ವರದಿ ಮತ್ತು ಫೋಟೋ ಕೃಪೆ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ: ಹೊಲಿಗೆ ತರಬೇತಿ ಪಡೆದುಕೊಂಡಿರುವ ಮಹಿಳೆಯರು ಸ್ವಂತ ದುಡಿಮೆಯ ಮೂಲಕ ಸ್ವಾವಲಂಭಿ ಬದುಕು ಕಂಡುಕೊಳ್ಳುವಂತೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ತಾಲ್ಲೂಕು ಯೋಜನಾಧಿಕಾರಿ ಅಶೋಕ್ ಕರೆ ನೀಡಿದರು.
ತಾಲ್ಲೂಕಿನ ಮೆದೇಹಳ್ಳಿ ವಲಯ ಕಾವಡಿಗರಹಟ್ಟಿ ಕಾರ್ಯ ಕ್ಷೇತ್ರದ ಪ್ರಗತಿ ಜ್ಞಾನಿವಿಕಾಸ ಕೇಂದ್ರದಲ್ಲಿ ನಡೆದ ಹೊಲಿಗೆ ತರಬೇತಿ ಕೇಂದ್ರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಹೊಲಿಗೆ ಮತ್ತು ಕಸೂತಿ ಕೆಲಸಕ್ಕೆ ಸಾಕಷ್ಟು ಬೇಡಿಕೆಯಿರುವುದರಿಂದ ಹೊಲಿಗೆ ತರಬೇತಿ ಪಡೆದ ಸ್ವಸಹಾಯ ಸಂಘದ ಎಲ್ಲಾ ಸದಸ್ಯರು ಮನೆಯಲ್ಲಿಯೇ ಸ್ವ-ಉದ್ಯೋಗ ಮಾಡುವ ಮೂಲಕ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬಹುದು ಎಂದು ಹೇಳಿದರು.
ಪ್ರಾದೇಶಿಕ ವಿಭಾಗದ ಗುಂಪು ಲೆಕ್ಕ ಪರಿಶೋಧನಾ ಯೋಜನಾಧಿಕಾರಿ ರವಿ ಮಾತನಾಡಿ ಜ್ಞಾನವಿಕಾಸ ಕೇಂದ್ರ ಮಾತೃಶ್ರಿ ಹೇಮಾವತಿ ಅಮ್ಮನವರ ಕನಸಾಗಿದ್ದು, ಈ ಕೇಂದ್ರದಲ್ಲಿ ಸೇರಿಕೊಂಡ ಎಲ್ಲಾ ಮಹಿಳೆಯರು ತರಬೇತಿ ಪಡೆದು ವ್ಯವಹಾರದ ಜ್ಞಾನ ವೃದ್ದಿಸಿಕೊಂಡು ಸ್ವಾವಲಂಭಿ ಬದುಕು ಕಟ್ಟಿಕೊಳ್ಳಬಹುದು ಎಂದು ತಿಳಿಸಿದರು.
ಶ್ರೀಮತಿ ಮಂಜುಳ ಮಾತನಾಡುತ್ತ ಗ್ರಾಮೀಣ ಪ್ರದೇಶಗಳ ಮಹಿಳೆಯರ ಅಭಿವೃದ್ದಿಗಾಗಿ ಹೇಮಾವತಿ ಅಮ್ಮನವರು ಜ್ಞಾನವಿಕಾಸ ಕೇಂದ್ರದ ಮೂಲಕ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಸ್ವ-ಉದ್ಯೋಗ ಕೈಗೊಳ್ಳುವ ಸಂಘದ ಸದಸ್ಯರುಗಳಿಗೆ ಪ್ರಗತಿ ನಿಧಿಯನ್ನು ನೀಡುತ್ತಿದ್ದಾರೆ. ಇಪ್ಪತ್ತು ಮಹಿಳೆಯರು ಆಸಕ್ತಿಯಿಂದ ಹೊಲಿಗೆ ತರಬೇತಿಯನ್ನು ಕಲಿತಿದ್ದಾರೆಂದರು.
ಮಮತ, ನಗರಸಭೆ ಸದಸ್ಯ ಜಯಣ್ಣ, ಆಂತರಿಕ ಲೆಕ್ಕಪರಿಶೋಧಕರಾದ ಶ್ರೀಮತಿ ರೇಖಾ, ವಲಯ ಮೇಲ್ವಿಚಾರಕ ಗುರುಬಸವರಾಜ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಸುಧಾ, ಸೇವಾ ಪ್ರತಿನಿಧಿ ಗೀತ, ಶೀಲ ಹಾಗೂ ಕೇಂದ್ರದ ಎಲ್ಲಾ ಸದಸ್ಯರುಗಳು ಸಮಾರೋಪ ಸಮಾರಂಭದಲ್ಲಿ ಹಾಜರಿದ್ದರು.