ವರದಿ ಮತ್ತು ಫೋಟೋ ಕೃಪೆ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಮಾ.06): ಜಾತಿ ಧರ್ಮಗಳ ನಡುವೆ ಸಾಹಿತ್ಯ ದ್ವೇಷ ಬಿತ್ತಬಾರದು. ಪ್ರೀತಿ ದಯೆ ಮೂಡಿಸುವಂತಿರಬೇಕು ಎಂದು ಸಾಹಿತಿ ಕಾದಂಬರಿಕಾರ ಡಾ.ಬಿ.ಎಲ್.ವೇಣು ಹೇಳಿದರು.
ಶ್ರೀಮತಿ ಸಿ.ಬಿ.ಶೈಲಾ ಜಯಕುಮಾರ್ ರವರ ಅಶ್ವತ್ಥಾಮೋ ಹತಃ ಹಾಗೂ ಸಭಾ ಮರ್ಯಾದೆ ಮತ್ತು ಇತರೆ ಪ್ರಬಂಧಗಳು ಪುಸ್ತಕಗಳನ್ನು ಐಶ್ವರ್ಯ ಹೋಟೆಲ್‍ನಲ್ಲಿ ಶನಿವಾರ ಬಿಡುಗಡೆಗೊಳಿಸಿ ಮಾತನಾಡಿದರು.
ಮನಸ್ಸು ಮನಸ್ಸುಗಳ ಮಧ್ಯೆ ಬಿರುಕು ಮೂಡಿಸುವ ಸಾಹಿತ್ಯವಿರಬಾರದು. ಬೆಸುಗೆ ಮೂಡಿಸುವಂತಿರಬೇಕು. ಹಿಂದೂ ಎಂಬ ಪದಗಳನ್ನು ಹೇಳಿಕೊಂಡು ಕೆಲವರು ಜಾತಿ ಧರ್ಮಗಳ ನಡುವೆ ಸಂಘರ್ಷವುಂಟು ಮಾಡುತ್ತಿದ್ದಾರೆ. ಭಾರತ ಎಂದರೆ ಕೇವಲ ಹಿಂದೂ ದೇಶವಲ್ಲ. ಎಲ್ಲಾ ಜಾತಿ ಧರ್ಮಿಯರು ಒಟ್ಟಾಗಿ ಬಾಳುತ್ತಿದ್ದಾರೆ.
ದೇಶಭಕ್ತರೆಂದು ಹೇಳುವವರು ದೇಶದ ಸ್ವಾತಂತ್ರ್ಯಕ್ಕಾಗಿ ಎಲ್ಲೂ ಹೋರಾಡಿ ಪ್ರಾಣ ತ್ಯಾಗ ಮಾಡಿಲ್ಲ. ಜಾತಿ ಧರ್ಮಕ್ಕಿಂತ ಪ್ರೀತಿ ದಯೆ ಮುಖ್ಯ. ಈ ನಿಟ್ಟಿನಲ್ಲಿ ಸಾಹಿತ್ಯ ಹೊರಬರಬೇಕು. ಜಾತಿಯಿಂದ ಗುರುತಿಸಿಕೊಳ್ಳುವವರ ಪೈಪೋಟಿ ಜಾಸ್ತಿಯಾಗುತ್ತಿರುವುದರಿಂದ ಧರ್ಮಾಂದತೆ ಕೂಡ ಹೆಚ್ಚುತ್ತಿದೆ. ಅಂಬೇಡ್ಕರ್ ಸಂವಿಧಾನ ಕೊಡದಿದ್ದಿದ್ದರೆ ದೇಶದ ಸ್ಥಿತಿ ಅಲ್ಲೋಲ ಕಲ್ಲೋಲವಾಗಿರುತ್ತಿತ್ತು. ಬುದ್ದ ಬಸವರು ಜನ್ಮ ತಾಳದೆ ಹೋಗಿದ್ದರೆ ನಾವು ನೀವುಗಳೆಲ್ಲಾ ಏನಾಗುತ್ತಿದ್ದೆವು ಎನ್ನುವುದನ್ನು ಊಹಿಸಿಕೊಳ್ಳಲು ಆಗುವುದಿಲ್ಲ ಎಂದರು.
ಪುಸ್ತಕ ಬಿಡುಗಡೆ ಸಮಾರಂಭವೆಂದರೆ ನಾಮಕರಣವಿದ್ದಂತೆ. ಸಾಹಿತ್ಯಿಕ ವಾತಾವರಣ ಅಷ್ಟೊಂದು ಆಶಾದಾಯಕವಾಗಿಲ್ಲ. ಟಿವಿ. ಮೊಬೈಲ್ ಹಾವಳಿಯಿಂದ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಬರೆಯುವವರು ಜಾಸ್ತಿಯಾಗುತ್ತಿದ್ದಾರೆ.
ಲೇಖಕರುಗಳಿಗೆ ಪ್ರೋತ್ಸಾಹಿಸುವವರು ಇಲ್ಲದಂತಾಗಿದ್ದಾರೆ. ಒಂದು ಕಾಲದಲ್ಲಿ ಕಥೆ ಕವನಗಳು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿತ್ತು. ಸಿ.ಬಿ.ಶೈಲಾರವರು ಹೊರ ತಂದಿರುವ ಎರಡು ಪುಸ್ತಕಗಳು ಅಚ್ಚುಕಟ್ಟಾಗಿವೆ. ಅದರೊಳಗಿನ ಹೂರಣವೂ ಕೂಡ ಮೌಲ್ಯಯುತವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಭಾ ಮರ್ಯಾದೆ ಮತ್ತು ಇತರೆ ಪ್ರಬಂಧಗಳು ಕುರಿತು ಜಾನಪದ ವಿದ್ವಾಂಸ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಮಾತನಾಡಿ ಕನ್ನಡ ಪ್ರಕಾಶನದಲ್ಲಿ ಪ್ರತಿ ವರ್ಷವೂ ನೂರಾರು ಪುಸ್ತಕಗಳು ಬಿಡುಗಡೆಯಾಗುತ್ತಿವೆ. ಆದರೆ ಕೊಂಡು ಓದುವವರು ಯಾರು? ಸಾಹಿತ್ಯದ ಪರಿಸ್ಥಿತಿ ಚಿಂತಾಜನಕವಾಗಿದೆ.
ಬೇರೆ ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದ ಪರಿಸ್ಥಿತಿ ಕೀಳಾಗಿದೆ. ಸಾಪ್ತಾಹಿಕ ಪುರವಣಿಗಳು ಹಿಂದೆ ಓದುಗರಲ್ಲಿ ಅಭಿರುಚಿ ಮೂಡಿಸುತ್ತಿದ್ದವು. ಸಿದ್ದಪ್ರಸಿದ್ದ ಸಾಹಿತಿಗಳೆ ಬೆಳಕಿಗೆ ಬರುತ್ತಿದ್ದಾರೆ. ಇನ್ನು ಚಿಕ್ಕಪುಟ್ಟ ಬರಹಗಾರರ ಪಾಡಂತು ಹೇಳತೀರದಂತಿದೆ ಎಂದು ವಿಷಾಧಿಸಿದರು.
ಕಥೆ ಕಾದಂಬರಿಗಳಿಗಿಂತ ಪ್ರಬಂಧಗಳನ್ನು ಬರೆಯುವುದು ಸವಾಲಿನ ಕೆಲಸ. ಅಂತಹ ಕಷ್ಟದ ಕೆಲಸಕ್ಕೆ ಕೈಹಾಕಿ ಸಿ.ಬಿ.ಶೈಲಾ ಜಯಕುಮಾರ್ ಎರಡು ಪುಸ್ತಕಗಳನ್ನು ಹೊರ ತಂದಿದ್ದಾರೆ. ಪ್ರಬಂಧದ ಫಸಲು ಕನ್ನಡ ಸಾಹಿತ್ಯದಲ್ಲಿ ಕಡಿಮೆಯಾಗಿದೆ.
ಪುರಾಣ ಕಾಲದ ಘಟನೆಗಳು ಕೂಡ ಈ ಪುಸ್ತಕದಲ್ಲಿವೆ. ಗೂಢಚರ್ಯೆ, ಸೂರ್ಪನಕಿ ಪ್ರಕರಣ, ರಾಮಾಯಣ ಕುರಿತು ಅದ್ಬುತ ಪ್ರಬಂಧ ಶರಣಸತಿ ಲಿಂಗಪತಿ, ನವಿರಾದ ಸೂಕ್ಷ್ಮ ಭಾವನೆ ಭಾಷೆಗಳನ್ನು ಕಟ್ಟಿ ಕೊಡಲಾಗಿದೆ. ಜನರಲ್ಲಿ ಓದುವ ಅಭಿರುಚಿ ಮೂಡಬೇಕಷ್ಟೆ. ಸಾಹಿತ್ಯದಿಂದ ಮನಸ್ಸು ಬುದ್ದಿ ಶ್ರೀಮಂತವಾಗುತ್ತದೆ. ಓದುವ ಹವ್ಯಾಸ ದೊಡ್ಡದು ಎಂದು ಹೇಳಿದರು.
ಕವಿ ಮತ್ತು ವಿಮರ್ಶಕ ಡಾ.ಲೋಕೇಶ್ ಅಗಸನಕಟ್ಟೆ ಮಾತನಾಡುತ್ತ ಅಸಹಿಷ್ಣುತೆ ಚಾಲ್ತಿಯಲ್ಲಿರುವ ಈ ಕಾಲದಲ್ಲಿ ನಮ್ಮ ಬಗ್ಗೆ ನಾವೆ ಹೇಳಿಕೊಳ್ಳಬೇಕಾದಂತ ಸಂದಿಗ್ದ ಪರಿಸ್ಥಿತಿ ಎದುರಾಗಿದೆ. ಸಿ.ಬಿ.ಶೈಲಾ ಜಯಕುಮಾರ್ ಕನ್ನಡ ಸಾಹಿತ್ಯವನ್ನು ಆಳವಾಗಿ ಓದಿಕೊಂಡಿದ್ದಾರೆನ್ನುವುದಕ್ಕೆ ಈ ಎರಡು ಪುಸ್ತಕಗಳೆ ಸಾಕ್ಷಿ. ಪುರಾಣ, ಮಹಾಕಾವ್ಯಗಳ ಉಲ್ಲೇಖವಿದೆ.
ಲೇಖಕನಿಗೆ ತಾತ್ವಿಕ ಬದ್ದತೆಯಿರಬೇಕು. ಕಥಾ ಕುತೂಹಲವಿದ್ದರೆ ಸಾಲದು. ಕಥನ ಕುತೂಹಲವಿರಬೇಕು. ಕುವೆಂಪು ಪ್ರಯತ್ನ ಎಲ್ಲಾ ಕಾಲಕ್ಕೂ ಎಲ್ಲಾ ಮನುಷ್ಯನನ್ನು ಗೌರವಿಸುವಂತಿತ್ತು. ಇದೊಂದು ವಿಶಿಷ್ಠ ಪ್ರಯೋಗ. ಇದರಲ್ಲಿ ಹನ್ನೆರಡು ಕಥೆಗಳಿವೆ. ಪುರಾಣ, ಇತಿಹಾಸ, ವರ್ತಮಾನ ಮೂರು ಕಡೆಗಳಿಂದ ವಸ್ತುಗಳನ್ನು ಸ್ವೀಕಾರ ಮಾಡಿಕೊಂಡು ಬರೆದಿರುವ ಕೃತಿಯಿದು ಎಂದು ಗುಣಗಾನ ಮಾಡಿದರು.
ಎರಡು ಪುಸ್ತಕಗಳಲ್ಲಿ ಪ್ರೌಢ ಭಾಷೆಯಿದೆ. ನಿರರ್ಗಳತೆ ಮಾತು ಬರವಣಿಗೆಯಲ್ಲಿ ಸಿದ್ದಿಸುವುದು ಕಷ್ಟ. ಕಾವ್ಯಾತ್ಮಕ ಲಯವಿದೆ. ಅಂಚಿನಲ್ಲಿರುವ ಪಾತ್ರಗಳನ್ನು ತೆಗೆದುಕೊಂಡು ಬರೆದಿದ್ದಾರೆ. ವಿಸ್ತಾರವಾದುದನ್ನು ಸಂಕ್ಷಿಪ್ತವಾಗಿ ಹೇಳಲಾಗಿದೆ. ಲೇಖಕನಿಗೆ ನಿರಂತರ ಅಧ್ಯಯನಶೀಲತೆ. ಜನರ ಜೊತೆಗೆ ಒಡನಾಟವಿರಬೇಕು ಎಂದು ಹೇಳಿದರು.
ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ಅಧ್ಯಕ್ಷತೆ ವಹಿಸಿದ್ದರು. ಸಿ.ಬಿ.ಶೈಲಾ ಜಯಕುಮಾರ್‍ರವರ ಸಂಬಂಧಿ ಚಿನ್ನಮ್ಮ ರಾಜಶೇಖರಪ್ಪ, ತೇಜಸ್ ಇಂಡಿಯಾ ಪಬ್ಲಿಕೇಷನ್ಸ್‍ನ ಸಿ.ವಿ.ಜಿ.ಚಂದ್ರು, ಗೀತಾಂಜಲಿ ಪಬ್ಲಿಕೇಷನ್ಸ್‍ನ ಜಿ.ಬಿ.ಟಿ.ಮೋಹನ್, ಲೇಖಕಿ ಸಿ.ಬಿ.ಶೈಲಾ ವೇದಿಕೆಯಲ್ಲಿದ್ದರು.
ಅಖಿಲ ಪ್ರಾರ್ಥಿಸಿದರು. ಡಾ.ನಟರಾಜ್ ಸ್ವಾಗತಿಸಿದರು. ರಮೇಶ್ ಮಧುರಿ ನಿರೂಪಿಸಿದರು. ಡಾ.ದೊಡ್ಡಮಲ್ಲಯ್ಯ, ಆರ್ಥಿಕ ಚಿಂತಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಉಪನ್ಯಾಸಕಿ ಚಂದ್ರಿಕ, ನಿವೃತ್ತ ಉಪನ್ಯಾಸಕಿ ಆರ್.ದಾಕ್ಷಾಯಿಣಿ ಸೇರಿದಂತೆ ಸಿ.ಬಿ.ಶೈಲಾ ಜಯಕುಮಾರ್‍ರವರ ಅಪಾರ ಅಭಿಮಾನಿಗಳು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು.