ಚಿತ್ರದುರ್ಗ (ಮಾ.01) : ಕೇಂದ್ರ ಮತ್ತು ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ಸಂಪೂರ್ಣವಾಗಿ ಬರೀ ಸುಳ್ಳು ಹೇಳುವ ಮೂಲಕ ಜನರ ದಾರಿಯನ್ನು ತಪ್ಪಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಮಾತ್ರ ಜನಪರವಾಗಿದ್ದು ಸಂಕಷ್ಟದಲ್ಲಿರುವ ಜನರಿಗೆ ಕೈ ಹಿಡಿಯುವ ಪಕ್ಷವಾಗಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಹೇಳಿದರು.
ತಾಲ್ಲೂಕಿನ ಭರಮಸಾಗರದ ದುರ್ಗಾಂಭಿಕ ದೇವಾಸ್ಥಾನದ ಆವರಣದಲ್ಲಿ ಬುಧವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಕಾಂಗ್ರೆಸ್ ಪಕ್ಷದ ಗೃಹ ಜ್ಯೋತಿ, ಗೃಹ ಲಕ್ಷ್ಮಿ ,ಅನ್ನಭಾಗ್ಯ ಕಾರ್ಡ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಿಜೆಪಿ ಬರೀ ಸುಳ್ಳು ಹೇಳುವ ಮೂಲಕ ಜನರ ದಾರಿಯನ್ನು ತಪ್ಪಿಸುತ್ತಿದೆ. ಕಾಂಗ್ರೆಸ್ ಪಕ್ಷವು ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಉದ್ದೇಶದಿಂದ ಗೃಹಜ್ಯೋತಿ ಯೋಜನೆ ಮೂಲಕ 200 ಯುನಿಟ್ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ ರೂ. 2000, ಹಾಗೂ ಅನ್ನಭಾಗ್ಯ ಯೋಜನೆಯ ಮೂಲಕ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡಲು ತೀರ್ಮಾನಿಸಿ ಈ ಮೂರು ಐತಿಹಾಸಿಕ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ ಎಂದರು.
ಕಾಂಗ್ರೆಸ್ ಪಕ್ಷವು ನುಡಿದಂತೆ ನಡೆದಿದೆ. ಈ ಹಿಂದೆ ಇದ್ದ ಸಿದ್ದರಾಮಯ್ಯ ಸರ್ಕಾರದಲ್ಲಿ ನಾವು ಏನು ಹೇಳಿದ್ದೇವೆಯೋ, ಅದೇ ರೀತಿ ಜನರಿಗೆ ಅನೇಕ ಯೋಜನೆಗಳನ್ನು ಕಾಂಗ್ರೆಸ್ ಪಕ್ಷ ಕೊಟ್ಟದೆ ಎಂದರು.
ಕಾಂಗ್ರೆಸ್ ಪಕ್ಷವು ಜಾತಿಭೇದವಿಲ್ಲದೆ ಅನ್ನ ಭಾಗ್ಯವನ್ನು ಕರುಣಿಸಿದಂತಹ ಪಕ್ಷವಾಗಿದೆ.ಅಂತಹ ಪಕ್ಷದ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ವಿವರಿಸಿ ಸುಳ್ಳುಗಳ ಸರಮಾಲೆಯನ್ನೇ ಹೊದಿಸಿಕೊಂಡು ಜನರ ಮನಸ್ಸಿನಲ್ಲಿ ವಿಷ ಬೀಜ ಬಿತ್ತುತ್ತ ಬಿಜೆಪಿ ಪಕ್ಷ ಅಪಪ್ರಚಾರ ಮಾಡುತ್ತಿದೆ. ಯಾವುದೇ ರೀತಿಯ ಬಡ ಜನರಿಗೆ ಅನುಕೂಲವಾಗುವಂತೆ ಮಾಡಿಲ್ಲ.ಇದೀಗ ಒಂದು ಗ್ಯಾಸ್ ಸಿಲಿಂಡರ್ ಬೆಲೆ ರು.1150, 1 ಕೆಜಿ ಅಕ್ಕಿಯ ಬೆಲೆ ರು.50 ಹೀಗೆ ಬೆಲೆ ಏರಿಕೆಗಳ ಮಧ್ಯೆ ಬಡ ಜನರು ಜೀವನ ಮಾಡುವುದು ಕಷ್ಟವಾಗಿದೆ ಎಂದು ಆರೋಪಿಸಿದರು.
ಕೆಪಿಸಿಸಿ ಸದಸ್ಯ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಚ್.ಎನ್. ತಿಪ್ಪೇಸ್ವಾಮಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸರ್ವ ಜನಾಂಗದ ವರ್ಗದವರು ಸಂತೃಪ್ತಿಯಿಂದ ಜೀವನ ನಡೆಸುತ್ತಿದ್ದರು. ಆದರೆ ಈಗ ತುಂಬಾ ದುಬಾರಿ ಜೀವನ ನಡೆಸಬೇಕಾಗಿದೆ ಎಂದು ದೂರಿದರು.
ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎಮ್ಮೆಹಟ್ಟಿ ಕೃಷ್ಣಮೂರ್ತಿ ಮಾತನಾಡಿ, ಕಾಂಗ್ರೆಸ್ ಪಕ್ಷವು ಬಡವರ ಮನೆಯ ದೀಪವು ಆರಬಾರದೆಂದು ಉಚಿತವಾಗಿ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ಕೊಡುವುದಾಗಿ ಘೋಷಿಸಿದೆ.ಕಾಂಗ್ರೆಸ್ ಪಕ್ಷಮಾತ್ರ ಬಡವರ ಪರವಾಗಿ ಬಡವರ ಪಕ್ಷವಾಗಿ ಹೊರಹೊಮ್ಮಿದೆ. ಸ್ವತಂತ್ರ ಬಂದಾಗಿನಿಂದಲೂ ಬಡವರಿಗಾಗಿಯೇ ಸ್ಥಾಪಿತವಾದಂತ ಪಕ್ಷವಾಗಿದೆ. ಪಕ್ಷ ಕೊಟ್ಟಂತಹ 7 ಕೆಜಿ ಅಕ್ಕಿಯನ್ನು ಐದು ಕೆಜಿಗೆ ಇಳಿಸಿ ಜನರಿಗೆ ತಿನ್ನುವ ಅನ್ನವನ್ನು ಕಸಿದುಕೊಂಡಿದೆ ರೈತರಿಗೆ ಗಂಗಾ ಕಲ್ಯಾಣ ಯೋಜನೆಯನ್ನು ಅನುಷ್ಠಾನಗೊಳಿಸಿ ಎಲ್ಲ ರೈತರ ಕೃಷಿಗೆ ಅನುಕೂಲವಾಗಲಿ ಎಂದು ವಿದ್ಯುತ್ತನ್ನು ಉಚಿತವಾಗಿ ಕೊಡುತ್ತಾ ಬಂದಿದೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಭರಮಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಅಳಗವಾಡಿ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದುರ್ಗೇಶ್ ಪೂಜಾರ್, ತಾಂಡಾ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಅನಿಲ್ ಕುಮಾರ್, ಜಿಪಂ ಮಾಜಿ ಸದಸ್ಯರಾದ ನರಸಿಂಹರಾಜ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಮುಬಾರಕ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು,ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.