ಚಿತ್ರದುರ್ಗ(ಫೆ.11): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗದ ವತಿಯಿಂದ ಮೊಳಕಾಲ್ಮುರು ನೂತನ ಬಸ್ ಘಟಕ ನಿರ್ಮಾಣಕ್ಕೆ ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಶನಿವಾರ ಭೂಮಿಪೂಜೆ ನೆರವೇರಿಸಿದರು.
ಮೊಳಕಾಲ್ಮುರು ರಾಯಾಪುರ ಗೇಟ್ ಸಮೀಪ 6 ಎಕರೆ ವಿಸ್ತೀರ್ಣದಲ್ಲಿ ರೂ.8 ಕೋಟಿ ವೆಚ್ವದಲ್ಲಿ ನೂತನ ಬಸ್ ಘಟಕ ನಿರ್ಮಾಣವಾಗಲಿದ್ದು, ಬಸ್ ಘಟಕ ನಿರ್ಮಾಣಕ್ಕೆ ಸಚಿವರು ಶಂಕುಸ್ಥಾಪನಾ ಅಡಿಗಲ್ಲು ಹಾಗೂ ಭೂಮಿಪೂಜೆ ಮಾಡಿದರು.
ಮೊಳಕಾಲ್ಮುರು ಭಾಗದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಹಳ್ಳಿಗಳಿಂದ ಪಟ್ಟಣಗಳಿಗೆ ಕೆಲಸಕ್ಕೆ ಹೋಗುವ ಕಾರ್ಮಿಕರಿಗೆ ಹಾಗೂ ಇತರೆ ನೌಕರರಿಗೆ ಇನ್ನು ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿಸುವ ದೃಷ್ಟಿಯಿಂದ ರಾಯಪುರ ಗ್ರಾಮದ ಸರ್ವೆ ಸಂ.14 ರಲ್ಲಿನ 6 ಎಕರೆ ಜಾಗವನ್ನು ಕಂದಾಯ ಇಲಾಖೆಯಿಂದ ರೂ. 2730850/- ಗಳಿಗೆ ಖರೀದಿಸಿ ಬಸ್ ಘಟಕ ನಿರ್ಮಿಸಲು ಉದ್ದೇಶಿಸಲಾಗಿದೆ.
ನೂತನ ಬಸ್ ಘಟಕದ ವೈಶಿಷ್ಟ್ಯಗಳು: ನೂತನ ಬಸ್ ಘಟಕದಲ್ಲಿ ಆಡಳಿತ ಕಚೇರಿ, ಬಸ್ಸುಗಳ ನಿರ್ವಹಣಾ, ಪರಿವೀಕ್ಷಣಾ ಅಂಕಣ, ತ್ಯಾಜ್ಯ ನೀರಿನ ಸಂಸ್ಕರಣಾ ಘಟಕ, ಭದ್ರತಾ ಮತ್ತು ಸಂಚಾರ ಶಾಖೆ, ವಿದ್ಯುತ್ ಚಾಲಿತ ವಾಹನಗಳ ಚಾಜಿರ್ಂಗ್ ಸ್ಟೇಷನ್, ಮಹಿಳಾ ಸಿಬ್ಬಂದಿ ವಿಶ್ರಾಂತಿ ಗೃಹ, ಪುರುಷರ ವಿಶ್ರಾಂತಿ ಗೃಹದ ಸೌಲಭ್ಯ ಇರಲಿದೆ.
ಈ ಸಂದರ್ಭದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮ ಉಪಾಧ್ಯಕ್ಷ ಮೋಹನ್ ಮೆಣಸಿನಕಾಯಿ, ಮೊಳಕಾಲ್ಮುರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಟಿ.ರವಿಕುಮಾರ್, ರಾಯಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಬಿ.ಪಾಪಣ್ಣ, ರಾಜ್ಯ ರಸ್ತೆ ಸಾರಿಗೆ ನಿಗಮ ಮಂಡಳಿ ನಿರ್ದೇಶಕರಾದ ಪಿ.ರುದ್ರೇಶ್, ಆರುಂಡಿ ನಾಗರಾಜ್, ರಾಜು ವಿಠಲಸ ಜರತಾರಘರ, ರಾಜ್ಯ ರಸ್ತೆ ಸಾರಿಗೆ ನಿಗಮ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್,ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಎನ್.ಹೆಬ್ಬಾಳ್ ಇದ್ದರು.