ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ.ಮಾರ್ಚ್.04: ಜನ ಕಲ್ಯಾಣವೇ ನಮ್ಮ ಸರ್ಕಾರದ ಜನಪರ ನೀತಿಯಾಗಿದೆ. ನಾಡಿನ ಜನರು ಶ್ರೀಮಂತರಾದರೆ, ನಾಡು ಶ್ರೀಮಂತವಾಗುತ್ತದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕೈಗೆ ಸರ್ಕಾರದ ಯೋಜನೆಗಳು ನೇರವಾಗಿ ತಲುಪವಂತೆ ಮಾಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಜನರಿಗೆ ತಲುಪಿವೆ ಎಂಬುದನ್ನು ತಿಳಿಸುವುದು ಫಲಾನುಭವಿಗಳ ಸಮ್ಮೇಳದ ಮುಖ್ಯ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಮುರುಘಾರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ದಲ್ಲಿ ಶನಿವಾರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಮ್ಮೇಳನದಲ್ಲಿ ಹಾಗೂ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ರೂ.1,484.69 ಕೋಟಿಗೂ ಅಧಿಕ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಆಳುವುದು ಬೇರೆ, ಆಡಳಿತ ಬೇರೆ. ಸರ್ಕಾರದ ಆಡಳಿತ ನಡೆಸಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದಾರೆ. ಜನಪ್ರತಿನಿಧಿಗಳು ಜನರ ಬದುಕು ಕಟ್ಟಿಕೊಡುವ ಕೆಲಸ ಮಾಡಬೇಕು. ಜನರ ಸಂಕಷ್ಟ ತಿಳಿದು, ಸಮಸ್ಯೆಗಳನ್ನು ಅರಿತು ಪರಿಹಾರ ನೀಡಬೇಕು. ಜನ ಕಲ್ಯಾಣಕ್ಕಾಗಿ ಜಾರಿಗೆ ತರುವ ಯೋಜನೆಗಳು ಜನರ ಮೇಲಿನ ಸರ್ಕಾರದ ಹೂಡಿಕೆಯಾಗಿದೆ. ಇದರಿಂದ ಜನರ ದುಡಿಮೆ ಹಾಗೂ ಜೀವನ ಮಟ್ಟ ಸುಧಾರಿಸಿ ರಾಜ್ಯದ ಆದಾಯ ಹೆಚ್ಚಾಗುತ್ತದೆ. ಸರ್ಕಾರ ಯೋಜನೆಗಳ ಲಾಭ ಪಡೆದು ಜನರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಮೃದ್ಧಿಯಾಗಬೇಕು. ಯೋಜನೆಯನ್ನು ಬಳಸಿಕೊಂಡು ಅಭಿವೃದ್ಧಿಯಾದವರನ್ನು ನೋಡಿ ಆತ್ಮವಿಶ್ವಾಸ ಬೆಳಸಿಕೊಳ್ಳಬೇಕು. ಚಿತ್ರದುರ್ಗ ಜಿಲ್ಲೆಯ ಈ ಸಮಾವೇಶದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಫಲಾನುಭವಿಗಳ ಒಂದಡೆ ನೋಡುವ ಭಾಗ್ಯ ನನ್ನದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕವಾಗಿ ನುಡಿದರು.
ಪವರ್ ಪಾಲಿಟಿಕ್ಸ್ ಹಾಗೂ ಪೀಪಲ್ ಪಾಲಿಟಿಕ್ಸ್ ಬೇರೆ ಬೇರೆ, ಪ್ರಧಾನ ನರೇಂದ್ರ ಮೋದಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜನ ರಾಜಕಾರಣ(ಪೀಪಲ್ ಪಾಲಿಟಿಕ್ಸ್) ಮಾಡಿದ್ದರಿಂದ ಇಂದು ಸಾವಿರಾರು ಕುಟುಂಬಗಳಿಗೆ ಸ್ವಾವಲಂಬಿ ಬದುಕು ಲಭಿಸಿದೆ ಎಂದರು.
ಪ್ರಸಕ್ತ ವರ್ಷದಿಂದ ಭೂಸಿರಿ ಯೋಜನೆ ಜಾರಿ :
ರೈತರು, ಮಹಿಳೆಯರು, ಯುವಕ ಯುವತಿಯುರು, ದೀನದಲಿತರು ಸೇರಿದಂತೆ ಎಲ್ಲಾ ವರ್ಗದ ಶ್ರೇಯೋಭಿವೃದ್ಧಿಗಾಗಿ ದೂರದೃಷ್ಟಿ ಯೋಜನೆಗಳನ್ನು ನಮ್ಮ ಸರ್ಕಾರದಲ್ಲಿ ಅವಳವಡಿಸಿಕೊಳ್ಳಲಾಗಿದೆ. ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಭೂ ಸಿರಿ ಯೋಜನೆ ಜಾರಿಗೆ ತರಲಾಗುತ್ತಿದೆ.
ಬಿತ್ತನೆ ಸಂದರ್ಭದಲ್ಲಿ ರೈತರಿಗೆ ಅನುಕೂಲವಾಗುವಂತೆ ರೂ.10000/- ಗಳನ್ನು ರೈತರ ಖಾತೆ ಜಮೆ ಮಾಡಲಾಗುವುದು. ಬಿತ್ತನೆ ಬೀಜ, ಗೊಬ್ಬರ ಖರೀದಿಗಾಗಿ ರೈತರು ಸಾಲ ಮಾಡದಂತೆ ತಡೆಯುಲು ಯೋಜನೆ ಜಾರಿಗೊಳಿಸಲಾಗುತ್ತಿದೆ.
ಮನೆ ಖರ್ಚು ನಿಭಾಯಿಸಲು ಹೆಣ್ಣು ಮಕ್ಕಳಿಗೆ ಮಾಸಿಕ ರೂ.1000/-, ದುಡಿಯವ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್, ಸ್ತ್ರೀ ಸಮಾಥ್ರ್ಯ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳಿಗೆ ರೂ. 5 ಲಕ್ಷ ಅನುದಾನ, ಸ್ವಾಮಿ ವಿವೇಕಾನಂದ ಯೋಜನೆಯಡಿ ಯುವಕರ ಸಂಘಕ್ಕೆ ರೂ.2 ಲಕ್ಷ ಅನುದಾನ ನೀಡಿ, ಸಂಘದ ಉತ್ಪನಗಳಿಗೆ ಮಾರುಕಟ್ಟೆ ಒದಗಿಸಲಾಗುವುದು. ಕಾಯಕ ಯೋಜನೆಯಡಿ ಗುಡಿ ಕೈಗಾರಿಕೆ ಸೇರಿದಂತೆ ಕಮ್ಮಾರಿಕೆ, ಕುಂಬಾರಿಕೆ, ಬಡಗಿ ಹಾಗೂ ಇತರೆ ವಿಶ್ವಕರ್ಮ ಕಾಯಕಗಳನ್ನು ಉನ್ನತಿಕರಿಸಲು ರೂ.50 ಸಾವಿರ ಅನುದಾನ ನೀಡಲಾಗುವುದು. ಈ ಬಾರಿ ಸರ್ಕಾರಿ ಕಾಲೇಜುಗಳಲ್ಲಿ ಓದುವ ಪಿಯುಸಿ ಹಾಗೂ ಡಿಗ್ರಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕೇಂದ್ರ ಸರ್ಕಾರದಿಂದ ಪಿ.ಎಂ. ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ 53.43 ಲಕ್ಷ ರೈತ ಕುಟುಂಬಗಳಿಗೆ ಕಳೆದ ನಾಲ್ಕು ವರ್ಷದಲ್ಲಿ 16 ಸಾವಿರ ಕೋಟಿ ಖಾತೆಗೆ ಜಮೆ ಮಾಡಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 17 ಲಕ್ಷ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕದೆ. 2.40 ಲಕ್ಷ ಜನರಿಗೆ ವಿದ್ಯುತ್ ಶಕ್ತಿ ಸಂಪರ್ಕ ಕಲ್ಪಿಸಲಾಗಿದೆ. ರೂ. 6000 ಕೋಟಿ ವೆಚ್ಚದಲ್ಲಿ ಹೆದ್ದಾರಿ ನಿರ್ಮಿಸಲಾಗಿದೆ. ರಾಜ್ಯ ಸರ್ಕಾರದಿಂದ ರೈತರಿಗೆ 10 ಹೆಚ್.ಪಿ. ಪಂಪು ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡಲು ರೂ. 8 ಸಾವಿರ ಕೋಟಿ ನಿಗದಿ ಪಡಿಸಲಾಗಿದೆ.
ರಾಜ್ಯದಲ್ಲಿ ರೈತ ವಿದ್ಯಾನಿಧಿ ಯೋಜನೆಯಡಿ 11 ಲಕ್ಷ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ. ಚಿತ್ರದುರ್ಗ ಜಿಲ್ಲೆಯ 12373 ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಯೋಜನೆ ಲಾಭ ದೊರೆತಿದೆ. ಇನ್ನೂ ಹೆಚ್ಚಿನ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ನೀಡಲು ಅವಕಾಶವಿದೆ. ಕೃಷಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಅರ್ಜಿ ಪಡೆಯುವುದನ್ನು ಬಿಟ್ಟು, ರೈತರ ಫ್ರೋಟ್ ತಂತ್ರಾಂಶದಲ್ಲಿನ ಡೇಟಾ ಆಧಾರಿಸಿ, ಮಕ್ಕಳನ್ನು ಗುರುತಿಸಿ ಯೋಜನೆ ಜಾರಿ ಮಾಡಬೇಕು. ರೈತ ಕಾರ್ಮಿಕರು, ನೇಕಾರರು, ಮೀನುಗಾರ ಮಕ್ಕಳಿಗೂ ವಿದ್ಯಾನಿಧಿ ಯೋಜನೆ ವಿಸ್ತರಿಸಲಾಗಿದೆ ಎಂದು ತಿಳಿಸಿದರು.
ಸರ್ಕಾರದಿಂದ 3 ಲಕ್ಷ ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ. ಕುರಿಗಾರರಿಗೆ ಅಮೃತ ಯೋಜನೆಯಡಿ ರೂ. 355 ಕೋಟಿ ನೀಡಲಾಗಿದ್ದು, ಮುಂದಿನ ತಿಂಗಳಿನಿಂದಲೇ 20 ಸಾವಿರ ಕುರಿಗಾಹಿ ಸಂಘಗಳಿಗೆ ಅನುದಾನ ಬಿಡುಗಡೆ ಮಾಡಲಾಗುವುದು. ನಾಲ್ಕು ಲಕ್ಷ ಕುರಿಗಾರರಿಗೆ ಇದರ ಲಾಭ ದೊರೆಯಲಿದೆ.
ಚಿತ್ರದುರ್ಗ ಜಿಲ್ಲೆಯ ಗೊಲ್ಲರಹಟ್ಟಿ, ಕುರುಬರಹಟ್ಟಿ ಹಾಗೂ ಲಂಬಾಣಿ ತಾಂಡಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಿ ಅವರು ವಾಸಿಸುವ ಜಾಗಕ್ಕೆ ಹಕ್ಕು ಪತ್ರ ನೀಡಲಾಗುತ್ತಿದೆ. ಇದೇ ತಿಂಗಳು ದಾವಣಗೆರೆಯಲ್ಲಿ ಜರುಗಲಿರುವ ಫಲಾನುಭವಿಗಳ ಸಮಾವೇಶದಲ್ಲಿ ಬಂಜಾರ ಸಮುದಾಯದವರೂ ಸೇರಿದಂತೆ ವಿವಿಧ ವರ್ಗದ ಸುಮಾರು 1 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗುವುದು ಎಂದರು.
ಕೇಂದ್ರ ಸರ್ಕಾರ ಉಚಿತವಾಗಿ ಕೋವಿಡ್ ಲಸಿಕೆ ನೀಡಿದ್ದರಿಂದ ರಾಜ್ಯ ಕೊವಿಡ್ ಸಂಕಷ್ಟದಿಂದ ಹೊರಬಂದಿದೆ. ಇಂದು ನಾವೆಲ್ಲ ಮಾಸ್ಕ್ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸುವಂತಾಗಿದೆ. ಉಚಿತ ವ್ಯಾಕ್ಸಿನ್ ನೀಡಿದ್ದರಿಂದ ದೇಶ ಸಧೃಡವಾಗಿದೆ. ಹಿಂದಿನ ಸರ್ಕಾರ ಎಸ್.ಸಿ ಪಟ್ಟಿ ಹಲವಾರು ಜಾತಿಗಳನ್ನು ಸೇರಿಸಿತ್ತು. ಆದರೆ ಮೀಸಲಾತಿ ಹೆಚ್ಚಿಸಿರಲಿಲ್ಲ. ನಮ್ಮ ಸರ್ಕಾರ ಮೀಸಲಾತಿ ಹೆಚ್ಚಳಕ್ಕೆ ದಿಟ್ಟ ನಿರ್ಧಾರ ಕೈಗೊಂಡಿದೆ.
ಎಸ್.ಸಿ ಹಾಗೂ ಎಸ್.ಟಿ ಮೀಸಲಾತಿ ಹೆಚ್ಚಿಸಿ ಆದೇಶ ಹೊರಡಿಸಿ ಕಾರ್ಯಗತಗೊಳಿಸಲಾಗುತ್ತಿದೆ. ನೇಮಕಾತಿ ಹಾಗೂ ಬಡ್ತಿಗಳಲ್ಲಿ ಮೀಸಲಾತಿ ಹೆಚ್ಚಳವನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಎಸ್.ಟಿ ಸೋಮಶೇಖರ್, ಗಣಿ ಮತ್ತು ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಮತ್ತು ಹಿರಿಯ ನಾಗರೀಕ ಸಬಲೀಕರಣ ಸಚಿವ ಆಚಾರ್ ಹಾಲಪ್ಪ ಬಸಪ್ಪ, ಪ್ರವಾಸೋದ್ಯಮ ಸಚಿವ ಆನಂದ್‍ಸಿಂಗ್, ವಿಧಾನ ಪರಿಷತ್ ಮುಖ್ಯ ಸಚೇತಕ ಹಾಗೂ ಶಾಸಕ ಡಾ. ವೈ.ಎ ನಾರಾಯಣಸ್ವಾಮಿ, ಕರ್ನಾಟಕ ರಾಜ್ಯ ಸಾರಿಗೆ ನಿಗಮ ಅಧ್ಯಕ್ಷ ಹಾಗೂ ಶಾಸಕ ಎಂ. ಚಂದ್ರಪ್ಪ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಗೂಳಿಹಟ್ಟಿ ಡಿ ಶೇಖರ್, ಲಿಡ್ಕರ್ ಅಧ್ಯಕ್ಷ ಹಾಗೂ ಮಾಯಕೊಂಡ ಶಾಶಕ ಪ್ರೊ. ಲಿಂಗಣ್ಣ, ಶಾಸಕರಾದ ಪೂರ್ಣಿಮಾ ಕೆ ಶ್ರೀನಿವಾಸ್, ವಿಧಾನಪರಿಷತ್ ಸದಸ್ಯರುಗಳಾದ ಚಿದಾನಂದ ಎಂ ಗೌಡ, ಕೆ.ಎಸ್. ನವೀನ್, ಹೇಮಲತಾ ನಾಯಕ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಜಿ.ಟಿ ಸುರೇಶ್, ನಗರಸಭೆ ಅಧ್ಯಕ್ಷೆ ಬಿ.ತಿಪ್ಪಮ್ಮ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಾಮ್‍ಪ್ರಸಾತ್ ಮನೋಹರ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿವಾಕರ.ಎಂ.ಎಸ್. ಪೆÇಲೀಸ್ ವರಿಷ್ಠಾಧಿಕಾರಿ ಪರುಶುರಾಮ.ಕೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸರ್ಕಾರದ ವಿವಿಧ ಯೋಜನೆಗಳಡಿ ಸೌಲಭ್ಯಗಳು, ಮಂಜೂರಾತಿ ಪತ್ರ, ಉಚಿತ ಲ್ಯಾಪ್‍ಟಾಪ್ ಮುಂತಾದ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿತರಿಸಿದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನದ ಅಂಗವಾಗಿ ವಿವಿಧ ಸಾಂಸ್ಕøತಿಕ ಕಲಾ ತಂಡಗಳಿಂದ ಶನಿವಾರ ನಗರದಲ್ಲಿ ಭವ್ಯ ಮೆರವಣಿಗೆ ನಡೆಯಿತು. ನಗರದ ನೀಲಕಂಠೇಶ್ವರ ದೇಗುಲದ ಬಳಿ ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಅವರು ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳು ಕುಣಿತ, ಕಹಳೆ ಸೇರಿದಂತೆ ವಿವಿಧ ಕಲಾತಂಡಗಳಿಂದ ಭವ್ಯ ಮೆರವಣಿಗೆ ನಡೆಯಿತು. ನಗರದ ನೀಲಕಂಠೇಶ್ವರ ದೇಗುಲದಿಂದ ಆರಂಭವಾದ ಮೆರವಣಿಗೆಯು ಗಾಂಧಿವೃತ್ತ, ಪ್ರವಾಸಿ ಮಂದಿರ, ಅಂಬೇಡ್ಕರ್ ವೃತ್ತ, ಮದಕರಿ ನಾಯಕ ವೃತ್ತ ಸೇರಿದಂತೆ ಬಿ.ಡಿ.ರಸ್ತೆಯ ಮೂಲಕ ವೇದಿಕೆ ಕಾರ್ಯಕ್ರಮ ನಡೆಯುವ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದವರೆಗೆ ಸಾಗಿತು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.