ಕಾಂತಾರ ಸಿನಿಮಾವನ್ನು ಇಡೀ ದೇಶವೇ ಕೊಂಡಾಡುವಂತೆ ಆಗಿದೆ. ಅದರಲ್ಲೂ 100 ದಿನಗಳ ಕಾಲ ಥಿಯೇಟರ್ನಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ. ಆ ಖುಷಿಯನ್ನು ಇತ್ತಿಚೆಗೆ ಇಡೀ ಚಿತ್ರತಂಡ ಸೆಲೆಬ್ರೇಷನ್ ಮಾಡಿಕೊಂಡಿದೆ. ಕಾಂತಾರ ಸಿನಿಮಾದಲ್ಲಿ ವರಾಹ ರೂಪಂ ಹಾಡು ವಿವಾದಕ್ಕೆ ಸಿಲುಕಿದ್ದು ಗೊತ್ತೆ ಇದೆ. ಎರಡೆರಡು ಕಡೆ ಈ ಗ ಹಾಡಿನ ಸಂಬಂಧ ಕೇಸ್ ದಾಖಲಾಗಿತ್ತು. ಬಳಿಕ ಒಂದು ಕಡೆ ಕಾಂತಾರ ಸಿನಿಮಾ ತಂಡಕ್ಕೆ ಯಶಸ್ಸು ಸಿಕ್ಕಿತ್ತು. ಇದೀಗ ಕೇರಳ ಹೈಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದ್ದು, ಈ ಸಂಬಂಧ ವಿಜಯ್ ಕಿರಗಂದೂರು ಹಾಗೂ ರಿಷಬ್ ಶೆಟ್ಟಿಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ.
5 ವರ್ಷಗಳ ಹಿಂದೆ ರಿಲೀಸ್ ಆದ ನವರಸಂ ಎಂಬ ಇನ್ನೊಂದು ಹಾಡಿನ ಕಾಪಿ ವರಾಹ ರೂಪಂ ಹಾಡು ಎಂಬ ಆರೋಪದ ಜೊತೆಗೆ ದೂರು ದಾಖಲಿಸಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿರುವ ಕೇರಳ ಹೈಕೋರ್ಟ್, ಕಾಪಿರೈಟ್ಸ್ ಪ್ರಕರಣದಲ್ಲಿ ಕೋರ್ಟ್ ನಿಂದ ಮಧ್ಯಂತರ ಹಾಗೂ ಅಂತಿಮ ಆದೇಶ ಬರುವ ತನಕ ವರಾಹ ರೂಪಂ ಹಾಡನ್ನು ಬಳಸುವಂತಿಲ್ಲ. ಈ ಪ್ರಕರಣದಲ್ಲಿ ಮರುವಿಚಾರಣೆ ಕೋರಲು ಅರ್ಜಿದಾರರಿಗೆ ಅವಕಾಶವಿದೆ. ತೈಕುಡಂ ಸಂಸ್ಥೆ ತ್ವರಿತ ನಿರ್ಧಾರ ಪಡೆಯುವುದಕ್ಕೆ ಸೂಕ್ತ ಸಿವಿಲ್ ನ್ಯಾಯಾಲಯಕ್ಕೆ ಹೋಗಬಹುದು ಎಂದಿದೆ.
ಇನ್ನು ಕಾಂತಾರ ಸಿನಿಮಾ ತಂಡದ ವಕೀಲರು ವಾದ ಮಾಡಿದ್ದು, ವರಾಹಂ ಹಾಡು ಸ್ವತಂತ್ರವಾಗಿ ಸೃಷ್ಟಿಯಾಗಿದೆ. ನವರಸಂ ಹಾಡಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಆ ಹಾಡಿಗೆ ಹೋಲುತ್ತದೆ ಎಂದು ಯಾವುದೇ ಸಾಕ್ಷಿಗಳನ್ನು ಕಲೆ ಹಾಕಿಲ್ಲ. ಬದಲಾಗಿ ಸಿನಿಮಾ ನೋಡಿದಾಗ ಸಾಮ್ಯತೆಯನ್ನಷ್ಟೇ ಗುರತಿಸಿದ್ದಾರೆ ಎಂದು ವಾದ ಮಂಡಿಸಿ, ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.