ಮಂಡ್ಯ: ಬೆಳೆಯನ್ನು ತನ್ನ ಮಗುವಿನಂತೆಯೇ ಕಾಪಾಡಿಕೊಳ್ಳುತ್ತಾನೆ ರೈತ. ಉಳುಮೆ ಮಾಡುವುದಕ್ಕೆ ಪಟ್ಟ ಶ್ರಮ, ಕಷ್ಟವೆಲ್ಲ ಬೆಳೆ ಕೈಗೆ ಸಿಗುತ್ತೆ ಎಂದು ಗೊತ್ತಾದ ಮೇಲೆ ಮರೆತೆ ಹೋಗುತ್ತೆ. ಆದ್ರೆ ಅದೆ ಬೆಳೆ ನಾಶವಾದಾಗ ರೈತ ಜೀವಂತ ಶವವಾಗಿ ಬಿಡುತ್ತಾನೆ. ಮಂಡ್ಯ ಜಿಲ್ಲೆಯಲ್ಲಿ ಬೆಳೆ ಉಳಿಸಿಲು ಹೋಗಿ ರೈತನೇ ಸಜೀವ ದಹನವಾಗಿರುವ ಘಟನೆ ನಡೆದಿದೆ.
60 ವರ್ಷದ ಮಹಾಲಿಂಗಯ್ಯ ಸಾವನ್ನಪ್ಪಿದ ರೈತ. ಮೃತ ರೈತನ ಜಮೀನಿನಲ್ಲಿ ಅಂದ್ರೆ ಮಂಡ್ಯ ತಾಲೂಕಿನ ಮೊಡಚಾಕನಹಳ್ಳಿಯಲ್ಲಿ ಸುಮಾರು 20ಕ್ಕೂ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿತ್ತು. ಸಂಪಾಗಿ ಬೆಳೆದಿದ್ದ ಕಬ್ಬಿನ ಗದ್ದೆಗೆ ಇದ್ದಕ್ಕಿದ್ದ ಹಾಗೇ ಬೆಂಕಿ ಬಿದ್ದಿದೆ. ಈ ಬೆಂಕಿ ಕಂಡು ಗಾಬರಿಯಾದ ರೈತ, ಬೆಂಕಿ ಹಾರಿಸಲು ತಾನೇ ಮುಂದಾಗಿದ್ದಾನೆ. ಆದರೆ ಈ ವೇಳೆ ರೈತನಿಗೆ ಬೆಂಕಿ ತಗುಲಿ ಸಾವನ್ನಪ್ಪಿದ್ದಾನೆ.
ನೋಡ ನೋಡುತ್ತಿದ್ದಂತೆ ಬೆಂಕಿ ಅಕ್ಕಪಕ್ಕದ ಜಮೀನುಗಳಿಗೂ ಹೊತ್ತಿಕೊಳ್ಳುತ್ತಾ ಹೋಗಿದೆ. ದಟ್ಟವಾದ ಹೊಗೆ ಕಂಡು ಊರಿನ ಗ್ರಾಮಸ್ಥರೆಲ್ಲಾ ಜಮೀನಿನತ್ತ ಓಡಿ ಬಂದಿದ್ದಾರೆ. ಹಲವರ ಜಮೀನಿನ ಕಬ್ಬು ಬೆಳೆ ಬೆಂಕಿಗಾಹುತಿಯಾಗಿದೆ. ಮಹಾಲಿಂಗಯ್ಯ ಸಜೀವ ದಹನವಾಗಿರುವ ಘಟನೆಯೂ ಬೆಳಕಿಗೆ ಬಂದಿದೆ. ಈ ಸಂಬಂಧ ಶಿವಳ್ಳಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.