ಮಂಡ್ಯದಲ್ಲಿ ಪ್ರಧಾನಿ ಮೋದಿ ಜೆಡಿಎಸ್ ವಿಚಾರವನ್ನೇ ಪ್ರಸ್ತಾಪಿಸಿದೇ ಇರಲು ಕಾರಣವೇನು ಗೊತ್ತಾ..?
ಬೆಂಗಳೂರು: ಪ್ರಧಾನಿ ಮೋದಿ ಅವರು ನಿನ್ನೆಯೆಲ್ಲಾ ಮಂಡ್ಯ ಜಿಲ್ಲೆಗೆ ಭೇಟಿ ನೀಡಿ, ಬೆಂಗಳೂರು – ಮೈಸೂರು ದಶಪಥ ರಸ್ತೆಯನ್ನು ಉದ್ಘಾಟನೆ ಮಾಡಿ ಹೋಗಿದ್ದಾರೆ. ಈ ವೇಳೆ ಭಾಷಣ ಮಾಡುವಾಗ ಕಾಂಗ್ರೆಸ್ ವಿರುದ್ಧ ಮಾತ್ರ ವಾಗ್ದಾಳಿ ನಡೆಸಿದರು. ಜೆಡಿಎಸ್ ವಿಚಾರವನ್ನು ತೆಗೆಯಲೇ ಇಲ್ಲ. ಈ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ಮೋದಿಯವರು ಜೆಡಿಎಸ್ ವಿಚಾರವನ್ನು ಯಾಕೆ ತೆಗೆಯಲಿಲ್ಲ ಎಂಬ ಚರ್ಚೆ ನಡೆಸುತ್ತಿದ್ದಾರೆ. ಯಾಕಂದ್ರೆ ಕಳೆದ ಬಾರಿ ಅಮಿತ್ ಶಾ ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ್ದಾಗ, ಜೆಡಿಎಸ್ ಬೆಂಬಲಿಸಬೇಡಿ, ಜೆಡಿಎಸ್ ಬೆಂಬಲಿಸಿದರೆ ಅವ್ರು ಕಾಂಗ್ರೆಸ್ ಜೊತೆಗೆ ಕೈ ಜೋಡಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದರು.
ಆದ್ರೆ ಪ್ರಧಾನಿ ಯಾಕೆ ಒಂದೇ ಒಂದು ಮಾತು ಕೂಡ ಜೆಡಿಎಸ್ ಬಗ್ಗೆ ಆಡಲಿಲ್ಲ ಎಂಬ ಅನುಮಾನಗಳಿಗೆ ಒಂದಷ್ಟು ವಿಮರ್ಶೆ ಇಲ್ಲಿದೆ. ಹಳೇ ಮೈಸೂರು ಭಾಗ ಹೇಳಿ ಕೇಳಿ ಜೆಡಿಎಸ್ ಭದ್ರಕೋಟೆ. ಈ ಬಾರಿ ಆ ಕೋಟೆಯನ್ನೇ ವಶಪಡಿಸಿಕೊಳ್ಳೋದಕ್ಕೆ ಬಿಜೆಪಿ ಹೊಂಚು ಹಾಕಿದೆ ನಿಜ. ಆದ್ರೆ ಅದು ಅಷ್ಟು ಸುಲಭವಲ್ಲ ಎಂಬುದು ಗೊತ್ತು. ಈ ಬಾರಿ ಬಲ್ಲ ಮೂಲಗಳ ಪ್ರಕಾರ ಬಿಜೆಪಿ ಹೈಕಮಾಂಡ್ ಗೂ ಗೊತ್ತು ಬಹುಮತ ಬರುವುದು ಅನುಮಾನವೆಂದು. ಹೀಗಾಗಿ ಸಣ್ಣ ಪುಟ್ಟ ಪಕ್ಷವನ್ನೇ ಸಂಬಾಳಿಸಿಕೊಂಡು ಬಂದರೆ ಕಾಂಗ್ರೆಸ್ ಗೆಲ್ಲುವುದನ್ನು, ಕಾಂಗ್ರೆಸ್ ಜೆಡಿಎಸ್ ಮೈತ್ರಿಯಾಗುವುದನ್ನು ತಪ್ಪಿಸಬೇಕಾಗಿದೆ. ಹೀಗಾಗಿ ಜೆಡಿಎಸ್ ಬಗ್ಗೆ ಒಂದು ಮಾತಾಡಿಲ್ಲ ಎಂಬ ವಿಮರ್ಶೆಗಳು ಕೇಳಿ ಬರ್ತಿವೆ.
ಇನ್ನು ಕಳೆದ ಬಾರಿಯ ಅಸೆಂಬ್ಲಿ ಚುನಾವಣೆಯಲ್ಲಿ ಮಂಡ್ಯ ಏಳು ಕ್ಷೇತ್ರವನ್ನು ಜೆಡಿಎಸ್ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಅಲ್ಲಿನ ಜನರ ನಾಡಿಮಿಡಿತ ಜೆಡಿಎಸ್ ಕಡೆಗೆ ತುಡಿಯುತ್ತಿರುವ ಕಾರಣ ವಿರೋಧಿಸಿ ಯಡವಟ್ಟು ಮಾಡಿಕೊಳ್ಳುವುದು ಬೇಡ ಎಂಬ ಅಭಿಪ್ರಾಯವೂ ಇರುತ್ತದೆ. ಇನ್ನು ಪ್ರಧಾನಿ ಮೋದಿ ಅವರಿಗೆ ದೇವೇಗೌಡರ ಮೇಲೆ ಅಪಾರವಾದ ಗೌರವವಿದೆ. ಅವರನ್ನು ಭೇಟಿ ಮಾಡಿದಾಗೆಲ್ಲಾ ಸೌಜನ್ಯದಿಂದ ನಡೆದುಕೊಳ್ಳುವ ಉದಾಹರಣೆಯನ್ನು ನೋಡಿದ್ದೇವೆ. ಆ ವಿಚಾರವೂ ಇರಬಹುದು.