10 ಹಾಗೂ 12ನೇ ತರಗತಿ ಸಿ.ಬಿ.ಎಸ್.ಇ ಪರೀಕ್ಷೆ: ನಿಷೇಧಾಜ್ಞೆ ಜಾರಿ : ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಆದೇಶ

1 Min Read

 

ಮಾಹಿತಿ ಮತ್ತು ಫೋಟೋ ಕೃಪೆ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಫೆ.15) :  ಭಾರತ ಸರ್ಕಾರ ಶಿಕ್ಷಣ ಸಚಿವಾಲಯದ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜ್ಯುಕೇಷನ್ (ಸಿ.ಬಿ.ಎಸ್.ಇ) ಅಡಿಯಲ್ಲಿ ಬರುವ 10 ಹಾಗೂ 12ನೇ ತರಗತಿ ಬೋರ್ಡ್ ಪರೀಕ್ಷೆಗಳು ಫೆ.15 ರಿಂದ ಏ.5ರ ವರೆಗೆ ನಡೆಯಲಿದ್ದು,  ಪರೀಕ್ಷಾ ಕೇಂದ್ರಗಳಲ್ಲಿನ ಅವ್ಯವಹಾರಗಳನ್ನು ತಡೆಗಟ್ಟಲು ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತ ಸಿಆರ್‍ಪಿಸಿ ಕಲಂ 144 ರಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಆದೇಶಿಸಿದ್ದಾರೆ.

ಪರೀಕ್ಷೆ ಜರುಗುವ ಚಿತ್ರದುರ್ಗ ನಗರದ ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಎಸ್.ಆರ್.ಎಸ್ ಹೆರಿಟೇಜ್ ಸ್ಕೂಲ್, ಹಿರಿಯೂರಿನ ಗಂಗಾ ಸೆಂಟ್ರಲ್ ಸ್ಕೂಲ್, ಹೊಸದುರ್ಗ ತಾಲೂಕಿನ ಅರಳಿಹಳ್ಳಿ ಆಕ್ಸ್‍ಫರ್ಡ್ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್, ಹೊಸದುರ್ಗ ನಿಜಲಿಂಗಪ್ಪ ಇಂಟರ್ ನ್ಯಾಷನಲ್ ಸ್ಕೂಲ್, ಹಿರಿಯೂರು ತಾಲ್ಲೂಕು ಉಡುವಳ್ಳಿ ಜವಹಾರ್ ನವೋದಯ ವಿದ್ಯಾಲಯ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ಪ್ರದೇಶವನ್ನು ಫೆ.15 ರಿಂದ ಏ.05 ವರೆಗೆ ಸೆಕ್ಷನ್ 144 ಜಾರಿಗೊಳಿಸಲಾಗಿದೆ.

ಪರೀಕ್ಷೆಗಳನ್ನು ಸುಗಮ ನ್ಯಾಯಯುತ ಮತ್ತು ನೈತಿಕವಾಗಿ ನಡೆಸಲು ಪರೀಕ್ಷಾ ಕೇಂದ್ರದ ಸುತ್ತಮುತ್ತ ಸಾರ್ವಜನಿಕರು ಹಾಗೂ ಪರೀಕ್ಷೆಗೆ ಸಂಬಂಧವಿಲ್ಲದವರು ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಬಾರದು.

ಪರೀಕ್ಷೆ ನಡೆಯುವ ಎಲ್ಲಾ ಕೇಂದ್ರಗಳ ವ್ಯಾಪ್ತಿಯಲ್ಲಿನ ಜೆರಾಕ್ಸ್ ಅಂಗಡಿ, ಹಾಗೂ ಕಂಪ್ಯೂಟರ್ ಇಂಟರ್ನೆಟ್ ಕೇಂದ್ರಗಳನ್ನು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5.30 ವರೆಗೆ ಮುಚ್ಚುವಂತೆ ಮತ್ತು ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ವೈರ್‍ಲೆಸ್, ಕ್ಯಾಲುಕಲೇಟರ್, ಲಾಗ್‍ಟೇಬಲ್ಸ್, ಮೊಬೈಲ್ ಫೋನ್‍ಗಳನ್ನು ಮತ್ತಿತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ಪರೀಕ್ಷಾ ಕೇಂದ್ರಕ್ಕೆ ತರದಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಆದೇಶ ಹೊರಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *