ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಮಾ.14): ಎಲ್ಲಾ ಪಕ್ಷಗಳು ಸುಳ್ಳಿನ ಮೆರವಣಿಗೆ ಮಾಡುತ್ತಿದ್ದು, ಇನ್ನು ಮುಂದೆ ಹಳ್ಳಿಗಳಿಗೆ ಬಂದರೆ ಮಸಿ ಬಳಿಯುತ್ತೇವೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಶಾಖೆ ವತಿಯಿಂದ ಬೆಸ್ಕಾಂ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಬೆಸ್ಕಾಂಗೆ ಆಗಮಿಸಿದ ರೈತರು ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಬೆಸ್ಕಾಂ ಎದುರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡ ಈಚಘಟ್ಟದ ಸಿದ್ದವೀರಪ್ಪ ರೈತರ ಶ್ರಮ ಬೆವರು ಕಷ್ಟ ರಾಜ್ಯ ಸರ್ಕಾರಕ್ಕೆ ಗೊತ್ತಾಗುತ್ತಿಲ್ಲ. ಬಯಲುಸೀಮೆ ರೈತರು ಏನು ಪಾಪ ಮಾಡಿದ್ದೇವೆಂದು ಈ ರೀತಿ ಸತಾಯಿಸುತ್ತಿದ್ದೀರ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗಧಿಪಡಿಸಲು ಆಗುತ್ತಿಲ್ಲ. ಎಲ್ಲಾ ಸರ್ಕಾರದವರು ಆಶ್ವಾಸನೆ ಶೂರರು.
ಪೈಪೋಟಿ ಮೇಲೆ ಸುಳ್ಳು ಭರವಸೆಗಳನ್ನು ನೀಡುತ್ತ ರೈತರನ್ನು ವಂಚಿಸುತ್ತಿದ್ದಾರೆ. ಮೂರು ರೈತ ವಿರೋಧಿ ಕಾಯಿದೆಗಳನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದಿದ್ದರೂ ರಾಜ್ಯ ಸರ್ಕಾರ ಇನ್ನು ವಾಪಸ್ ತೆಗೆದುಕೊಂಡಿಲ್ಲ. ಸರ್ಕಾರಿ ನೌಕರರಿಗೆ ವೇತನ ಜಾಸ್ತಿ ಮಾಡಿದಂತೆ ರೈತರ ಬೆಳೆಗಳಿಗೆ ಏಕೆ ಬೆಂಬಲ ಬೆಲೆ ನಿಗಧಿಪಡಿಸುತ್ತಿಲ್ಲ ಎಂದು ಪ್ರಶ್ನಿಸಿದರು.?
ಆಳುವ ಸರ್ಕಾರಗಳ ಅವಿವೇಕದ ವರ್ತನೆಯಿಂದ ದೇಶಕ್ಕೆ ಅನ್ನ ನೀಡುವ ರೈತ ಬೀದಿಗೆ ಬಿದ್ದಿದ್ದಾನೆ. ಭೂಸುಧಾರಣೆ ಕಾಯಿದೆ ತಿದ್ದುಪಡಿಯಲ್ಲಿ ರೈತರಲ್ಲದವರು ಕೃಷಿ ಭೂಮಿಯನ್ನು ಕೊಂಡುಕೊಳ್ಳುವ ಕಾಯಿದೆ ಜಾರಿಗೆ ತಂದಿದ್ದರಿಂದ ಉದ್ಯಮಿಗಳು, ಬಂಡವಾಳಶಾಹಿಗಳು ಜಮೀನುಗಳನ್ನು ಖರೀಧಿಸಿ ತಮ್ಮ ಬಳಿಯಿಟ್ಟುಕೊಂಡಿದ್ದಾರೆ.
ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದ ರೈತರು ಇನ್ನು ಸಂಕಟ ಪಡುತ್ತಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿ ಗುಂಡೇಟಿಗೆ ಎದೆಯೊಡ್ಡಿದ ಹುತಾತ್ಮರ ಬಗ್ಗೆ ಬಿಜೆಪಿ.ಸರ್ಕಾರಕ್ಕೇಕೆ ಕಾಳಜಿಯಿಲ್ಲ. ಅಧಿಕಾರಿಗಳಿಗೆ ಹಾಗೂ ರಾಜಕಾರಣಿಗಳಿಗೆ ರೈತರು ಬೆಳೆದ ಅನ್ನ ತಿನ್ನುವ ಯೋಗ್ಯತೆಯಿಲ್ಲ.
ಮುಂದಿನ ದಿನಗಳಲ್ಲಿ ರಾಜಕಾರಣಿಗಳು ಅಧಿಕಾರಿಗಳ ಮನೆಗೆ ನುಗ್ಗಿ ಆಹಾರ ಪದಾರ್ಥಗಳನ್ನೆಲ್ಲಾ ಜಪ್ತಿ ಮಾಡುತ್ತೇವೆ. ದುಡ್ಡುಗಳನ್ನೇ ತಿನ್ನಲಿ ನೋಡೋಣ ಎಂದು ಸವಾಲು ಹಾಕಿದರು.
ದೇಶಕ್ಕೆ ಸಂಪತ್ತು ಕೊಡುವ ರೈತರಿಗೆ ಕರೆಂಟ್ ಕೊಡಲು ಸರ್ಕಾರಕ್ಕೆ ಏನು ದಾಡಿ ಎಂದು ಖಾರವಾಗಿ ಪ್ರಶ್ನಿಸಿದ ಈಚಘಟ್ಟದ ಸಿದ್ದವೀರಪ್ಪ ಅಕ್ರಮ-ಸಕ್ರಮಗೊಳಿಸಲು ಸರ್ಕಾರಕ್ಕೆ ಕಾಳಜಿಯಿಲ್ಲ. ನಮ್ಮ ಹಣದಲ್ಲಿ ನಾವುಗಳು ಮೀಟರ್ ಹಾಕಿಸಿಕೊಂಡಿದ್ದರು ಕನಿಷ್ಠ ದರ ಏಕೆ ನಿಗಧಿಪಡಿಸಬೇಕು? ಕೂಡಲೆ ಇದನ್ನು ರದ್ದುಪಡಿಸಬೇಕು. ಅಕ್ರಮ-ಸಕ್ರಮದಡಿ ಹಣ ಪಾವತಿಸಿರುವ ರೈತರಿಗೆ ಒಂದು ವಾರದೊಳಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಇಲ್ಲವಾದಲ್ಲಿ ಬಡ್ಡಿ ಸಮೇತ ಹಣ ಹಿಂದಿರುಗಿಸಬೇಕೆಂದು ಒತ್ತಾಯಿಸಿದರು.
ಸಿಂಗಲ್ ಲೈಟಿಂಗನ್ನು ನಿಲ್ಲಿಸಿರುವುದರಿಂದ ತೋಟದ ಮನೆಗಳಲ್ಲಿರುವ ರೈತರಿಗೆ ಹಾಗೂ ಪರೀಕ್ಷೆ ಸಮಯವಾಗಿರುವುದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ತಕ್ಷಣವೇ ಹಿಂದಕ್ಕೆ ಪಡೆಯಬೇಕು. ಇಲ್ಲವಾದಲ್ಲಿ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಬಿಲ್ ಕಟ್ಟುವುದನ್ನು ನಿಲ್ಲಿಸಬೇಕಾಗುತ್ತದೆಂದು ಎಚ್ಚರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಶಾಖೆ ಅಧ್ಯಕ್ಷ ಡಿ.ಎಸ್.ಹಳ್ಳಿ. ಮಲ್ಲಿಕಾರ್ಜುನ, ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಗೌರವಾಧ್ಯಕ್ಷ ರಾಜಣ್ಣ, ಅಪ್ಪರಸನಹಳ್ಳಿ ಬಸವರಾಜ್, ಚಿಕ್ಕಬ್ಬಿಗೆರೆ ನಾಗರಾಜ್, ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷ ಸತೀಶ್, ಎಂ.ಬಸವರಾಜಪ್ಪ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.