ಚಿತ್ರದುರ್ಗ,(ಮಾರ್ಚ್.14) : ಚಿತ್ರದುರ್ಗದ ಹೆದ್ದಾರಿಗಳಲ್ಲಿ ಲೇನ್ ಡಿಸಿಪ್ಲೀನ್ ಅನುಷ್ಠಾನದ ಅಂಗವಾಗಿ ಕ್ಯಾಮೆರಾಗಳ ಅಳವಡಿಕೆ ಮಾಡಲಾಗಿದೆ.
ಡಿ.ಜಿ ಮತ್ತು ಐ.ಜಿ.ಪಿ ಅವರ ಆದೇಶದ ಮೇರೆಗೆ ಬೆಂಗಳೂರಿನಿಂದ ಬೆಳಗಾಂವರೆಗೂ ಹಾದು ಹೋಗುವ ಹೆದ್ದಾರಿಗಳಲ್ಲಿ ಆಟೋಮೇಟೆಡ್ ನಂಬರ್ ಪ್ಲೇಟ್ ರೆಕಾಗ್ನೇಷನ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಪ್ರಾಯೋಗಾರ್ಥವಾಗಿ ಚಿತ್ರದುರ್ಗ, ದಾವಣಗೆರೆ, ಹಾವೇರಿಗಳಲ್ಲಿ ಕಾರ್ಯಾರಂಭ ಮಾಡಿದ್ದು, ಅದರಂತೆ ಚಿತ್ರದುರ್ಗದ ಹೆದ್ದಾರಿಯುದ್ದಕ್ಕೂ ಕ್ಯಾಮೆರಾಗಳನ್ನು ಅಳವಡಿಸಿದ್ದು, ಮಾರ್ಚ್ 12 ರಿಂದ ಕಾರ್ಯನಿರ್ವಹಿಸುತ್ತಿರುತ್ತವೆ.
ಹೆದ್ದಾರಿಯ ಬಲಭಾಗದ ರಸ್ತೆಯನ್ನು ವೇಗವಾಗಿ ಚಲಿಸುವ ವಾಹನಗಳಿಗೆ ಮೀಸಲಿರಿಸಲಾಗಿದೆ. ಭಾರೀ ವಾಹನಗಳನ್ನು ಬಲಭಾಗದ ರಸ್ತೆಯಲ್ಲಿ ಚಲಿಸುವಂತಿಲ್ಲ. ವಾಹನಗಳು ವೇಗಕ್ಕನುಸಾರವಾಗಿ ರಸ್ತೆಯ ಎಡ ಮತ್ತು ಮಧ್ಯದ ಮಾರ್ಗವನ್ನು ಬಳಸುವುದು. ಈ ನಿಯಮ ಉಲ್ಲಂಘನೆ ಮಾಡಿದ ವಾಹನಗಳಿಗೆ ನಿಯಮ ಉಲ್ಲಂಘಿಸಿದ ಸ್ಥಳದಿಂದ ಮುಂದೆ ಬರುವ ಟೋಲ್‍ಗಳಲ್ಲಿ ರೂ.500 ದಂಡ ವಿಧಿಸಲಾಗುವುದು.
ಒಂದು ವೇಳೆ ಟೋಲ್‍ನಲ್ಲಿ ದಂಡ ಕಟ್ಟಲು ತಪ್ಪಿಸಿಕೊಳ್ಳಲು ಬೇರೆ ಮಾರ್ಗ ಬಳಸಿ ಹೋದರೂ ಸಹ ಮುಂದಿನ ದಿನಗಳಲ್ಲಿ ಯಾವುದೇ ಟೋಲ್ ದಾಟುವ ಸಂದರ್ಭದಲ್ಲಿ ಅಥವಾ ಈ ತಂತ್ರಾಂಶವು ಸಾರಿಗೆ ಇಲಾಖೆಯ ತಂತ್ರಾಂಶದೊಂದಿಗೆ ಸಂಯೋಜನೆ ಹೊಂದಿರುವುದರಿಂದ ವಾಹನಕ್ಕೆ ಸಂಬಂಧಿಸಿದಂತೆ ಯಾವುದೇ ಕೆಲಸ ಕಾರ್ಯಗಳಿಗೆ ಆರ್‍ಟಿಓ ಕಚೇರಿಗೆ ಹೋದಾಗ ದಂಡ ವಿಧಿಸಲಾಗುವುದು.
ಭಾರೀ ವಾಹನಗಳನ್ನು ಚಾಲನೆ ಮಾಡುವ ಚಾಲಕರು ಲೇನ್ ಡಿಸಿಪ್ಲೀನ್ ನಿಯಮದಂತೆ ವಾಹನಗಳನ್ನು ಚಾಲನೆ ಮಾಡುವ ಮೂಲಕ ಸುರಕ್ಷಿತವಾಗಿರುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಕೋರಿದ್ದಾರೆ.