ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಫೆ.27): ವಿಜ್ಞಾನ ಹಣ ಗಳಿಕೆಯ ದಂದೆಯಾಗಬಾರದು ಕಟ್ಟಕಡೆಯ ವ್ಯಕ್ತಿಗೆ ತಲುಪಬೇಕೆಂದು ಚಿತ್ರದುರ್ಗ ವಿಜ್ಞಾನ ಕೇಂದ್ರದ ಅಧ್ಯಕ್ಷ ಜೆ.ಯಾದವರೆಡ್ಡಿ ತಿಳಿಸಿದರು.
ಚಿತ್ರದುರ್ಗ ವಿಜ್ಞಾನ ಕೇಂದ್ರದ ವತಿಯಿಂದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಉದ್ಗಾಟಿಸಿ ಮಾತನಾಡಿದರು.
ಜಾಗತಿಕ ಯೋಗಕ್ಷೇಮಕ್ಕಾಗಿ ಜಾಗತಿಕ ವಿಜ್ಞಾನ ಈ ವರ್ಷದ ಘೋಷ ವಾಕ್ಯ. ವಿಜ್ಞಾನ ಜನಸಾಮಾನ್ಯರಿಗೆ ಸಿಗಬೇಕೆ ವಿನಃ ಮನುಕುಲದ ನಾಶಕ್ಕೆ ಬಳಕೆಯಾಗಬಾರದು. ಸಂಶೋಧನೆಗಳು ಪ್ರಾಣ ಉಳಿಸಬೇಕು. ಮಾರಾಟದ ವಸ್ತುವಾಗಬಾರದು. ವಿಜ್ಞಾನ ಯಾವುದಕ್ಕೆ ಬಳಕೆಯಾಗಬೇಕೋ ಅದಕ್ಕೆ ಆಗುತ್ತಿಲ್ಲ. ಬಾಂಬ್, ಅಣ್ವಸ್ತ್ರಗಳ ತಯಾರಿಕೆಗೆ ಉಪಯೋಗವಾಗುತ್ತಿರುವುದು ನೋವಿನ ಸಂಗತಿ ಎಂದು ವಿಷಾಧಿಸಿದರು.
ವಿಜ್ಞಾನ ನಿಂತ ನೀರಲ್ಲ. ಹೊಸ ಹೊಸ ಅನ್ವೇಷಣೆ ಪ್ರತಿ ಕ್ಷಣಕ್ಕೂ ನಡೆಯುತ್ತಿರುತ್ತದೆ. ಅಪೌಷ್ಠಿಕತೆ, ಅನಾರೋಗ್ಯಕ್ಕೆ ವಿಜ್ಞಾನದಲ್ಲಿ ಪರಿಹಾರವಿದೆ. ಅಣ್ವಸ್ತ್ರಗಳನ್ನು ತಯಾರು ಮಾಡಿ ಮಾರಾಟ ಮಾಡಲು ರಷ್ಯ-ಅಮೇರಿಕಾ ಮುಂಚೂಣಿಯಲ್ಲಿದೆ. ಪ್ರತಿ ವರ್ಷವೂ ಮೂರು ಲಕ್ಷ ಕೋಟಿ ರೂ.ಗಳನ್ನು ಶಸ್ತ್ರಾಸ್ತ್ರಕ್ಕೆ ಖರ್ಚು ಮಾಡಲಾಗುತ್ತಿದೆ.
ರಾಜಕೀಯ ರೂಪಿಸುವ ರಾಜಕಾರಣಿಗಳಿಗೆ ಯುದ್ದ ಬೇಕೆ ಹೊರತು ಜನಸಾಮಾನ್ಯರು ಯಾರು ಯುದ್ದ ಬಯಸುವುದಿಲ್ಲ. ರಷ್ಯ-ಉಕ್ರೇನ್ ಯುದ್ದದಲ್ಲಿ 134 ಲಕ್ಷ ಕೋಟಿ ರೂ.ಗಳ ನಷ್ಠವಾಗಿದೆ. ಅಹಂಕಾರ, ಪ್ರತಿಷ್ಠೆಗಾಗಿ ಯುದ್ದ ಮಾಡುವ ದೇಶಗಳು ಇವೆ ಎನ್ನುವುದಾದರೆ ವಿಜ್ಞಾನ ಎತ್ತ ಸಾಗುತ್ತಿದೆ ಎನ್ನುವುದನ್ನು ಪ್ರಜ್ಞಾವಂತರು ಊಹಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಚಳ್ಳಕೆರೆ ತಾಲ್ಲೂಕಿನ ಖುದಾಪುರ ಬಳಿ ದೊಡ್ಡ ಅಣ್ವಸ್ತ್ರ ಕೇಂದ್ರ ಆರಂಭವಾಗಿದೆ. ಕೊರೋನಾದಲ್ಲಿ ಕೆಲವರು ಅನಾಥರಾಗಿ ಸತ್ತರು. ಹೆಣವನ್ನು ಪಡೆದು ಅಂತ್ಯ ಸಂಸ್ಕಾರ ನಡೆಸುವುದಕ್ಕೂ ಸಂಬಂಧಿಗಳು ಹಿಂದೇಟು ಹಾಕಿದ್ದನ್ನು ನೋಡಿದ್ದೇವೆ. ಇದರಿಂದ ಎಷ್ಟೋ ಮಂದಿ ಅನಾಥರಾಗಿದ್ದಾರೆ. ಕೋವಿಡ್‍ನಲ್ಲಿ ನಿಜವಾಗಿಯೂ ಮನುಷ್ಯತ್ವ ಸಾಯಿತು. ಈ ನಿಟ್ಟಿನಲ್ಲಿ ವಿಜ್ಞಾನದ ಲಾಭ ಪ್ರತಿಯೊಬ್ಬರಿಗೂ ಸಿಗಬೇಕು ಎಂದರು.
ಚಿತ್ರದುರ್ಗ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಕೆ.ರಾಜ್‍ಕುಮಾರ್ ಉಪನ್ಯಾಸ ನೀಡುತ್ತ ಸರ್ ಸಿ.ವಿ.ರಾಮನ್ ಎಫೆಕ್ಟ್ ಮೂಲಕ ವಿದ್ಯಾರ್ಥಿಗಳು ವೈಜ್ಞಾನಿಕ ಅರಿವು ಮೂಡಿಸಿಕೊಳ್ಳುವ ಅಗತ್ಯವಿದೆ. ಎಲ್ಲರಲ್ಲಿಯೂ ವೈಜ್ಞಾನಿಕ ಪ್ರಜ್ಞೆ ಮೂಡಿಸುವುದು ವಿಜ್ಞಾನ ಕೇಂದ್ರದ ಉದ್ದೇಶ. ವಿದ್ಯಾವಂತರಲ್ಲಿಯೇ ಮೂಢನಂಬಿಕೆ, ಅವೈಜ್ಞಾನಿಕತೆ ಜಾಸ್ತಿಯಾಗುತ್ತಿರುವುದು ನೋವಿನ ಸಂಗತಿ. ಕಂದಾಚಾರಗಳನ್ನು ವಿಜ್ಞಾನದಿಂದ ದೂರ ಮಾಡಬಹುದು. ವಿಶೇಷವಾಗಿ ಹೆಣ್ಣು ಮಕ್ಕಳು ವೈಜ್ಞಾನಿಕ ಜಾಗೃತಿ ಮೂಡಿಸಿಕೊಂಡಾಗ ಜೀವನ ಸುಗಮವಾಗಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಸರ್ ಸಿ.ವಿ.ರಾಮನ್‍ರವರ ರಾಮನ್ ಎಫೆಕ್ಟ್ ಸಂಶೋಧನೆ ತುಂಬಾ ಸರಳವಾದುದು. ವಿಜ್ಞಾನಕ್ಕೆ ಒತ್ತು ಕೊಡದ ದೇಶ ಮುಂದುವರೆಯಲು ಸಾಧ್ಯವಿಲ್ಲ. ಪಠ್ಯಕ್ರಮದಲ್ಲಿ ವರ್ಷಕ್ಕೊಮ್ಮೆಯಾದರೂ ವಿಜ್ಞಾನ ದಿನಾಚರಣೆಗೆ ಅವಕಾಶ ಕೊಡಬೇಕು. ಮೂಢನಂಬಿಕೆ, ವಾಸ್ತು ಇನ್ನಿತರೆ ಕಂಚಾಚಾರಗಳಿಗೆ ಸಂಬಂಧಿಸಿದಂತೆ ಸರ್ವೆ, ಚರ್ಚೆಗಳು ಆಗಬೇಕು. 1922 ರಿಂದ 28 ರವರೆಗೆ ಸರ್ ಸಿ.ವಿ.ರಾಮನ್ ಆರು ವರ್ಷಗಳ ಕಾಲ ಸಂಶೋಧನೆ ನಡೆಸಿದ್ದಾರೆ. ವಿಜ್ಞಾನಿಗಳ ಜೀವನ ಚರಿತ್ರೆಯನ್ನು ಓದಿ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಚಿತ್ರದುರ್ಗ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಎಂ.ಆರ್.ದಾಸೆಗೌಡ ಮಾತನಾಡಿ ಬೆಳಕನ್ನು ಯಾರು ನೋಡಿಲ್ಲ. ಬೆಳಕಿನ ಪರಿಣಾಮ ನೋಡಬಹುದು ಎನ್ನುವುದನ್ನು ಸರ್ ಸಿ.ವಿ.ರಾಮನ್ ತಮ್ಮ ಸಂಶೋಧನೆಯ ಮೂಲಕ ಸಾರಿದ್ದಾರೆ. ಸರ್ ಸಿ.ವಿ.ರಾಮನ್, ಮೇರಿ ಕ್ಯೂರಿ ಇವರುಗಳ್ಯಾರು ಸಂಶೋಧನೆಗಳನ್ನು ಮಾರಾಟ ಮಾಡಿಕೊಂಡಿಲ್ಲ. ಉಳಿದಂತೆ ಎಲ್ಲಾ ಸಂಶೋಧನೆಗಳು ಕೋಟಿಗಟ್ಟಲೆ ಪೇಟೆಂಟ್ ತೆಗೆದುಕೊಂಡಿವೆ. ವಿಜ್ಞಾನದಿಂದ ಸಾರ್ವತ್ರಿಕವಾಗಿ ಜಾಗತಿಕ ಯೋಗಕ್ಷೇಮ ಪಡೆಯಬಹುದು. ವಿಜ್ಞಾನದ ಅರಿವು, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಸೇರಿದಂತೆ ಎಲ್ಲರಲ್ಲಿಯೂ ಇರಬೇಕು ಎಂದು ಅಭಿಪ್ರಾಯಪಟ್ಟರು.
ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸಿದ್ದರಾಮ ಚನಗೊಂಡ ಅಧ್ಯಕ್ಷತೆ ವಹಿಸಿದ್ದರು.
ಐ.ಕ್ಯೂ.ಎ.ಸಿ. ಕೋಆರ್ಡಿನೇಟರ್ ಡಾ.ಡಿ.ನಾಗರಾಜ, ವಿಜ್ಞಾನ ಕೇಂದ್ರದ ಕೋ-ಆರ್ಡಿನೇಟರ್ ಡಾ.ವೈ.ಟಿ.ರವಿಕುಮಾರ್, ಸದಸ್ಯ ಎಚ್.ದಾದಖಲಂದರ್, ಗೆಜೆಟೆಡ್ ಮ್ಯಾನೇಜರ್ ಓ.ಹಿಮಂತರಾಜು ವೇದಿಕೆಯಲ್ಲಿದ್ದರು.
ರಸಾಯನಶಾಸ್ತ್ರ ಸಹ ಪ್ರಾಧ್ಯಾಪಕಿ ಪ್ರೊ.ಶೋಭ ದಳವಾಯಿ ಪ್ರಾರ್ಥಿಸಿದರು. ಡಾ.ರಮೇಶ್ ಐನಳ್ಳಿ ಸ್ವಾಗತಿಸಿದರು. ಸಸ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಸುಧಾಮ ನಿರೂಪಿಸಿದರು.