತ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಪಕ್ಷಿಗಳಿಗಾಗಿಯೇ ಮನೆ-ಮನೆಗೂ ಮಣ್ಣಿನ ತಟ್ಟೆಯನ್ನು ಉಚಿತವಾಗಿ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್, ಇನ್ನರ್ ವ್ಹೀಲ್ ಕ್ಲಬ್, ರೋಟರಿ ಕ್ಲಬ್ ಫೋರ್ಟ್, ಇನ್ನರ್ ವ್ಹೀಲ್ ಕ್ಲಬ್ ಫೋರ್ಟ್, ರೋಟರಿ ವಿಂಡ್ ಮಿಲ್ ಸಿಟಿ, ರೋಟರಿ ಚಿನ್ಮೂಲಾದ್ರಿ, ವಾಸವಿ ಮಹಿಳಾ ಸಂಘ, ವಾಸವಿ ಕ್ಲಬ್ ಚಿತ್ರದುರ್ಗ ಫೋರ್ಟ್, ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾ, ಚಿತ್ರದುರ್ಗ ಮಹಿಳಾ ಘಟಕ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಪ್ರಕೃತಿ ಶಾಲೆಯ ಶಿಕ್ಷಕ ವೃಂದ ಹಾಗೂ ಸಾರ್ವಜನಿಕರು ಭಾಗವಹಿಸಿದರು.