ಚಿತ್ರದುರ್ಗ, (ಅಕ್ಟೋಬರ್. 07) : ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ಸತತವಾಗಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಮುಂದಿನ 3-4 ದಿನಗಳಲ್ಲಿ ಸಾಧಾರಣದಿಂದ ಹೆಚ್ಚಿನ ಮಳೆ ಬೀಳುವ ಸಂಭವವಿರುತ್ತದೆ ಎಂದು ರಾಜ್ಯ ಹವಮಾನ ಇಲಾಖೆ ಮಾಹಿತಿ ನೀಡಿದೆ.
ಹೆಚ್ಚಿನ ಮಳೆಯಿಂದಾಗಿ ಹಳ್ಳ-ಕೊಳ್ಳ, ಕೆರೆ, ಗೋಕಟ್ಟೆಗಳಿಗೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದುಬರುತ್ತಿದ್ದು, ನದಿ, ಕೆರೆ, ಹಳ್ಳ ಮುಂತಾದ ನೀರಿನ ಹರಿವು ಇರುವ ಸ್ಥಳದಲ್ಲಿ ಇರುವ ನಿವಾಸಿಗಳು, ತಗ್ಗು ಪ್ರದೇಶದಲ್ಲಿ ಇರುವ ನಿವಾಸಿಗಳು, ಗುಡಿಸಲು ಹಾಗೂ ಮಣ್ಣಿನ ಮನೆಗಳಲ್ಲಿ ವಾಸವಾಗಿರುವ ಎಚ್ಚರಿಕೆಯಿಂದ ಇರಲು ಹಾಗೂ ನೀರಿನ ಹರಿವು ಹೆಚ್ಚು ಇರುವ ಸ್ಥಳದಲ್ಲಿ ಬಟ್ಟೆ ತೊಳೆಯುವುದು, ಜಾನುವಾರು ಸ್ವಚ್ಛತೆ, ಈಜು ಕ್ರೀಡೆಯಲ್ಲಿ ತೊಡಗದಂತೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಕೋರಿದೆ.
ಹೆಚ್ಚಿನ ಮಳೆಯಿಂದಾಗಿ ನೀರು ನುಗ್ಗುವಂತಹ ಸಂದರ್ಭಗಳು ಇದ್ದಲ್ಲಿ, ಸತತ ಮಳೆಯಿಂದಾಗಿ ಮನೆಯು ಹಾನಿಗೊಂಡು ಬೀಳುವ ಸಂಭವವಿದ್ದಲ್ಲಿ ಗ್ರಾಮಗಳು, ಸ್ಥಳಗಳಲ್ಲಿ ಇರುವ ಸಾರ್ವಜನಿಕ ಸಮುದಾಯ ಭವನಗಳು, ದೇವಸ್ಥಾನಗಳು, ಸರ್ಕಾರಿ ಶಾಲೆಗಳು ಮುಂತಾದ ಕಡೆ ತಂಗಲು ವ್ಯವಸ್ಥೆ ಮಾಡಲಾಗುವುದರಿಂದ ಭಾದಿತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಇಂತಹ ಸಂದರ್ಭದಲ್ಲಿ ಸೂಕ್ತ ಸಹಾಯಕ್ಕಾಗಿ ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರ್ ಕಚೇರಿಯ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು.
ಚಿತ್ರದುರ್ಗ ತಾಲ್ಲೂಕು ಕಚೇರಿ ದೂರವಾಣಿ ಸಂಖ್ಯೆ 08194-222416, ಚಳ್ಳಕೆರೆ ತಾಲ್ಲೂಕು ಕಚೇರಿ 08195-250648, ಹಿರಿಯೂರು ತಾಲ್ಲೂಕು ಕಚೇರಿ 08193-263226, 263091, ಹೊಳಲ್ಕೆರೆ ತಾಲ್ಲೂಕು ಕಚೇರಿ 08191-275062, ಹೊಸದುರ್ಗ ತಾಲ್ಲೂಕು ಕಚೇರಿ 08199-230224 ಹಾಗೂ ಮೊಳಕಾಲ್ಮುರು ತಾಲ್ಲೂಕು ಕಚೇರಿ ದೂರವಾಣಿ ಸಂಖ್ಯೆ 08198-229234 ಗೆ ಕರೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.