ಬೆಳಗಾವಿ: ಜಿಲ್ಲೆಯಲ್ಲಿ ಸದ್ಯ ಶಿವಾಜಿ ಪ್ರತಿಮೆಯ ವಿಚಾರವೇ ರಾಜಕೀಯದ ಸರಕಾಗಿದೆ. ಇದಕ್ಕಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಕಿತ್ತಾಡುತ್ತಿದ್ದಾರೆ. ಮರಾಠಿಗರು ಹೆಚ್ಚಾಗಿರುವ ಹಿನ್ನೆಲೆ ಅವರ ಮನವೊಲೈಕೆ ಮಾಡಿ, ವೋಟ್ ಪಡೆಯಲು ಹೊರಟಿರೋ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ರಮೇಶ್ ಜಾರಕಿಹೊಳಿ ಸದಾ ಕಿತ್ತಾಡಿಕೊಂಡೆ ಇರುತ್ತಾರೆ. ಈಗ ಶಿವಾಜಿ ಪ್ರತಿಮೆಯ ವಿಚಾರಕ್ಕೂ ಅದೇ ಆಗಿದೆ.
ರಾಜಹಂಸಗಢದಲ್ಲಿ ನಿರ್ಮಾಣವಾಗಿದ್ದ ಶಿವಾಜಿ ಪ್ರತಿಮೆ ಇಬ್ಬರ ಪ್ರತಿಷ್ಠೆಗೆ ಕಾರಣವಾಗಿತ್ತು. ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ರಮೇಶ್ ಜಾರಕಿಹೊಳಿ ಒಬ್ಬರು ಪ್ರತಿಮೆ ಅನಾವರಣಕ್ಕೆ ಪಣ ತೊಟ್ಟಿ, ಎರಡು ಬಾರಿ ಉದ್ಘಾಟನೆ ಮಾಡಿದ್ದಾರೆ. ಮಾರ್ಚ್ 5ರಂದು ಸಿಎಂ ಬೊಮ್ಮಾಯಿ ಅವರು ಪ್ರತಿಮೆ ಅನಾವರಣ ಮಾಡಿ ಹೋಗಿದ್ದರೆ, ಮಾರ್ಚ್ 7ರಂದು ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ಅನಾವರಣವಾಗಿದೆ.
ಈ ಸಂಬಂಧ ರಮೇಶ್ ಜಾರಕಿಹೊಳಿ ಕಿಡಿಕಾರಿದ್ದು, ರಾಜ್ಯದ ಸಿಎಂ ಲೋಕಾರ್ಪಣೆ ಮಾಡಿ ಹೋಗಿದ್ದಾರೆ ತಾನೆ. ಒಬ್ಬ ಶಾಸಕಿಯಾಗಿ ಜವಬ್ದಾರಿ ಇರಬೇಕು. ಮತ್ತೊಮ್ಮೆ ಲೋಕಾರ್ಪಣೆ ಮಾಡುವಂತದ್ದು ಏನಿತ್ತು. ಶಾಸಕಿ ಎಂಬ ಸೊಕ್ಕು ತೋರಿಸಿದರೆ ಜನರೇ ಅದ್ಕೆ ಉತ್ತರ ನೀಡುತ್ತಾರೆ. ಅದು ಸರ್ಕಾರಿ ಸಮಾವೇಶನಾ ಅಥವಾ ಕಾಂಗ್ರೆಸ್ ಸಮಾವೇಶನಾ ಅಂತ ಜನ ನಿರ್ಧಾರ ಮಾಡಬೇಕು ಎಂದಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಅವರ ಭಾಷಣ ಫುಲ್ ಕೇಳಿಲ್ಲ. ಆದ್ರೆ ಒಂದೆರಡು ಮಾತು ಕೇಳಿದ್ದೀನಿ. ಸಿಎಂ ಅವರನ್ನು ತಪ್ಪು ಮಾಹಿತಿ ನೀಡಿ ಶಿವಾಜಿ ಪ್ರತಿಮೆ ಉದ್ಘಾಟನೆಗೆ ಕರೆದುಕೊಂಡು ಬಂದಿದ್ದೀನಿ ಅಂತ ಹೇಳಿದ್ದಾರೆ. ಅಲ್ಲ ಶಾಸಕಿ ಎಷ್ಟು ಮೂರ್ಖರಿರಬೇಕು ಎಂಬುದು ಇದರಿಂದಾನೆ ಅರ್ಥವಾಗುತ್ತೆ ಎಂದಿದ್ದಾರೆ.