ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಹೊಳಲ್ಕೆರೆ: ಕ್ಷೇತ್ರಾದ್ಯಂತ ಪ್ರತಿ ಮನೆ ಮನೆಗೆ ಶುದ್ದ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಹೇಳಿದರು.
ತಾಲ್ಲೂಕಿನ ಬ್ರಹ್ಮಪುರ (ದಗ್ಗೆ) ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರದಿಂದ ನೇರವಾಗಿ ನೀರು ತಂದು ಹೊಳಲ್ಕೆರೆ ತಾಲ್ಲೂಕಿನಾದ್ಯಂತ ಎಲ್ಲಾ ಹಳ್ಳಿಗಳಲ್ಲಿ ಪ್ರತಿ ಮನೆಗೆ ಶುದ್ದ ಕುಡಿಯುವ ನೀರು ಪೂರೈಕೆ ಮಾಡಲಾಗುವುದು.
ತಾಳ್ಯ ಸಮೀಪ ಘಟ್ಟಿಹೊಸಹಳ್ಳಿ ಗುಡ್ಡದ ಮೇಲೆ ಎಪ್ಪತ್ತು ಕೋಟಿ ರೂ.ವೆಚ್ಚದಲ್ಲಿ ಫಿಲ್ಟರ್ ಅಳವಡಿಸಲಾಗಿದೆ. ಇನ್ನೆರಡು ಮೂರು ತಿಂಗಳಲ್ಲಿ ನೀರು ಸರಬರಾಜಾಗಲಿದೆ. ಕ್ಷೇತ್ರಾದ್ಯಂತ ಎಲ್ಲಾ ಕಡೆ ಸಿ.ಸಿ.ರಸ್ತೆ, ಶಾಲಾ-ಕಾಲೇಜು, ಆಸ್ಪತ್ರೆ, ಕಂದಾಯ ಭವನಗಳನ್ನು ನಿರ್ಮಾಣ ಮಾಡಲಾಗಿದೆ. ಜನ ಕೇಳಲಿ ಬಿಡಲಿ ಎಲ್ಲೆಲ್ಲಿ ಏನೇನು ಸಮಸ್ಯೆಗಳಿದೆ ಎನ್ನುವುದನ್ನು ತಿಳಿದುಕೊಂಡು ಕ್ಷೇತ್ರದ ಅಭಿವೃದ್ದಿಗೆ ಹಗಲು-ರಾತ್ರಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆಂದು ತಿಳಿಸಿದರು.
ಬ್ರಹ್ಮಪುರ ಗ್ರಾಮದ ಹಾಳೂರಿನ ಸಮೀಪ ಸುಸಜ್ಜಿತ ಸಿ.ಸಿ.ರಸ್ತೆ, ಬಾಕ್ಸ್ ಚರಂಡಿ, ಪಾರ್ಕ್, ಓವರ್ಹೆಡ್ ಟ್ಯಾಂಕ್, ಸ್ಮಶಾನ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಉತ್ತಮ ದರ್ಜೆಯ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು. ಪ್ರತಿ ಫಲಾನುಭವಿಗೆ ಮನೆ ನಿರ್ಮಿಸಿಕೊಳ್ಳಲು ಸರ್ಕಾರದಿಂದ ಐದು ಲಕ್ಷ ರೂ.ಗಳನ್ನು ನೀಡಲಾಗುವುದು ಎಂದರು.
ಬಿಜೆಪಿ.ಜಿಲ್ಲಾ ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ಪಿ.ಡಿ.ಓ.ಸಿದ್ದರಾಮಪ್ಪ, ಎ.ಪಿ.ಎಂ.ಸಿ.ಮಾಜಿ ಅಧ್ಯಕ್ಷ ಅಂಕಳಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪರಮೇಶ್ವರಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಶೇಖರಪ್ಪ, ಬೋರೇನಹಳ್ಳಿ ಅಜ್ಜಪ್ಪ, ಗ್ರಾಮಸ್ಥರಾದ ಚೇರ್ಮನ್ ಮಂಜಪ್ಪ, ದಗ್ಗೆ ದೇವೆಂದ್ರಪ್ಪ, ಎಂ.ತಿಪ್ಪೇರುದ್ರಪ್ಪ, ಗೌಡ್ರ ಪರಮೇಶ್ವರಪ್ಪ, ಚೇರ್ಮನ್ ರುದ್ರಪ್ಪ, ಯರಗುಂಟಪ್ಪ, ಮುರುಗೇಂದ್ರಪ್ಪ, ಸಿದ್ದಮ್ಮ, ಎಚ್.ಮಹಾಂತೇಶ್ವರಪ್ಪ, ಮಧು, ಸಿ.ದ್ಯಾಮಪ್ಪ, ಶಾಂತಮೂರ್ತಿ, ದಗ್ಗೆ, ಪಿ.ಡಿ.ಮಂಜು, ಭೈರೇಶ್ ಸೇರಿದಂತೆ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.
ಬ್ರಹ್ಮಪುರ ಗ್ರಾಮದಲ್ಲಿ ಬಸವೇಶ್ವರಸ್ವಾಮಿಯ ಜಾತ್ರೆ ಅಂಗವಾಗಿ ವೀರಭದ್ರಸ್ವಾಮಿಯ ಕೆಂಡಾರ್ಚನೆ ಶ್ರದ್ದಾ ಭಕ್ತಿಯಿಂದ ನಡೆಯಿತು.
ಸುತ್ತಮುತ್ತಲಿನ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಜಾತ್ರೆಯಲ್ಲಿ ಭಾಗವಹಿಸಿ ಸ್ವಾಮಿಗೆ ಭಕ್ತಿ ಸಮರ್ಪಿಸಿದರು.
ದೇವಸ್ಥಾನವನ್ನು ವಿವಿಧ ಬಗೆಯ ಹೂವು ಹಾರ ಹಾಗೂ ತಳಿರು ತೋರಣ, ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು.