ಬೆಂಗಳೂರು: ಚುನಾವಣೆ ಸಮೀಪಿಸುತ್ತಿರುವಾಗಲೇ ಬಿಜೆಪಿಯ ಒಂದೊಂದೆ ವಿಚಾರವನ್ನು ತೆಗೆದು ಕಾಂಗ್ರೆಸ್ ಪಕ್ಷ ಕಿಡಿಕಾರುತ್ತಿದೆ. 40% ಕಮಿಷನ್ ಸರ್ಕಾರ ಎಂದು ಈಗಾಗಲೇ ಅಭಿಯಾನ ಶುರು ಮಾಡಿದೆ, ಪೇಸಿಎಂ ಅಭಿಯಾನದಿಂದ ದೊಡ್ಡ ಮಟ್ಟಕ್ಕೆ ಕಿಡಿ ಹಚ್ಚಿತ್ತು. ಇದೀಗ ಟೆಂಡರ್ ದಂಧೆ ಬಗ್ಗೆ ಕಾಂಗ್ರೆಸ್, ಬಿಜೆಪಿ ಮೇಲೆ ಹೌಹಾರಿದೆ.
ಇಂದು ಬೆಳಗ್ಗೆಯೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನೆಯಲ್ಲಿ ಸುದ್ದಿಗೋಷ್ಟಿ ನಡೆಸಿದ ಕಾಂಗ್ರೆಸ್ ನಾಯಕರು, ಬಿಜೆಪಿಯ ವಿರುದ್ಧ ಹಲವು ದಾಖಲೆಗಳನ್ನು ಹೊರ ಹಾಕಿದ್ದಾರೆ. ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಅಸಮಾಧಾನ ಇರುವವರು ಟೆಂಡರ್ ಅನುಮತಿ ಪಡೆದುಕೊಳ್ಳುತ್ತಿದ್ದಾರೆ. ತರಾತುರಿಯಲ್ಲಿ ಹಣ ಮಾಡಲು ಅನುಮತಿ ನೀಡಲಾಗುತ್ತಿದೆ. ಕಮಿಷನ್ ಹೊಡೆಯುವುದಕ್ಕೆ ಹೀಗೆ ಮಾಡುತ್ತಿದ್ದಾರೆ.
ಇದು ಕೂಡ 40% ಮುಂದುವರೆದ ಭಾಗವಾಗಿದೆ. ಇದೆಲ್ಲಾ ಜನರ ತೆರಿಗೆ ಹಣ. ಹಾಳಾಗುವುದಕ್ಕೆ ನಾವೂ ಬಿಡುವುದಿಲ್ಲ. ಅದನ್ನು ರಕ್ಷಣೆ ಮಾಡುವ ಜವಬ್ದಾರಿ ನಮ್ಮದು. ಟೆಂಡರ್ ಹಣವನ್ನು ಹೆಚ್ಚು ಮಾಡಿದ್ದಾರೆ. ಯಾರೂ ಕಮಿಷನ್ ಹೆಚ್ಚಾಗಿ ನೀಡುತ್ತಾರೋ ಅವರಿಗೆ ಟೆಂಡರ್ ನೀಡಲಾಗುತ್ತಿದೆ. ಇದಕ್ಕಾಗಿಯೇ ಸಿಎಂ ಕಚೇರಿಯಲ್ಲಿ ಒಬ್ಬನನ್ನು ಇಡಲಾಗಿದೆ. ನಾವೂ ಇಷ್ಟಕ್ಕೆ ಸುಮ್ಮನೆ ಕೂರುವುದಿಲ್ಲ. ನ್ಯಾಯಾಲಯದ ಮೊರೆ ಹೋಗುತ್ತೇವೆ. ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದಿದ್ದಾರೆ.