ಬೆಳಗಾವಿ: ಜಿಲ್ಲೆಯಲ್ಲಿ ಮರಾಠಿಗರ ಸಂಖ್ಯೆ ಹೆಚ್ಚಾಗಿದೆ. ಗಡಿನಾಡಿನಲ್ಲಿ ಆಗಾಗ ಎಂಇಎಸ್ ಪುಂಡರ ಕಾಟಕ್ಕೆ ಕನ್ನಡಿಗರು ರೋಸೆದ್ದು ಹೋಗಿದ್ದಾರೆ. ಇದೀಗ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಇದನ್ನ ನಾವೂ ಮಾಡಿದ್ದು, ನಾವೂ ಮಾಡಿದ್ದು ಎಂದು ಕಿತ್ತಾಡುತ್ತಿವೆ. ಇದನ್ನೇ ಈಗ ಎಂಇಎಸ್ ಬಂಡವಾಳ ಮಾಡಿಕೊಳ್ಳಲು ಹೊರಟಿದೆ.
ಬೆಳಗಾವಿಯ ರಾಜಹಂಸಗಡದಲ್ಲಿ ನಿರ್ಮಾಣವಾಗಿರುವ ಶಿವಾಜಿ ಪ್ರತಿಮೆಯನ್ನು ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ರಮೇಶ್ ಜಾರಕಿಹೊಳಿ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಅದಕ್ಕಾಗಿಯೇ ಉದ್ಘಾಟನೆಯನ್ನು ಇಬ್ಬರು ಸೇರಿ ಎರಡು ಬಾರಿ ಮಾಡಿದರು. ಈಗ ಪ್ರತಿಮೆಯ ವಿಚಾರಕ್ಕೆ ಎಂಇಎಸ್ ಎಂಟ್ರಿಯಾಗಿದ್ದು, ಶಿವಾಜಿ ಪ್ರತಿಮೆಯನ್ನು ಶುದ್ಧೀಕರಣ ಮಾಡುವ ಹೆಸರಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ.
ಎಂಇಎಸ್ ನ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಷರತ್ತು ಬದ್ಧ ಅನುಮತಿ ನೀಡಿದೆ. ಇಂದು ರಾಜಹಂಸಗಡದ ಪ್ರವೇಶ ದ್ವಾರದಿಂದ ಕೋಟೆವರೆಗೂ ಮೆರವಣಿಗೆ ನಡೆಯಲಿದೆ. ಶಿವಾಜಿ ಮಹಾರಾಜರ ಬೃಹತ್ ಪ್ರತಿಮೆಗೆ ಕ್ಷೀರಾಭಿಷೇಕ ಮಾಡಲು ಅನುಮತಿ ಸಿಕ್ಕಿಲ್ಲ. ಬದಲಿಗೆ ಮೆರವಣಿಗೆ ಮೂಲಕ ಸಾಗಿ, ದೊಡ್ಡ ಪ್ರತಿಮೆಯ ಕೆಳಗೆ ಇರುವ ಸಣ್ಣ ಪ್ರತಿಮೆಗೆ ಕ್ಷೀರಾಭಿಷೇಕ ಮಾಡಲಿದ್ದಾರೆ.