ಧರ್ಮಗಳ ಆಚಾರ ವಿಚಾರ ಬೇರೆ, ಆದರೆ ಉದ್ದೇಶ ಒಂದೇ : ಜಗದ್ಗುರು ಶ್ರೀ ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ

suddionenews
1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತದುರ್ಗ, (ಫೆ.26): ಮಸ್ಜಿದೆ-ಎ-ಖುಬಾ ವತಿಯಿಂದ ಮೆದೇಹಳ್ಳಿ ರಸ್ತೆಯಲ್ಲಿ ಭಾನುವಾರ ಮಸೀದಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಜಗದ್ಗುರು ಶ್ರೀ ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ ಮಸೀದಿಗೆ ಭೇಟಿ ನೀಡಿ ಅಲ್ಲಿ ಪ್ರದರ್ಶಿಸಲಾಗಿದ್ದ ವಿವಿಧ ಬಗೆಯ ಸಂದೇಶಗಳನ್ನು ಸಾರುವ ನಾಮಫಲಕಗಳನ್ನು ವೀಕ್ಷಿಸಿ ಮಾತನಾಡಿದರು.

ಒಂದೊಂದು ಧರ್ಮಗಳ ಆಚಾರ ವಿಚಾರ ಬೇರೆಯಿರಬಹುದು. ಆದರೆ ಉದ್ದೇಶ ಮಾತ್ರ ಒಂದೇ ಆಗಿರುತ್ತದೆ. ಪ್ರವಾದಿ ಮಹಮದ್ ಪೈಗಂಬರ್‍ರವರು ಕೇವಲ ಮುಸಲ್ಮಾನರಿಗಷ್ಟೆ ಅಲ್ಲ. ಇಡೀ ಮಾನವ ಕುಲಕ್ಕೆ ಸಮಾನತೆ, ಶಾಂತಿಯ ಸಂದೇಶ ಸಾರಿದ್ದಾರೆ. ಅದೇ ರೀತಿ ಅನೇಕ ಸಾಧು, ಸಂತರು, ಶರಣರು, ಸಮ ಸಮಾಜದ ಕನಸು ಕಂಡವರು. ವರ್ಣ ಬೇಧ, ಜಾತಿ ತಾರತಮ್ಯ ಮನುಕುಲವನ್ನೇ ನುಂಗಿ ಹಾಕುತ್ತಿದೆ. ಅದಕ್ಕಾಗಿ ಎಲ್ಲಾ ಧರ್ಮ ಗ್ರಂಥಗಳು ಸಾರುವ ನೀತಿಯನ್ನು ಪ್ರತಿಯೊಬ್ಬರು ಪಾಲಿಸಿದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಹೇಳಿದರು.

ಬಡ್ಡಿ ಹಣ ತಿನ್ನುವುದು ಮಾನವೀಯತೆಗೆ ಕಳಂಕ, ಕರುಣೆ ಪರೋಪಕಾರ ತುಂಬಿದ ಬದುಕು, ಅಝಾನ್ ಕರೆಯ ಉದ್ದೇಶ, ಹೆತ್ತವರ ಸೇವೆ ಮಾಡುವ ಬದುಕು, ಪರಸ್ತ್ರೀಯನ್ನು ಕೆಟ್ಟ ದೃಷ್ಟಿಯಿಂದ ನೋಡುವುದು ವ್ಯಭಿಚಾರವೇ ಹೀಗೆ ಹತ್ತು ಹಲವಾರು ಉಪಯುಕ್ತ ಸಂದೇಶಗಳುಳ್ಳ ಬೋರ್ಡ್‍ಗಳನ್ನು ಮಸೀದಿ ದರ್ಶನದಲ್ಲಿ ಇರಿಸಲಾಗಿತ್ತು.

ಮಸ್ಜಿದೆ-ಎ-ಖುಬಾ ಗುರುಗಳಾದ ಮಹಮದ್ ಜುಬೇರ್, ಮಸೀದಿ ಅಧ್ಯಕ್ಷ ಆರ್.ಕೆ.ಸರ್ದಾರ್, ನೂರುಲ್ಲಾ, ಅಬ್ದುಲ್ ರಬ್, ಸೈಯದ್ ವಸೀಂ, ಮೆಹಬೂಬ್‍ಖಾನ್, ಇನ್ನು ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *